ನಟ-ರಾಜಕಾರಣಿ ವಿಜಯ್ ಅವರ ಕರೂರಿನಲ್ಲಿ ಶನಿವಾರ ರಾತ್ರಿ ನಡೆದ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಸೋಮವಾರ ಬೆಳಿಗ್ಗೆ 41 ಕ್ಕೆ ಏರಿದೆ. ಈ ನಡುವೆ ವಿಜಯ್ ಅವರ ನೀಲಂಕರೈನ ಪೂರ್ವ ಕರಾವಳಿ ರಸ್ತೆ (ಇಸಿಆರ್) ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ.
ಮೃತರ ಮೃತದೇಹಗಳನ್ನು ಅವರ ಸಂಬಂಧಿಕರು ಗುರುತಿಸಿದ ನಂತರ ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಯಿತು. ಮೃತ ಮಹಿಳೆಯರಲ್ಲಿ ಹೆಚ್ಚಿನವರು 30ರ ಹರೆಯದವರಾಗಿದ್ದರೆ, ಮೃತಪಟ್ಟ ಪುರುಷರು 20 ಮತ್ತು 30ರ ಹರೆಯದವರಾಗಿದ್ದರು. ಮೃತದೇಹಗಳನ್ನು ಉಚಿತ ಶವ ವಾಹನಗಳಲ್ಲಿ ಅವರವರ ಊರುಗಳಿಗೆ ಸಾಗಿಸಲಾಗಿದೆ.
ಕರೂರ್ ಜಿಲ್ಲೆಯಲ್ಲಿ ನಡೆದ ಟಿವಿಕೆ ರ್ಯಾಲಿಯಲ್ಲಿ ಭಾಗವಹಿಸಲು ಹತ್ತಾರು ಸಾವಿರ ಜನರು ಸಭೆ ಸೇರಿದ್ದರು. ಬಿಸಿಲಿನ ತಾಪದ ನಡುವೆಯೂ ವಿಜಯ್ ಅವರ ಆಗಮನ ವಿಳಂಬವಾದದ್ದೇ ಈ ಕಾಲ್ತುಳಿತಕ್ಕೆ ಕಾರಣ ಎಂದು ತಮಿಳುನಾಡು ಡಿಜಿಪಿ ಜಿ ವೆಂಕಟರಾಮನ್ ಹೇಳಿದ್ದಾರೆ.
ಇನ್ನು ಬಾಂಬ್ ಕರೆ ಬೆನ್ನಲ್ಲೇ ಚೆನ್ನೈ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರದೇಶವನ್ನು ಸುತ್ತುವರೆದರು. ಆವರಣದ ಒಳಗೆ ಮತ್ತು ಹೊರಗೆ ಸಂಪೂರ್ಣ ಶೋಧ ನಡೆಸಲು ಬಾಂಬ್ ನಿಷ್ಕ್ರಿಯ ದಳ ಮತ್ತು ಸ್ನಿಫರ್ ನಾಯಿಗಳನ್ನು ನಿಯೋಜಿಸಲಾಗಿದೆ. ಇಲ್ಲಿಯವರೆಗೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ವಿವರವಾದ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.