Home ಕೋಮುವಾದ ಜಾಗತಿಕ ಚರ್ಚೆಗೆ ಗ್ರಾಸವಾದ ಹಿಂದುತ್ವ ಮೂಲಭೂತವಾದ; ಐಫೆಲ್ ಟವರ್‌ ವೀಕ್ಷಣೆ ವೇಳೆ ಮಹಿಳಾ ಸಿಬ್ಬಂದಿಯನ್ನು ದೂರವಿರಿಸಿದ...

ಜಾಗತಿಕ ಚರ್ಚೆಗೆ ಗ್ರಾಸವಾದ ಹಿಂದುತ್ವ ಮೂಲಭೂತವಾದ; ಐಫೆಲ್ ಟವರ್‌ ವೀಕ್ಷಣೆ ವೇಳೆ ಮಹಿಳಾ ಸಿಬ್ಬಂದಿಯನ್ನು ದೂರವಿರಿಸಿದ ಹಿಂದುತ್ವ ಸಂಘಟನೆ, ಆಕ್ರೋಶ

0

ಪ್ಯಾರಿಸ್: ಹಿಂದೂ ಧಾರ್ಮಿಕ ಸಂಘಟನೆಯ ನಿಯೋಗವೊಂದು ಭೇಟಿ ನೀಡಿದ ಸಂದರ್ಭದಲ್ಲಿ ಮಹಿಳಾ ಸಿಬ್ಬಂದಿಯನ್ನು ಕೆಲಸದ ಸ್ಥಳಗಳಿಂದ ದೂರ ಸರಿಸಲಾಗಿದೆ ಎಂಬ ಆರೋಪ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಪ್ಯಾರಿಸ್‌ನ ಐತಿಹಾಸಿಕ ಐಫೆಲ್ ಟವರ್ ಸೋಮವಾರ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದೆ. ಸಿಬ್ಬಂದಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪ್ರವಾಸಿಗರ ಪ್ರವೇಶಕ್ಕೂ ಅಡ್ಡಿಯಾಯಿತು. ಘಟನೆ ಕುರಿತು ಪ್ಯಾರಿಸ್ ನಗರಾಡಳಿತ ತನಿಖೆಗೆ ಮುಂದಾಗಿದೆ.

ಬೋಚಾಸನ್ವಾಸಿ ಅಕ್ಷರ್ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (BAPS)ಗೆ ಸಂಬಂಧಿಸಿದ ಸುಮಾರು 100 ಮಂದಿಯ ನಿಯೋಗ ಶನಿವಾರ ಐಫೆಲ್ ಟವರ್‌ಗೆ ಖಾಸಗಿ ಭೇಟಿ ನೀಡಿತ್ತು. ಈ ವೇಳೆ ನಿಯೋಗದ ಸದಸ್ಯರು ಮಹಿಳೆಯರೊಂದಿಗೆ ಸಂವಹನ ನಡೆಸದಂತೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ. ಅದರಂತೆ ಕೆಲವು ಮಹಿಳಾ ಸಿಬ್ಬಂದಿಯನ್ನು ತಮ್ಮ ಕಾರ್ಯಸ್ಥಳಗಳಿಂದ ತೆರವುಗೊಳಿಸಿ, ಅವರ ಸ್ಥಾನದಲ್ಲಿ ಪುರುಷ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂಬುದು ಸಿಬ್ಬಂದಿ ಸಂಘಟನೆಗಳ ಆರೋಪವಾಗಿದೆ.

ಈ ಕ್ರಮವನ್ನು ಮಹಿಳಾ ಉದ್ಯೋಗಿಗಳ ಘನತೆ ಹಾಗೂ ಸಮಾನತೆಯ ಹಕ್ಕಿಗೆ ಧಕ್ಕೆ ಎಂದು ಸಿಬ್ಬಂದಿ ಆಕ್ಷೇಪಿಸಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಉದ್ಯೋಗಿಗಳು ಸೋಮವಾರ ಕೆಲಸದಿಂದ ಹಿಂದೆ ಸರಿದು ಪ್ರತಿಭಟನೆ ನಡೆಸಿದರು. ಬಳಿಕ ಐಫೆಲ್ ಟವರ್ ಪ್ರವಾಸಿಗರಿಗೆ ಮುಚ್ಚಲಾಯಿತು.

ಐಫೆಲ್ ಟವರ್ ನಿರ್ವಹಣಾ ಸಂಸ್ಥೆ SETE ಕೂಡ ವಿವಾದಿತ ಬೆಳವಣಿಗೆಯನ್ನು ಒಪ್ಪಿಕೊಂಡಿದ್ದು, ಮಹಿಳೆಯರೊಂದಿಗೆ ಸಂಪರ್ಕವನ್ನು ಸೀಮಿತಗೊಳಿಸುವಂತೆ ನಿಯೋಗದಿಂದ ಬಂದಿದ್ದ ಮನವಿಯನ್ನು ಒಪ್ಪಿಕೊಳ್ಳಬಾರದಿತ್ತು ಎಂದು ಹೇಳಿದೆ. ಸಿಬ್ಬಂದಿಗೆ ಸಂಸ್ಥೆಯ ಪರವಾಗಿ ಕ್ಷಮೆಯಾಚನೆಯನ್ನೂ ಸಲ್ಲಿಸಲಾಗಿದೆ.

BAPS ಸಂಸ್ಥೆಯಿಂದ ವಿಷಾದ
ವಿವಾದದ ಬೆನ್ನಲ್ಲೇ BAPS ಪ್ಯಾರಿಸ್ ದೇವಾಲಯದ ಆಡಳಿತ ಪ್ರತಿಕ್ರಿಯಿಸಿದ್ದು, ಘಟನೆಯಿಂದ ಯಾರಿಗಾದರೂ ನೋವು ಅಥವಾ ಅನಾನುಕೂಲ ಉಂಟಾಗಿದ್ದರೆ ವಿಷಾದಿಸುವುದಾಗಿ ತಿಳಿಸಿದೆ. ದೊಡ್ಡ ಸಂಖ್ಯೆಯ ನಿಯೋಗದಿಂದಾಗಿ ಇತರ ಪ್ರವಾಸಿಗರಿಗೆ ತೊಂದರೆಯಾಗದಂತೆ ಭೇಟಿಯನ್ನು ಮುಂಚಿತವಾಗಿ ವ್ಯವಸ್ಥೆ ಮಾಡಲಾಗಿತ್ತು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಯಾರನ್ನೂ ಐಫೆಲ್ ಟವರ್ ಪ್ರವೇಶದಿಂದ ತಡೆಯುವ ಉದ್ದೇಶ ಇರಲಿಲ್ಲ ಎಂದೂ ಹೇಳಿದೆ.

ಫ್ರಾನ್ಸ್‌ನಲ್ಲಿ ರಾಜಕೀಯ ಆಕ್ರೋಶ
ಘಟನೆಗೆ ಪ್ಯಾರಿಸ್ ಮೇಯರ್ ಇಮ್ಯಾನುಯೆಲ್ ಗ್ರೆಗ್ವಾರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಹಿಳೆ ಮತ್ತು ಪುರುಷರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಸಮಾನ ಹಕ್ಕು ಹಾಗೂ ಸ್ವಾತಂತ್ರ್ಯ ಇರಬೇಕು ಎಂಬುದು ಫ್ರಾನ್ಸ್‌ನ ಮೂಲ ಮೌಲ್ಯಗಳಾಗಿದ್ದು, ಮಹಿಳಾ ಸಿಬ್ಬಂದಿಯನ್ನು ಪಕ್ಕಕ್ಕೆ ಸರಿಸುವಂತಹ ವ್ಯವಸ್ಥೆ ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸುವುದಾಗಿ ಘೋಷಿಸಿದ್ದಾರೆ.

ರಾಷ್ಟ್ರೀಯ ಅಸೆಂಬ್ಲಿ ಅಧ್ಯಕ್ಷೆ ಯಾಯೆಲ್ ಬ್ರೌನ್-ಪಿವೆ ಕೂಡ ಘಟನೆಯನ್ನು ಖಂಡಿಸಿದ್ದು, ವಿದೇಶಿ ಪ್ರವಾಸಿಗರ ಬೇಡಿಕೆಗಳನ್ನು ಪೂರೈಸಲು ಮಹಿಳೆಯರನ್ನು ಸಾರ್ವಜನಿಕ ಜೀವನದಲ್ಲಿ ಹಿಂದೆ ಸರಿಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ದೇವಾಲಯ ಉದ್ಘಾಟನೆಯ ಬೆನ್ನಲ್ಲೇ ವಿವಾದ
ಫ್ರಾನ್ಸ್‌ನಲ್ಲಿ BAPS ಸಂಸ್ಥೆಯ ಪ್ರಮುಖ ಹಿಂದೂ ದೇವಾಲಯ ಉದ್ಘಾಟನೆಯ ಬೆನ್ನಲ್ಲೇ ಈ ಘಟನೆ ನಡೆದಿದೆ. ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಭಾರತ–ಫ್ರಾನ್ಸ್ ನಡುವಿನ ಸಂಬಂಧಗಳು ಮತ್ತಷ್ಟು ಬಲಗೊಳ್ಳುತ್ತಿರುವುದನ್ನು ಉಲ್ಲೇಖಿಸಿದ್ದರು.

ಭಾರತ ಮತ್ತು ಫ್ರಾನ್ಸ್ ನಡುವಿನ ಸಾಂಸ್ಕೃತಿಕ ಹಾಗೂ ರಾಜತಾಂತ್ರಿಕ ಬಾಂಧವ್ಯವನ್ನು ಶ್ಲಾಘಿಸಿದ್ದ ಮೋದಿ, ಹೊಸ ಸ್ವಾಮಿನಾರಾಯಣ ದೇವಾಲಯವು ಉಭಯ ದೇಶಗಳ ನಡುವಿನ ಸ್ನೇಹ, ಸಹಕಾರ ಮತ್ತು ಭವಿಷ್ಯದ ಅವಕಾಶಗಳ ಸಂಕೇತವಾಗಿ ಉಳಿಯಲಿ ಎಂಬ ಆಶಯ ವ್ಯಕ್ತಪಡಿಸಿದ್ದರು.

ಆದರೆ ದೇವಾಲಯ ಉದ್ಘಾಟನೆಯ ಕೆಲವೇ ದಿನಗಳಲ್ಲಿ ಐಫೆಲ್ ಟವರ್‌ನಲ್ಲಿ ನಡೆದಿರುವ ಮಹಿಳಾ ಸಿಬ್ಬಂದಿ ವಿವಾದ ಇದೀಗ ಧಾರ್ಮಿಕ ಆಚರಣೆಗಳು, ಸಾರ್ವಜನಿಕ ಸಂಸ್ಥೆಗಳ ನಿಯಮಗಳು ಹಾಗೂ ಮಹಿಳಾ ಸಮಾನತೆಯ ಹಕ್ಕುಗಳ ಕುರಿತು ಫ್ರಾನ್ಸ್‌ನಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

You cannot copy content of this page

Exit mobile version