ಕೆಎಸ್‌ಆರ್‌ಟಿಸಿಗೆ ಇಂಧನ ಸಮಸ್ಯೆ ಕುಷ್ಟಗಿ, ಗಂಗಾವತಿಯಲ್ಲಿ – ಬಸ್ ಸಂಚಾರ ಬಂದ್

ಕೊಪ್ಪಳ: ಜಿಲ್ಲೆಯ (Koppal) ಗಂಗಾವತಿ ಹಾಗೂ ಕುಷ್ಟಗಿ ಸಾರಿಗೆ (KSRTC) ಡಿಪೋಗಳಲ್ಲಿ ಇಂಧನ ಕೊರತೆ ತಲೆದೋರಿದ್ದು, ಕಳೆದ ಕೆಲವು ದಿನಗಳಿಂದ ಬಸ್‌ಗಳ ಓಡಾಟದಲ್ಲಿ ವ್ಯತ್ಯಯ ಉಂಟಾಗಿದೆ. ಡೀಸೆಲ್ ಸಿಗದೆ ನೂರಾರು ಬಸ್‌ಗಳು ಡಿಪೋಗಳಲ್ಲೇ ನಿಲ್ಲುವಂತಾಗಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ತೀವ್ರ (BJP Protest) ತೊಂದರೆ ಅನುಭವಿಸುತ್ತಿದ್ದಾರೆ. ನಿತ್ಯದ ಸಂಚಾರಕ್ಕೆ ಸಾಕಷ್ಟು ಪ್ರಮಾಣದ ಡೀಸೆಲ್ ಬೇಕಾಗಿದ್ದರೂ, ಸಕಾಲದಲ್ಲಿ ಇಂಧನ ಪೂರೈಕೆಯಾಗದ ಕಾರಣ ಹಲವು ರೂಟ್‌ಗಳ ಬಸ್‌ಗಳನ್ನು ರದ್ದುಪಡಿಸಲಾಗಿದೆ. ಇದರಿಂದಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಸಾರ್ವಜನಿಕರು ಬಸ್ ನಿಲ್ದಾಣಗಳಲ್ಲಿ ತಾಸುಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನಿವಾರ್ಯವಾಗಿ ಪ್ರಯಾಣಿಕರು ಖಾಸಗಿ ವಾಹನಗಳನ್ನು ಆಶ್ರಯಿಸಿ ಹೆಚ್ಚಿನ ಹಣ ತೆರಬೇಕಾಗಿದೆ.

ಖಾಲಿ ಕೊಡ ಹಿಡಿದು ವಿನೂತನ ಪ್ರತಿಭಟನೆ
ಸಾರಿಗೆ ಸಂಸ್ಥೆಯ ಆರ್ಥಿಕ ಮುಗ್ಗಟ್ಟು ಹಾಗೂ ಇಂಧನ ಬಿಕ್ಕಟ್ಟನ್ನು ಖಂಡಿಸಿ ಕುಷ್ಟಗಿ ಬಸ್ ನಿಲ್ದಾಣದ ಎದುರು ಬಿಜೆಪಿ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಕೈಯಲ್ಲಿ ಖಾಲಿ ಕೊಡ ಹಿಡಿದು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

ಸಮಸ್ಯೆಯನ್ನು ಕೂಡಲೇ ಬಗೆಹರಿಸಿ, ಸ್ಥಗಿತಗೊಂಡಿರುವ ಎಲ್ಲಾ ಬಸ್ ಮಾರ್ಗಗಳನ್ನು ಮರುಪ್ರಾರಂಭಿಸಬೇಕು ಎಂದು ಸ್ಥಳೀಯರು ಮತ್ತು ಪ್ರಯಾಣಿಕರು ಒತ್ತಾಯಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು