ದಾವಣಗೆರೆ : ಹರಿಹರ ತಾಲೂಕಿನ ಕೊಕ್ಕನೂರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಜಯಪ್ಪ (54) ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ (Crime) ಪ್ರಕರಣಕ್ಕೆ (Tragedy) ಸಂಬಂಧಿಸಿದಂತೆ ಐವರು ಸಹ ಶಿಕ್ಷಕರು ಹಾಗೂ ಬಿಸಿಯೂಟದ ಸಿಬ್ಬಂದಿ ಸೇರಿದಂತೆ ಒಟ್ಟು 10 ಜನರ ವಿರುದ್ಧ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮೃತರ ಪತ್ನಿ ಅಂಜನಮ್ಮ ನೀಡಿದ ಅಧಿಕೃತ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಸಹ ಶಿಕ್ಷಕರಾದ ಶ್ರೀಕಾಂತಚಾರಿ, ವೆಂಕಟೇಶ್, ರಂಜನಿ, ಚೇತನಾ, ಮಹಾಂತೇಶ್ ಗೌಳಿ ಹಾಗೂ ಅಡುಗೆ ಸಹಾಯಕರಾದ ಸುಮಾ, ಚೆನ್ನಮ್ಮ, ರೂಪಾ, ವಿಜಯಮ್ಮ ಸೇರಿದಂತೆ ಸಿಆರ್‌ಪಿ ಮತ್ತು ಬಿಆರ್‌ಪಿ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ.
ಗಂಭೀರ ಆರೋಪ ಮಾಡಿದ್ದ ಮೃತ ಶಿಕ್ಷಕರ ಪತ್ನಿ
ಮೃತ ಜಯಪ್ಪ ಅವರ ಪತ್ನಿ ಅಂಜನಮ್ಮ ದೂರಿನಲ್ಲಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕಳೆದ 10 ತಿಂಗಳಿಂದ ಕೊಕ್ಕನೂರು ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ತಮ್ಮ ಪತಿಗೆ ಅಲ್ಲಿನ ಸಹ ಶಿಕ್ಷಕರು ಮತ್ತು ಸಿಬ್ಬಂದಿ ನಿರಂತರವಾಗಿ ಮಾನಸಿಕ ಹಿಂಸೆ ಹಾಗೂ ಕಿರುಕುಳ ನೀಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ. ತಾವು ಪರಿಶಿಷ್ಟ ಜಾತಿಗೆ ಸೇರಿರುವುದರಿಂದ ನಿತ್ಯವೂ ಜಾತಿ ನಿಂದನೆ ಮಾಡಿ ಅವಮಾನಿಸಲಾಗುತ್ತಿತ್ತು. ಈ ಕಹಿ ಘಟನೆಗಳ ಬಗ್ಗೆ ತಮ್ಮ ಪತಿ ಮನೆಯಲ್ಲಿ ಹತ್ತಾರು ಬಾರಿ ಹೇಳಿಕೊಂಡು ನೊಂದಿದ್ದರು. ಶಾಲೆಯ ಸಿಬ್ಬಂದಿ ನೀಡಿದ ನಿರಂತರ ಮಾನಸಿಕ ಕಿರುಕುಳ ಹಾಗೂ ಜಾತಿ ನಿಂದನೆಯೇ ತಮ್ಮ ಪತಿಯ ಆತ್ಮಹತ್ಯೆಗೆ ನೇರ ಕಾರಣ ಎಂದು ಅಂಜನಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಏನಿದು ಘಟನೆ?
ಸಹಶಿಕ್ಷಕರೊಂದಿಗೆ ಉಂಟಾಗಿದ್ದ ಕಲಹದಿಂದ ಮನನೊಂದು ಆತ್ಮಹತ್ಯೆಗೆ (Self Harming ) ಯತ್ನಿಸಿದ್ದ ಹರಿಹರ ತಾಲೂಕಿನ ಕೊಕ್ಕನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ (Head Master ) ಜಯಪ್ಪ (55) ಅವರು ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಬೆಳಗಿನ ಜಾವ ಸಾವನ್ನಪ್ಪಿದ್ದರು.
ಶಾಲೆಯಲ್ಲಿ ಮುಖ್ಯಶಿಕ್ಷಕರು ಹಾಗೂ ಸಹಶಿಕ್ಷಕರ ನಡುವೆ ಉಂಟಾಗಿದ್ದ ಜಗಳದ ಹಿನ್ನೆಲೆಯಲ್ಲಿ, ಮೊನ್ನೆ ಬಿಆರ್‌ಸಿ (BRC) ಹಾಗೂ ಎಸ್‌ಡಿಎಂಸಿ (SDMC) ನೇತೃತ್ವದಲ್ಲಿ ಶಾಂತಿಸಭೆ ಕರೆಯಲಾಗಿತ್ತು. ಸಭೆ ನಡೆಯುತ್ತಿದ್ದ ಮಧ್ಯದಲ್ಲೇ ತೀವ್ರವಾಗಿ ಮನನೊಂದ ಜಯಪ್ಪ ಅವರು, ಶೌಚಾಲಯಕ್ಕೆ ತೆರಳಿ ವಿಷ ಸೇವಿಸಿದ್ದರು.
ಕೂಡಲೇ ಸ್ಥಳೀಯರು ಅವರನ್ನು ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ನಗರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಸದ್ಯ ಜಯಪ್ಪ ಅವರ ಸಾವು ಇಡೀ ಗ್ರಾಮ ಹಾಗೂ ಶಿಕ್ಷಣ ಇಲಾಖೆಯಲ್ಲಿ ಈ ಘಟನೆ ತೀವ್ರ ವಿಷಾದ ಮೂಡಿಸಿದೆ. ಸ್ಥಳೀಯ ಸ್ಥಳೀಯ ಪೊಲೀಸರು ಈ ಸಂಬಂಧ ಕೇಸ್ ದಾಖಲು ಮಾಡಿಕೊಂಡಿದ್ದರು. ಇದೀಗ, ಮಾನಸಿಕ ಹಿಂಸೆ, ಕಿರುಕುಳ ಹಾಗೂ ಜಾತಿನಿಂದನೆ ಆರೋಪದ ಅಡಿಯಲ್ಲಿ 10 ಜನರ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ.
