ದಾವಣಗೆರೆ: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ನಡೆಯುತ್ತಿರುವ ಬೆನ್ನಲ್ಲೇ ಭಾರತದ ವಿದೇಶಾಂಗ ನೀತಿಯು ಅಸ್ಥಿರಗೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ. ಸೋಮವಾರ ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್‌ನಂತಹ ಹಳೆಯ ಮಿತ್ರ ರಾಷ್ಟ್ರವನ್ನು ಬಿಟ್ಟು ಇಸ್ರೇಲ್ ಪರ ನಿಂತಿರುವುದು ದೊಡ್ಡ ತಪ್ಪು ಎಂದು ಅಭಿಪ್ರಾಯಪಟ್ಟರು.
ಸ್ವಾತಂತ್ರ್ಯದ ನಂತರ ಜವಾಹರಲಾಲ್ ನೆಹರು ಅವರು ರೂಪಿಸಿದ್ದ ‘ಅಲಿಪ್ತ ನೀತಿ’ಯಿಂದಾಗಿ (Non-alignment policy) ಇರಾನ್ ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಿತ್ತು ಮತ್ತು ಕಷ್ಟದ ಕಾಲದಲ್ಲಿ ನೆರವಾಗಿತ್ತು. ಆದರೆ ಪ್ರಸ್ತುತ ಸರ್ಕಾರ ಈ ಇತಿಹಾಸವನ್ನು ಮರೆತಿದೆ. ಇರಾನ್ ಎದುರಿಸುತ್ತಿರುವ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಮೋದಿ ವಿಫಲರಾಗಿದ್ದಾರೆ. ಐದು ರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆ ದೇಶದಲ್ಲಿ ಇಂಧನ ಬೆಲೆಗಳು ಗಗನಕ್ಕೇರಲಿವೆ ಮತ್ತು ಇದರ ಹೊರೆ ಸಾಮಾನ್ಯ ಜನರ ಮೇಲೆ ಬೀಳಲಿದೆ ಎಂದು ಅವರು ಎಚ್ಚರಿಸಿದರು.
ಇದೇ ವೇಳೆ ಬಿಜೆಪಿಯ ಚುನಾವಣಾ ಪ್ರಚಾರದ ಶೈಲಿಯನ್ನು ಟೀಕಿಸಿದ ಹರಿಪ್ರಸಾದ್, “ಮೋದಿ ಅವರು ತಮ್ಮ ಪ್ರಚಾರದಲ್ಲಿ ‘ಕಾಶ್ಮೀರಿ ಫೈಲ್ಸ್’ ಮತ್ತು ‘ಕೇರಳ ಸ್ಟೋರಿ’ಯಂತಹ ಸಿನಿಮಾಗಳನ್ನು ಉಲ್ಲೇಖಿಸುವ ಮೂಲಕ ಅತ್ಯಂತ ಕೆಳಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ದೇಶದ ಇತಿಹಾಸದಲ್ಲಿ ಇಷ್ಟು ಕೆಳಮಟ್ಟಕ್ಕೆ ಇಳಿದ ಮತ್ತೊಬ್ಬ ಪ್ರಧಾನಿಯನ್ನು ನಾವು ನೋಡಿಲ್ಲ,” ಎಂದು ಕಿಡಿಕಾರಿದರು. ಯುಪಿಎ ಸರ್ಕಾರ ತಂದ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಮೋದಿ ಅಕ್ಕಿ ನೀಡುತ್ತಿದ್ದಾರೆ ವಿನಃ ಅವರದೇನೂ ಹೊಸ ಸಾಧನೆಯಿಲ್ಲ, ಹಳೆಯ ಯೋಜನೆಗಳ ಹೆಸರು ಬದಲಾಯಿಸುವುದೇ ಅವರ ಕೆಲಸ ಎಂದು ಲೇವಡಿ ಮಾಡಿದರು.
ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ಅಧಿಕಾರದಲ್ಲಿದ್ದಾಗ ಹಲಾಲ್ ಮತ್ತು ಹಿಜಾಬ್‌ನಂತಹ ವಿವಾದಗಳನ್ನು ಸೃಷ್ಟಿಸಿ ಸಮಾಜದಲ್ಲಿ ಶಾಂತಿ ಕದಡಿದ ಬಿಜೆಪಿ, ಈಗ ಉಪಚುನಾವಣೆಗಾಗಿ ಮುಸ್ಲಿಮರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ಆರೋಪಿಸಿದರು. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ರಾಜಕೀಯದ ಸರಿಯಾದ ತಿಳುವಳಿಕೆ ಇಲ್ಲ, ಅವರು ಇನ್ನೂ ರಾಜಕೀಯದ “ನರ್ಸರಿ” ಹಂತದಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.
