Home ಅಪರಾಧ ಪಶ್ಚಿಮ ಬಂಗಾಳದಲ್ಲಿ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಉದ್ರಿಕ್ತ ಗುಂಪಿನಿಂದ ಶಂಕಿತನ ಕೊಲೆ, ಹಿಂಸಾತ್ಮಕ...

ಪಶ್ಚಿಮ ಬಂಗಾಳದಲ್ಲಿ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಉದ್ರಿಕ್ತ ಗುಂಪಿನಿಂದ ಶಂಕಿತನ ಕೊಲೆ, ಹಿಂಸಾತ್ಮಕ ಪ್ರತಿಭಟನೆ

0

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ 12 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಭೀಕರ ಸಾಪೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಬಾಲಕಿಯ ಶವಪರೀಕ್ಷೆ ವರದಿಯಿಂದ ಅತ್ಯಂತ ಭಯಾನಕ ಮತ್ತು ಕ್ರೂರ ನಿಜಾಂಶಗಳು ಬೆಳಕಿಗೆ ಬಂದಿದ್ದು, ಆಕೆಯನ್ನು ಜೀವಂತವಾಗಿಯೇ ಹಳ್ಳಕ್ಕೆ ಎಸೆದು ಕೊಲ್ಲಲಾಗಿದೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಈ ನರಕಸದೃಶ ಘಟನೆ ನಡೆದಿದೆ.

ತನ್ನ ಸ್ನೇಹಿತೆಗೆ ಹುಟ್ಟುಹಬ್ಬದ ಉಡುಗೊರೆ (ಬರ್ತ್‌ಡೇ ಗಿಫ್ಟ್) ಖರೀದಿಸಲು ಮಾರುಕಟ್ಟೆಗೆ ಬಂದಿದ್ದ ಬಾಲಕಿಯನ್ನು ನಾಲ್ವರು ಯುವಕರ ಗ್ಯಾಂಗ್ ಅಪಹರಿಸಿತ್ತು. ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ತಲೆಗೆ ಬಂಡೆಕಲ್ಲಿನಿಂದ ಜಜ್ಜಿ, ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆ ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿ ಇನ್ನು ಬದುಕಿರುವಾಗಲೇ ಪಕ್ಕದಲ್ಲಿದ್ದ ನೀರಿನ ಹಳ್ಳಕ್ಕೆ ಎಸೆದಿದ್ದಾರೆ.

ಆಕೆ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸಾವಿಗೀಡಾಗಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಲಕಿಯ ಶ್ವಾಸಕೋಶ ಹಾಗೂ ಹೊಟ್ಟೆಯಲ್ಲಿ ನೀರು ತುಂಬಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಆಕೆಯ ದೇಹದಾದ್ಯಂತ ತೀವ್ರವಾದ ಗಾಯದ ಗುರುತುಗಳಿದ್ದು, ಗುಪ್ತಾಂಗಗಳ ಮೇಲೂ ಬಲವಾದ ಹಲ್ಲೆ ನಡೆಸಿರುವುದು ಶವಪರೀಕ್ಷೆ ವರದಿಯಲ್ಲಿ ಬಹಿರಂಗವಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿ ಆನಂದ್ ಸರ್ದಾರ್ ಸೇರಿದಂತೆ ದಿಬಾಕರ್ ಸರ್ದಾರ್ ಮತ್ತು ಪ್ರಭಾಸ್ ಮಂಡಲ್ ಎಂಬುವವರನ್ನು ಬಂಧಿಸಿದ್ದಾರೆ. ಉಳಿದ ಮೂವರು ಶಂಕಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ನಾಲ್ವರು ಯುವಕರು ಬಾಲಕಿಯನ್ನು ಬಲವಂತವಾಗಿ ಕರೆದೊಯ್ಯುತ್ತಿರುವುದು ಪತ್ತೆಯಾಗಿದೆ.

ಬಾಲಕಿಯ ಮೇಲಿನ ಹತ್ಯಾಚಾರದ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯರು ಉದ್ರಿಕ್ತರಾಗಿದ್ದು, ದೊಡ್ಡ ಮಟ್ಟದ ಆಕ್ರೋಶ ಭುಗಿಲೆದ್ದಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಶಂಕೆಯ ಮೇಲೆ ಉದ್ರಿಕ್ತ ಗುಂಪೊಂದು ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹೊಡೆದು ಕೊಂದಿದೆ. ಸದ್ಯ ಪರಿಸ್ಥಿತಿ ಕೈಮೀರಿದ್ದು, ಪ್ರತಿಭಟನಾಕಾರರು ರಸ್ತೆ ಹಾಗೂ ರೈಲ್ವೆ ಹಳಿಗಳನ್ನು ಬಂದ್ ಮಾಡಿ ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೆ ಹಲವು ಪೊಲೀಸ್ ವಾಹನಗಳನ್ನು ಜಖಂಗೊಳಿಸಲಾಗಿದೆ.

You cannot copy content of this page

Exit mobile version