Home ಅಪರಾಧ ಇಸ್ರೋಗೆ ಮತ್ತೆ ಬಾಂಬ್ ಬೆದರಿಕೆ: ನಾಲ್ಕೇ ದಿನದಲ್ಲಿ ಮೂರನೇ ಇಮೇಲ್, ಕಲಬುರಗಿ ಕೋರ್ಟ್‌ಗೂ ಬೆದರಿಕೆ

ಇಸ್ರೋಗೆ ಮತ್ತೆ ಬಾಂಬ್ ಬೆದರಿಕೆ: ನಾಲ್ಕೇ ದಿನದಲ್ಲಿ ಮೂರನೇ ಇಮೇಲ್, ಕಲಬುರಗಿ ಕೋರ್ಟ್‌ಗೂ ಬೆದರಿಕೆ

0

ರಾಜಧಾನಿ ಬೆಂಗಳೂರಿನ ನ್ಯೂ ಬಿಇಎಲ್ ರಸ್ತೆಯಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಧಾನ ಕಚೇರಿಗೆ ಮತ್ತೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಕಳೆದ ನಾಲ್ಕು ದಿನಗಳಲ್ಲೇ ಇದು ಮೂರನೇ ಘಟನೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಸರ್ಕಾರಿ ಸಂಸ್ಥೆಗಳು ಮತ್ತು ನ್ಯಾಯಾಲಯಗಳನ್ನು ಗುರಿಯಾಗಿಸಿ ಬರುತ್ತಿರುವ ಬೆದರಿಕೆ ಇಮೇಲ್‌ಗಳು ಭದ್ರತಾ ಸಂಸ್ಥೆಗಳ ಆತಂಕವನ್ನು ಹೆಚ್ಚಿಸಿವೆ.

ಭಾನುವಾರ ರಾತ್ರಿ ಸುಮಾರು 9 ಗಂಟೆಗೆ ಕಳುಹಿಸಲಾದ ಇಮೇಲ್ ಅನ್ನು ಸೋಮವಾರ ಬೆಳಿಗ್ಗೆ 10.30ರ ಸುಮಾರಿಗೆ ಇಸ್ರೋ ಸಿಬ್ಬಂದಿ ಗಮನಿಸಿದ್ದಾರೆ. ಇಂಗ್ಲಿಷ್‌ನಲ್ಲಿ ಕಳುಹಿಸಲಾದ ಸಂದೇಶದಲ್ಲಿ ಮಧ್ಯಾಹ್ನ 2 ಗಂಟೆಗೆ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಉಲ್ಲೇಖಿಸಲಾಗಿತ್ತು. ಕೂಡಲೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಾಂಬ್ ನಿಷ್ಕ್ರಿಯ ದಳ (BDDS), ಶ್ವಾನ ದಳ, ಸಿಐಎಸ್‌ಎಫ್ ಹಾಗೂ ಸಂಜಯನಗರ ಪೊಲೀಸರು ಇಸ್ರೋ ಕ್ಯಾಂಪಸ್‌ಗೆ ಧಾವಿಸಿ ಅಂತರಿಕ್ಷ ಭವನ ಸೇರಿದಂತೆ ಸಂಪೂರ್ಣ ಆವರಣವನ್ನು ತಪಾಸಣೆ ನಡೆಸಿದರು. ಪೀಣ್ಯದಲ್ಲಿರುವ ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ISTRAC) ಕೇಂದ್ರದಲ್ಲಿಯೂ ಶೋಧ ಕಾರ್ಯ ನಡೆಸಲಾಯಿತು.

ಸುದೀರ್ಘ ತಪಾಸಣೆಯ ಬಳಿಕ ಯಾವುದೇ ಸ್ಫೋಟಕ ಅಥವಾ ಅನುಮಾನಾಸ್ಪದ ವಸ್ತು ಪತ್ತೆಯಾಗದ ಹಿನ್ನೆಲೆಯಲ್ಲಿ ಈ ಬೆದರಿಕೆ ಹುಸಿ ಎಂದು ಪೊಲೀಸರು ಘೋಷಿಸಿದ್ದಾರೆ.

ಈ ಹಿಂದೆ ಜುಲೈ 2ರಂದು ಇಸ್ರೋ ಅಧ್ಯಕ್ಷರ ಕಚೇರಿಗೆ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿದ್ದ ಆರೋಪದಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್ ನಿವಾಸಿ ನಿಶಾಂತ್ ತ್ಯಾಗಿ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆದರೆ ನಂತರ ಬಂದಿರುವ ಎರಡನೇ ಹಾಗೂ ಮೂರನೇ ಇಮೇಲ್‌ಗಳಿಗೆ ಆತನಿಗೆ ಯಾವುದೇ ಸಂಬಂಧವಿಲ್ಲ ಎಂದು ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ ತಿಳಿಸಿದ್ದಾರೆ. ಮೂರು ಬೆದರಿಕೆ ಸಂದೇಶಗಳೂ ಬೇರೆ ಬೇರೆ ಇಮೇಲ್ ಐಡಿಗಳಿಂದ ಬಂದಿದ್ದು, ಸಂಜಯನಗರ ಪೊಲೀಸರು ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಇದೇ ವೇಳೆ, ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೂ ಬಾಂಬ್ ಬೆದರಿಕೆ ಇಮೇಲ್ ಬಂದಿರುವುದು ರಾಜ್ಯದಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ತಮಿಳುನಾಡಿನಿಂದ ‘ಉದಯ್ ಸೇತುಪತಿ’ ಹೆಸರಿನ ಇಮೇಲ್ ಐಡಿಯಿಂದ ಕಳುಹಿಸಲಾದ ಸಂದೇಶದಲ್ಲಿ ನ್ಯಾಯಾಲಯದ ಆವರಣದಲ್ಲಿ ನಾಲ್ಕು ಆರ್‌ಡಿಎಕ್ಸ್ ಐಇಡಿ ಬಾಂಬ್‌ಗಳನ್ನು ಇರಿಸಲಾಗಿದ್ದು, ಮಧ್ಯಾಹ್ನ 2 ಗಂಟೆಗೆ ಸ್ಫೋಟಗೊಳಿಸಲಾಗುವುದು ಎಂದು ಬೆದರಿಕೆ ಹಾಕಲಾಗಿತ್ತು.

ಇಮೇಲ್‌ನಲ್ಲಿ ಪೋಕ್ಸೊ ಪ್ರಕರಣದ ಆರೋಪಿಗಳಾದ ಆರ್.ಜೆ. ಶರಣ್ ಜಯರಾಮ್ ಮತ್ತು ಜಲ್ಲಿಕಟ್ಟು ಜ್ಯೂಲಿಯನ್ ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಲಾಗಿತ್ತು. ಮಾಹಿತಿ ದೊರೆಯುತ್ತಿದ್ದಂತೆಯೇ ಸ್ಟೇಷನ್ ಬಜಾರ್ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದೊಂದಿಗೆ ನ್ಯಾಯಾಲಯದ ಆವರಣವನ್ನು ಸಂಪೂರ್ಣವಾಗಿ ಪರಿಶೀಲಿಸಿದರು. ಯಾವುದೇ ಸ್ಫೋಟಕ ವಸ್ತು ಪತ್ತೆಯಾಗದ ಹಿನ್ನೆಲೆಯಲ್ಲಿ ಈ ಬೆದರಿಕೆಯೂ ಹುಸಿಯೇ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.

ಸತತವಾಗಿ ಇಸ್ರೋ, ನ್ಯಾಯಾಲಯ ಸೇರಿದಂತೆ ಪ್ರಮುಖ ಸರ್ಕಾರಿ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಮೂಲಗಳ ಪತ್ತೆಗೆ ಪೊಲೀಸರು ವಿಶೇಷ ತನಿಖೆ ಆರಂಭಿಸಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಪತ್ತೆಹಚ್ಚುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

You cannot copy content of this page

Exit mobile version