ದೆಹಲಿಯ ರಸ್ತೆಗಳನ್ನು ಮುಚ್ಚಬಹುದು, ಜನರ ಪ್ರಶ್ನೆಗಳಿಗೆ ಬೀಗ ಹಾಕಲು ಸಾಧ್ಯವಿಲ್ಲ: ಮೋದಿ, ಶಾ ವಿರುದ್ಧ ಬಿ.ಕೆ. ಹರಿಪ್ರಸಾದ್ ಗುಡುಗು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಹಾಗೂ ಕೇಂದ್ರ ಚುನಾವಣಾ ಆಯೋಗದ ಧೋರಣೆಯನ್ನು ವಿರೋಧಿಸಿ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿರುವ ಬೃಹತ್ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಸರ್ವಾಧಿಕಾರಿ ಮಾರ್ಗಗಳನ್ನು ಅನುಸರಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

“ದೆಹಲಿಯ ರಸ್ತೆಗಳನ್ನು ಮುಚ್ಚಬಹುದು ಪ್ರಧಾನಿಗಳೇ, ಆದರೆ ಜನರ ಸಾಂವಿಧಾನಿಕ ಪ್ರಶ್ನೆಗಳಿಗೆ ಬೀಗ ಹಾಕಲು ನಿಮ್ಮಿಂದ ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ದನಿಯನ್ನು ಹತ್ತಿಕ್ಕುವ ಪ್ರತಿಯೊಂದು ಹತಾಶ ಪ್ರಯತ್ನವೂ ದೆಹಲಿಯ ಅಧಿಕಾರದ ಗದ್ದುಗೆಯನ್ನೇ ಅಲುಗಾಡಿಸಲಿದೆ,” ಎಂದು ಎಚ್ಚರಿಸಿರುವ ಅವರು, ಕೇಂದ್ರದ ಆಡಳಿತ ವೈಖರಿ ನೋಡಿದರೆ SIR ರದ್ದಾಗುವುದು ಮತ್ತು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ಬಂಧನವಾಗುವುದು ನಿಶ್ಚಿತವೆಂದು ಪ್ರತಿಪಾದಿಸಿದ್ದಾರೆ.

ಪ್ರತಿಭಟನೆ ತಡೆಯಲು ದೆಹಲಿ ಗಡಿಗಳಲ್ಲಿ ಪೊಲೀಸರ ಸರ್ಪಗಾವಲು, ವಿದ್ಯಾರ್ಥಿ-ಯುವಜನ ನಾಯಕರ ಬಂಧನ, ರಾಜಕೀಯ ನಾಯಕರ ಗೃಹಬಂಧನ, ರೈಲು ಸಂಚಾರ ವ್ಯತ್ಯಯ ಮತ್ತು ಧಾರ್ಮಿಕ ಸಂಸ್ಥೆಗಳ ಮೇಲೆ ಒತ್ತಡ ಹೇರುತ್ತಿರುವ ಕ್ರಮಗಳನ್ನು ಅವರು ತೀವ್ರವಾಗಿ ಖಂಡಿಸಿದರು. “ಹಿಂದೆ ರೈತರ ಐತಿಹಾಸಿಕ ಚಳವಳಿಯ ವೇಳೆಯೂ ಇದೇ ರೀತಿ ದೆಹಲಿ ಪ್ರವೇಶ ನಿರ್ಬಂಧಿಸಲಾಗಿತ್ತು. ಆದರೆ ಅನ್ನದಾತರ ಸತತ ಹೋರಾಟದ ಎದುರು ಮಣಿದು ನರೇಂದ್ರ ಮೋದಿ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದು ಮಂಡಿಯೂರಿತ್ತು. ಈಗ ಇತಿಹಾಸ ಮತ್ತೆ ಮರುಕಳಿಸುವ ದಿನ ಬಂದಿದೆ,” ಎಂದು ಅವರು ಎಚ್ಚರಿಕೆ ನೀಡಿದರು.

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ಸರ್ವಾಧಿಕಾರಿ, ಪಕ್ಷಪಾತಿ ಹಾಗೂ ಸಂವಿಧಾನವಿರೋಧಿ ನಡವಳಿಕೆಗಳ ವಿರುದ್ಧ ದೇಶವ್ಯಾಪಿ ಎದ್ದಿರುವ ಅನುಮಾನಗಳಿಗೆ ಕೇಂದ್ರ ಪಾರದರ್ಶಕ ಉತ್ತರ ನೀಡಬೇಕು. ಶಾಂತಿಯುತ ಪ್ರತಿಭಟನೆ ನಡೆಸುವುದು ಸಂವಿಧಾನಬದ್ಧ ಹಕ್ಕಾಗಿದ್ದು, ಅದಕ್ಕೆ ಅನುಮತಿ ನೀಡುವುದು ಸರ್ಕಾರದ ಔದಾರ್ಯವಲ್ಲ ಎಂದಿರುವ ಹರಿಪ್ರಸಾದ್, “ಪ್ರಜಾಪ್ರಭುತ್ವದಲ್ಲಿ ಸರ್ಕಾರ ಜನರನ್ನು ನಿಯಂತ್ರಿಸುವುದಕ್ಕಿಂತ ಜನರಿಗೆ ಉತ್ತರದಾಯಿಯಾಗಿರಬೇಕು ಎಂಬುದನ್ನು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅರ್ಥಮಾಡಿಕೊಳ್ಳಬೇಕು,” ಎಂದು ಆಗ್ರಹಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು