Home ಅಪಘಾತ ಆಳದ ಕಂದಕಕ್ಕೆ ಬಿದ್ದ ಬೊಲೆರೊ ಕಾರು 7 ಜನರ ದುರ್ಮರಣ

ಆಳದ ಕಂದಕಕ್ಕೆ ಬಿದ್ದ ಬೊಲೆರೊ ಕಾರು 7 ಜನರ ದುರ್ಮರಣ

ಚಂಬಾ ಹಿಮಾಚಲ ಪ್ರದೇಶ : ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಹೋದರರು ಸೇರಿದಂತೆ ಒಟ್ಟು 7 ಜನರು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.ಚುರಾಹ್ ತಾಲ್ಲೂಕಿನ ಪುಖ್ರಿ-ಮಸ್ರುಂದ್ ರಸ್ತೆಯ ಮಣಿ ಝೀರೋ ಪ್ರದೇಶದ ಬಳಿ ಬುಧವಾರ ತಡರಾತ್ರಿ ಸುಮಾರು 2 ಗಂಟೆ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಬೊಲೆರೊ ಕಾರು ಸುಮಾರು 500 ಅಡಿ ಆಳದ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ವಾಹನದಲ್ಲಿದ್ದ ಎಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮುಂಡಾನ್ ಕಾರ್ಯಕ್ರಮ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ದುರಂತ

ಕುತೇಡ್ ಪಂಚಾಯತ್ ವ್ಯಾಪ್ತಿಯ ಮಹಲ್ ಗ್ರಾಮದ ನಿವಾಸಿಗಳು ಕಾಕಡೋತ್ ಗ್ರಾಮದಲ್ಲಿ ನಡೆದ ಮುಂಡಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ಹಿಂದಿರುಗುತ್ತಿದ್ದರು.ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬೊಲೆರೊ ವಾಹನ ರಸ್ತೆ ಬದಿಯಿಂದ ಜಾರಿ ಆಳವಾದ ಕಂದಕಕ್ಕೆ ಬಿದ್ದಿದೆ.

ಸ್ಥಳದಲ್ಲೇ 7 ಜನರ ಸಾವು

ಅಪಘಾತದ ತೀವ್ರತೆಗೆ ಬೊಲೆರೊ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ನಾಲ್ವರು ಪುರುಷರು ಹಾಗೂ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮೃತರೆಲ್ಲರೂ ಚುರಾಹ್ ಪ್ರದೇಶದ ಕುತೇಡ್ ಗ್ರಾಮದವರಾಗಿದ್ದು, ಘಟನೆಯಿಂದ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.

ಸ್ಥಳೀಯರಿಂದ ರಕ್ಷಣಾ ಕಾರ್ಯ

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿ ಕಂದಕದಲ್ಲಿದ್ದ ಮೃತದೇಹಗಳನ್ನು ಹೊರತೆಗೆದಿದ್ದಾರೆ.ನಂತರ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದರು.ಚಂಬಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಸಕ್ಲಾನಿ ಮಾಹಿತಿ ನೀಡಿ, ಮೃತರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

You cannot copy content of this page

Exit mobile version