ಮುಂಬೈ: ಮಹಾರಾಷ್ಟ್ರದ ರಸ್ತೆಗಳು ಮತ್ತು ಬೀದಿಗಳಲ್ಲಿ ನಡೆಯುವ ಹಬ್ಬದ ಮೆರವಣಿಗೆಗಳಲ್ಲಿ ಪಟಾಕಿ ಮತ್ತು ಲೇಸರ್ ಲೈಟ್ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಬಾಂಬೆ ಹೈಕೋರ್ಟ್ ಮಂಗಳವಾರ ಆದೇಶ ಹೊರಡಿಸಿದೆ.
ಹಬ್ಬಗಳ ಸಂದರ್ಭದಲ್ಲಿ ವಾಯು ಹಾಗೂ ಶಬ್ದ ಮಾಲಿನ್ಯವನ್ನು ತಡೆಗಟ್ಟಲು ನ್ಯಾಯಾಲಯವು ಈ ಕ್ರಮ ಕೈಗೊಂಡಿದೆ. ತೀವ್ರ ಪ್ರಖರತೆಯ ಬೆಳಕಿನ ಲೈಟ್ಗಳ ಮೇಲೆಯೂ ನಿರ್ಬಂಧ ಹೇರಲಾಗಿದೆ. ತಮ್ಮ ಆದೇಶಗಳು ಉಲ್ಲಂಘನೆಯಾಗಿ ನಾಗರಿಕರಿಗೆ ತೊಂದರೆಯಾಗುವ ಮೊದಲೇ ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ.
ಜನರು ಸಾಯುವುದು ಅಥವಾ ಆರೋಗ್ಯದ ಸಮಸ್ಯೆಗಳಿಂದ ನರಳುವಂತೆ ಮಾಡುವುದು ಹಬ್ಬದ ಆಚರಣೆಗಳ ಉದ್ದೇಶವಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿದೆ. ಗಣೇಶ ಚತುರ್ಥಿಯಂತಹ ಹಬ್ಬಗಳ ಸಂದರ್ಭದಲ್ಲಿ ನಿಯಂತ್ರಣವಿಲ್ಲದೆ ಹೆಚ್ಚುತ್ತಿರುವ ಮಾಲಿನ್ಯದ ಕುರಿತು ನ್ಯಾಯಾಲಯ ತೀವ್ರ ಕಳವಳ ವ್ಯಕ್ತಪಡಿಸಿದೆ. ಶಬ್ದ ಮಾಲಿನ್ಯ ಉಂಟಾಗದಂತೆ ಆಯೋಜಕರು ಧ್ವನಿ ಮಿತಿ ನಿಯಂತ್ರಣ ಸಾಧನಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದೆ. ನಿಯಮಗಳನ್ನು ಮೀರಿ ಶಬ್ದದ ಮಿತಿಯನ್ನು ಉಲ್ಲಂಘಿಸಿದರೆ ಠೇವಣಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿದೆ.
