Home ಬೆಂಗಳೂರು ಕರಾವಳಿಯಲ್ಲಿ ಮುಂದಿನ ಕ್ಯಾಬಿನೆಟ್ ಮೀಟಿಂಗ್‌ – ಸಿಎಂ ಡಿಕೆಶಿ

ಕರಾವಳಿಯಲ್ಲಿ ಮುಂದಿನ ಕ್ಯಾಬಿನೆಟ್ ಮೀಟಿಂಗ್‌ – ಸಿಎಂ ಡಿಕೆಶಿ

ಬೆಂಗಳೂರು : ಕರ್ನಾಟಕದ ಸುಂದರ ಕರಾವಳಿ ತೀರವನ್ನು ಅಂತರರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಬೃಹತ್ ಮಾಸ್ಟರ್ ಪ್ಲಾನ್ ಸಿದ್ಧಪಡಿಸುತ್ತಿದೆ. ಇದರ ಭಾಗವಾಗಿ ಮುಂದಿನ ಸಚಿವ ಸಂಪುಟ (ಕ್ಯಾಬಿನೆಟ್) ಸಭೆಯನ್ನು ಕರಾವಳಿ (Coastal Karnataka) ಭಾಗದಲ್ಲೇ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಮಹತ್ವದ ಪ್ರಕಟಣೆ ಹೊರಡಿಸಿದ್ದಾರೆ.

ಅಧಿಕಾರಿಗಳಿಗೆ ಸಿಎಂ ಖಡಕ್‌ ಆದೇಶ
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತ ಉನ್ನತ ಮಟ್ಟದ ಸಮಾಲೋಚನೆ ಸಭೆಯಲ್ಲಿ ಅವರು ಈ ಘೋಷಣೆ ಮಾಡಿದರು. ಕರಾವಳಿಯಲ್ಲಿ ಕ್ಯಾಬಿನೆಟ್ ಸಭೆ ನಡೆಯುವಷ್ಟರೊಳಗೆ ಆ ಭಾಗದ ಪ್ರವಾಸೋದ್ಯಮಕ್ಕೆ ಎದುರಾಗಿರುವ ಎಲ್ಲಾ ತಾಂತ್ರಿಕ ಅಡಚಣೆಗಳಿಗೆ ಅಧಿಕಾರಿಗಳು ಸೂಕ್ತ ಪರಿಹಾರಗಳೊಂದಿಗೆ ಸಿದ್ಧರಿರಬೇಕು ಎಂದು ಸಿಎಂ  ಖಡಕ್ ಆಗಿ ತಿಳಿಸಿದರು.

ಕರಾವಳಿ ಭಾಗದಲ್ಲಿ ಹೋಂ ಸ್ಟೇ ಹಾಗೂ ರೆಸಾರ್ಟ್ ನಿರ್ಮಾಣಕ್ಕೆ ಸಿಆರ್‌ಝಡ್ (CRZ) ಮತ್ತು ಅರಣ್ಯ ಇಲಾಖೆಯಿಂದ ಆಗುತ್ತಿರುವ ತಾಂತ್ರಿಕ ತಕರಾರುಗಳ ಬಗ್ಗೆ ಮುಂಬರುವ 15 ರಿಂದ 20 ದಿನಗಳ ಒಳಗೆ ಸಮಗ್ರ ವರದಿ ಸಿದ್ಧಪಡಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ ಸಿಎಂ, ಹೂಡಿಕೆ ಮಾಡಲು ಮುಂದೆ ಬರುವ ಉದ್ಯಮಿಗಳಿಗೆ ಇಲಾಖೆಗಳಿಂದ ಆಗುತ್ತಿರುವ ಕಿರಿಕಿರಿಗಳನ್ನು ತಪ್ಪಿಸಿ ಸರಳ ಮಾರ್ಗಗಳನ್ನು ಸೃಷ್ಟಿಸಬೇಕು ಎಂದರು. ಇದಕ್ಕಾಗಿ ಅಭಿವೃದ್ಧಿ ಯೋಜನೆಗಳಿಗೆ ತಾಂತ್ರಿಕ ತೊಂದರೆ ಆಗದಂತೆ ವಿವಿಧ ಇಲಾಖೆಗಳ ಅನುಮತಿಗಳನ್ನು ಒಂದೇ ಸೂರಿನಡಿ ನೀಡಲು ‘ಏಕ ಗವಾಕ್ಷಿ’ (ಸಿಂಗಲ್ ವಿಂಡೋ) ವ್ಯವಸ್ಥೆಯನ್ನು ಜಾರಿಗೆ ತರಲು ಮುಖ್ಯಮಂತ್ರಿಗಳು ಒಲವು ವ್ಯಕ್ತಪಡಿಸಿದರು.

ಹೆಲಿ ಟೂರಿಸಂ ಅಭಿವೃದ್ಧಿಗೆ ಒತ್ತು ನೀಡುವಂತೆ ಮನವಿ
ಕರ್ನಾಟಕದ ಪ್ರವಾಸೋದ್ಯಮ ನೀತಿಯಡಿಯಲ್ಲಿ ಸದ್ಯ 718.63 ಕೋಟಿ ರೂಪಾಯಿ ಅಂದಾಜು ಹೂಡಿಕೆಯ ಒಟ್ಟು 45 ಬೃಹತ್ ಯೋಜನೆಗಳನ್ನು ಅನುಮೋದಿಸಲಾಗಿದ್ದು, ಇದರಿಂದ ಸುಮಾರು 4,500 ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದಿದ್ದಾರೆ. ಈ ಉದ್ಯೋಗದ ಪ್ರಮಾಣ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಬೇಕು ಎಂದು ಆಶಿಸಿದ ಡಿ.ಕೆ. ಶಿವಕುಮಾರ್, ನಮ್ಮ ಪರಿಸರಕ್ಕೆ ಯಾವುದೇ ಧಕ್ಕೆ ಬಾರದಂತೆ ಸಮುದ್ರ ತೀರಗಳನ್ನು ಸುಂದರಗೊಳಿಸಬೇಕು. ಕರಾವಳಿ ಮೇಳಗಳು ಹಾಗೂ ಉತ್ಸವಗಳ ಮೂಲಕ ಕರಾವಳಿಯ ಹೆಮ್ಮೆಯ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಬೇಕು. ಈ ಮೂಲಕ ಹೆಚ್ಚಿನ ಬಂಡವಾಳ ಆಕರ್ಷಿಸಲು ಉದ್ಯಮಿಗಳಿಗೆ ಸರ್ಕಾರದಿಂದ ಸಬ್ಸಿಡಿ (ಸಹಾಯಧನ) ಮತ್ತು ಬಡ್ಡಿ ರಿಯಾಯಿತಿಗಳನ್ನು ನೀಡುವುದಾಗಿ ಭರವಸೆ ನೀಡಿದರು. ಇದೇ ವೇಳೆ ಉದ್ಯಮಿಗಳು ಕರಾವಳಿಯಲ್ಲಿ ‘ಹೆಲಿ ಟೂರಿಸಂ’ ಅಭಿವೃದ್ಧಿಗೆ ಒತ್ತು ನೀಡುವಂತೆ ಸಿಎಂಗೆ ವಿಶೇಷ ಮನವಿ ಸಲ್ಲಿಸಿದರು.

ಇನ್ನು ಸಭೆಯಲ್ಲಿ ಭಾಗವಹಿಸಿದ್ದ ನಟ ರಿಷಬ್ ಶೆಟ್ಟಿ ಅವರು ಕರಾವಳಿಯ ಜಾನಪದ ಕಲೆ ಮತ್ತು ಸಂಗೀತಕ್ಕೆ ಪ್ರವಾಸೋದ್ಯಮದಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದು ಒತ್ತಾಯಿಸಿದರು. ಕರಾವಳಿ ಭಾಗದಲ್ಲಿ ಚಲನಚಿತ್ರ ಚಿತ್ರೀಕರಣಕ್ಕೆ ಹೆಚ್ಚಿನ ಸೌಕರ್ಯ ಹಾಗೂ ಸಡಿಲಿಕೆಗಳನ್ನು ಕಲ್ಪಿಸಿಕೊಡುವುದರಿಂದ ಕೇರಳ, ಗೋವಾ ಹಾಗೂ ಕರ್ನಾಟಕದ ಸಿನಿಮಾ ಜಗತ್ತಿಗೆ ಭಾರಿ ಅನುಕೂಲವಾಗಲಿದ್ದು, ಪ್ರವಾಸೋದ್ಯಮವೂ ಮತ್ತಷ್ಟು ವೇಗವಾಗಿ ಬೆಳೆಯಲಿದೆ ಎಂಬ ಅಮೂಲ್ಯ ಸಲಹೆಯನ್ನು ಅವರು ಸರ್ಕಾರದ ಮುಂದಿಟ್ಟರು.

ಈ ಮಹತ್ವದ ಸಭೆಯಲ್ಲಿ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್, ಖ್ಯಾತ ಚಲನಚಿತ್ರ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ, ಶಾಸಕರಾದ ಜಿ.ಟಿ. ದೇವೇಗೌಡ, ಸತೀಶ್ ಸೈಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಪ್ರವಾಸೋದ್ಯಮ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಹಲವು ಪ್ರಮುಖ ಉದ್ಯಮಿಗಳು ಉಪಸ್ಥಿತರಿದ್ದರು.

You cannot copy content of this page

Exit mobile version