ಥಾಯ್ಲೆಂಡಿನ ದ್ವೀಪ ರಾಜ್ಯ ಫುಕೆಟ್ ನಿಂದ ಹೊರಟಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಥಾಯ್ಲೆಂಡಿನ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶವಾಗಿದೆ. ಗುಜರಾತ್ ನಲ್ಲಿ ಏರ್ ಇಂಡಿಯಾ ವಿಮಾನ ದುರಂತವಾದ 24 ತಾಸಿನ ಒಳಗೇ ಬೆದರಿಕೆ ಕರೆ ಬಂದಿದ್ದು ಮತ್ತಷ್ಟು ಆತಂಕ ಸೃಷ್ಟಿಸಿದೆ.
ಈ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಏರ್ ಇಂಡಿಯಾ 379 ವಿಮಾನವು ತುರ್ತು ಭೂಸ್ಪರ್ಶದಲ್ಲಿ ಥಾಯ್ಲೆಂಡಿನಲ್ಲಿ ಲ್ಯಾಂಡಿಂಗ್ ಆಗಿದ್ದು, ವಿಮಾನ ನಿಲ್ದಾಣವು ತುರ್ತು ಯೋಜನೆಗಳೊಂದಿಗೆ ಮುಂದುವರಿಯುತ್ತಿದೆ ಎಂದು ಅಧಿಕಾರಿಯೊಬ್ಬರು ರಾಯಿಟರ್ಸ್ಗೆ ತಿಳಿಸಿದ್ದಾರೆ.
ವಿಮಾನದಲ್ಲಿ 156 ಪ್ರಯಾಣಿಕರಿದ್ದರು. ವಿಮಾನವು ಶುಕ್ರವಾರ ಬೆಳಿಗ್ಗೆ 9:30 ಕ್ಕೆ (0230) ಫುಕೆಟ್ ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟಿತ್ತು. ಆದರೆ ಅಂಡಮಾನ್ ಸಮುದ್ರದ ಸುತ್ತಲೂ ವಿಶಾಲವಾದ ಸುತ್ತನ್ನು ಮಾಡಿ ಥಾಯ್ ದ್ವೀಪದಲ್ಲಿ ಇಳಿಯಿತು ಎಂದು ಫ್ಲೈಟ್ ಟ್ರ್ಯಾಕರ್ ಫ್ಲೈಟ್ರಡಾರ್ 24 ತಿಳಿಸಿದೆ.