Sunday, June 16, 2024

ಸತ್ಯ | ನ್ಯಾಯ |ಧರ್ಮ

ಮಿಝೋರಾಂ ಮೇಲಣ ಬಾಂಬ್ ದಾಳಿ: ವಾಸ್ತವ ಏನು?

ಇಂದಿರಾಗಾಂಧಿ ಕಾಲದ ಕಾಂಗ್ರೆಸ್ ಸರಕಾರ ಮಿಝೋರಾಂ ನಲ್ಲಿ ನಮ್ಮದೇ ದೇಶದ ಜನರ ಮೇಲೆ ಬಾಂಬ್ ದಾಳಿ ನಡೆಸಿತು ಎಂದು ನಮ್ಮ ಪ್ರಧಾನಿಗಳು ಇತ್ತೀಚೆಗೆ ಸಂಸತ್ ನಲ್ಲಿ, ವಿಶ್ವಾಸ ಮತ ಚರ್ಚೆಯ ಸಮಯದಲ್ಲಿ, ಅರ್ಧ ಸತ್ಯವೊಂದನ್ನು ಹೇಳಿ ಜನರನ್ನು ದಿಕ್ಕು ತಪ್ಪಿಸಲು ಯತ್ನಿಸಿದರು. 1966 ರಲ್ಲಿ ಮಿಜೋರಾಂ ನಲ್ಲಿ ಭಾರತೀಯ ವಾಯುಪಡೆಯು ಬಾಂಬ್ ದಾಳಿ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾದದು ಯಾಕೆ ಮತ್ತು ಬಾಂಬ್ ದಾಳಿ ನಡೆದುದು ಯಾರ ಮೇಲೆ ಎಂಬ ಪೂರ್ಣ ಸತ್ಯ ಇಲ್ಲಿದೆ.

ಪ್ರಜಾತಂತ್ರ ಎಂದರೆ ಪ್ರಶ್ನೆ. ಪ್ರಜಾತಂತ್ರ ಎಂದರೆ ಅಭಿಪ್ರಾಯಭೇದ, ಚರ್ಚೆ, ಸಂವಾದ. ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರಕಾರಕ್ಕೆ ಪ್ರಶ್ನೆ ಕೇಳುವುದು, ಸರಕಾರದಿಂದ ಉತ್ತರ ಆಗ್ರಹಿಸುವುದು, ದೇಶದಲ್ಲಿ ನಡೆಯುವ ಅಹಿತಕರ ಘಟನೆಗಳಿಗೆ ಸರಕಾರವನ್ನು ಉತ್ತರದಾಯಿಯನ್ನಾಗಿಸುವುದು, ಆಮೂಲಕ ಸರಕಾರವು ಸಂವಿಧಾನಕ್ಕೆ ಬದ್ಧವಾಗಿ, ಸರಿಯಾದ ದಾರಿಯಲ್ಲಿ ನಡೆಯುವಂತೆ ನೋಡಿಕೊಳ್ಳುವುದು ಇವೆಲ್ಲ ವಿಪಕ್ಷಗಳ ಬಹುಮುಖ್ಯ ಕೆಲಸ. ಈ ಕೆಲಸವನ್ನು ಮಾಡದೇ ಇದ್ದರೆ ಅಥವಾ ಅವನ್ನು ಮಾಡಲು ಅವಕಾಶ ಇಲ್ಲವಾದರೆ ವಿಪಕ್ಷಗಳು ಇರುವುದಾದರೂ ಯಾತಕ್ಕೆ? ಅಲ್ಲಿ ಪ್ರಜಾತಂತ್ರಕ್ಕೆ ನೆಲೆ-ಬೆಲೆಯಾದರೂ ಎಲ್ಲಿ?!

ಪಕ್ಷಗಳನ್ನು ಆಡಳಿತ ಪಕ್ಷ ಮತ್ತು ವಿಪಕ್ಷ ಎಂದು ಎರಡು ಗುಂಪಾಗಿ ವಿಭಜಿಸಿದರೂ ಕೂಡಾ ಅವು ಪರಸ್ಪರ ವಿರೋಧಿಗಳಲ್ಲ. ಜನರ ಹಿತದೃಷ್ಟಿಯಿಂದ, ಸುಗಮ ಆಡಳಿತಕ್ಕಾಗಿ ಅವು ಪರಸ್ಪರ ಪೂರಕವಾಗಿ ಒಂದು ಟೀಮ್ ಆಗಿ ಕೆಲಸ ಮಾಡಬೇಕಾದಂಥವು. ಹಾಗಾಗಿಯೇ ಶಾಸನ ಸಭೆಯ ಕಲಾಪಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗುವುದು, ವಿಪಕ್ಷಗಳು ಎತ್ತುವ ಸವಾಲುಗಳನ್ನು ಉತ್ತರಿಸುವುದು ಇವೆಲ್ಲ ಆಡಳಿತ ಪಕ್ಷದ ಸಾಂವಿಧಾನಿಕ ಜವಾಬ್ದಾರಿ. ಇಲ್ಲಿ ಯಾವುದೇ ರೀತಿಯ ‘ಈಗೋ’ ಗೆ ಅವಕಾಶ ಇರಕೂಡದು. ಅಂತಹ ‘ಈಗೋ’ಗಳಿಂದ ಅಂತಿಮವಾಗಿ ಮತ್ತು ಒಟ್ಟಾರೆಯಾಗಿ ನಷ್ಟವಾಗುವುದು ದೇಶದ ಜನರಿಗೆ; ದೇಶಕ್ಕೆ.

ಆದರೆ, ಈಗ ನಾವು ಎಂತಹ ಪರಿಸ್ಥಿತಿಯನ್ನು ತಲಪಿದ್ದೇವೆ ಎಂದರೆ, ನಮ್ಮಲ್ಲಿ ಭವ್ಯವಾದ ಸಂಸತ್ ಭವನ ಇದೆ, ಆದರೆ ಅದರೊಳಗೇ ಪ್ರಜಾತಂತ್ರಕ್ಕೆ ಅವಕಾಶವಿಲ್ಲ; ಗುಡಿಯಲ್ಲಿ ದೇವರೇ ಇಲ್ಲದಂತೆ! ಸಂಸದೀಯ ಸತ್ಸಂಪ್ರದಾಯಗಳಿಗೆ ಎಂದೋ ಎಳ್ಳುನೀರು ಬಿಡಲಾಗಿದೆ. ಆಡಳಿತ ಪಕ್ಷ ಮತ್ತು ವಿಪಕ್ಷವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಮುತ್ಸದ್ದಿ ನಾಯಕತ್ವವೂ ಇಲ್ಲ. ಸಂಸತ್ ನ ಒಳಗಡೆ ವಿಪಕ್ಷಗಳ ಪ್ರಶ್ನೆಗಳನ್ನು ಉತ್ತರಿಸುವುದು ಬಿಡಿ, ಪ್ರಶ್ನೆಗಳನ್ನು ಕೇಳಲೂ ಅವಕಾಶ ಇಲ್ಲದಂತೆ ಮಾಡಲಾಗುತ್ತಿದೆ (ಮೈಕ್ ಆಫ್ ಮಾಡುವುದು, ಕ್ಯಾಮರಾ ಬೇರೆಡೆಗೆ ತಿರುಗಿಸುವುದೆಲ್ಲ ಅಚ್ಚರಿಗೊಳಿಸದಷ್ಟು ಮಾಮೂಲಾಗಿಯೇ ಹೋಗಿದೆ).

ಪ್ರಧಾನಿ ನರೇಂದ್ರ ಮೋದಿಯವರು ವಿಪಕ್ಷಗಳವರನ್ನು ಶತ್ರುಗಳಂತೆ ನೋಡುತ್ತಾರೆ. ಅವರಿಗೆ ಸಂಸತ್ ಬಗ್ಗೆ, ಸಂಸದೀಯ ಕಾರ್ಯಕಲಾಪಗಳ ಬಗ್ಗೆ ಎಳ್ಳಷ್ಟೂ ಗೌರವ ಇದ್ದಂತೆ ಕಾಣುತ್ತಿಲ್ಲ. ಸರ್ವ ಪಕ್ಷಗಳ ಸಭೆಗೆ ಪ್ರಧಾನಿಗಳು ಹಾಜರಾಗುವುದಿಲ್ಲ. ತಿಂಗಳುಗಳ ಕಾಲ ಸಂಸದೀಯ ಕಲಾಪ ನಡೆದರೂ ಅವರಿಗೆ ಸದನಕ್ಕೆ ಬರಬೇಕು, ಸದನದಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸಬೇಕು, ಚರ್ಚೆಗಳಲ್ಲಿ ಭಾಗವಹಿಸಬೇಕು ಎಂದು ಅನಿಸುವುದಿಲ್ಲ (ಇದೇ ಮನುಷ್ಯ ಹಲವು ಸಾವಿರ ಕೊಟಿಗಳ ಭವ್ಯ ಹೊಸ ಸಂಸತ್ ಕಟ್ಟಡವನ್ನೂ ಕಟ್ಟಿಸಿದ್ದಾರೆ!). ಕಲಾಪ ನಡೆಯುವ ಹೊತ್ತಿನಲ್ಲಿಯೇ ಅವರು ಎಲ್ಲಾದರೂ ಚುನಾವಣಾ ಭಾಷಣ ಮಾಡುತ್ತಿರುತ್ತಾರೆ.

ಒಂದು ವೇಳೆ ಸಂಸತ್ ನಿಯಮವನ್ನು ಬಳಸಿಕೊಂಡು, ಅವರು ಸಂಸತ್ ಗೆ ಬರಲೇಬೇಕಾದಂತಹ ಅನಿವಾರ್ಯ ಪರಿಸ್ಥಿತಿ ನಿರ್ಮಿಸಿದರೆ, ಮತ್ತೆ ಅಲ್ಲಿ ಅವರು ನೆಹರೂ ಯುಗದಿಂದ ಹಿಡಿದು ಎಲ್ಲ ಪೂರ್ವಸೂರಿಗಳನ್ನು ನಿಂದಿಸುತ್ತಾ, ಅಪಹಾಸ್ಯ ಮಾಡುವ ಕೆಲಸದಲ್ಲಿ ತೊಡಗುತ್ತಾರೆ. ವರ್ತಮಾನದ ವಿಷಯ ಮಾತನಾಡುವುದು, ತಮ್ಮ ಲೋಪಗಳನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು, ನಿಮ್ಮ ಕಾಲದಲ್ಲಿ ಏನಾಗಿತ್ತು? ನೀವೇನು ಮಾಡಿದಿರಿ? ಎಂದು ಪ್ರಶ್ನಿಸುವುದು, ಗೇಲಿ ಮಾಡುವುದು ಇತ್ಯಾದಿ What-aboutery ಗಳಲ್ಲಿ ತೊಡಗಿಕೊಳ್ಳುತ್ತಾರೆ. ಮಣಿಪುರದ ಬಗ್ಗೆ ಪ್ರಶ್ನೆ ಕೇಳಿದರೆ, ರಾಜಸ್ತಾನ, ಪಶ್ಚಿಮ ಬಂಗಾಳವನ್ನು ಸ್ವತಃ ಪ್ರಧಾನಿಗಳೇ ಎಳೆದು ತರುತ್ತಾರೆ!

ಪ್ರಧಾನಿಯವರು ಹೇಳಿದ ಸುಳ್ಳು

ದೇಶದ ಈಶಾನ್ಯ ರಾಜ್ಯಗಳಲ್ಲಿ ಒಂದಾದ ಮಣಿಪುರ ಕಳೆದ ಸುಮಾರು ನೂರಕ್ಕೂ ಅಧಿಕ ದಿನದಿಂದ ಹಿಂಸಾಚಾರದಲ್ಲಿ ನಲುಗಿ ಹೋಗಿದೆ. ಕಂಡು ಕೇಳರಿಯದ ಭಯಾನಕ ಘಟನೆಗಳು ಅಲ್ಲಿಂದ ವರದಿಯಾಗುತ್ತಿವೆ. ಆದರೆ ದೇಶದ ಪ್ರಧಾನಿಗಳು ಆ ಬಗ್ಗೆ ಏನೂ ಮಾತನಾಡುತ್ತಿಲ್ಲ, ಏನನ್ನೂ ಮಾಡಿದಂತೆಯೂ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಿಗಳಿಂದ ಉತ್ತರವನ್ನು ವಿಪಕ್ಷಗಳು ಬಯಸಿದ್ದವು. ಪ್ರಧಾನಿಗಳು ಬಂದು ಮಣಿಪುರದ ಬಗ್ಗೆ ಒಂದು ಹೇಳಿಕೆ ನೀಡಲಿ, ಆಮೇಲೆ ಸುದೀರ್ಘ ಚರ್ಚೆ ನಡೆಯಲಿ ಎಂದು ಅವು ಆಶಿಸಿದವು.

ಆದರೆ ಪ್ರಧಾನಿಗಳು ಈ ನ್ಯಾಯ ಸಮ್ಮತವಾದ ಒಂದು ಸಣ್ಣ ಬೇಡಿಕೆಯನ್ನೂ ಒಪ್ಪದೇ ಹೋದಾಗ, ಅವರನ್ನು ಕಡ್ಡಾಯವಾಗಿ ಉತ್ತರಿಸುವಂತೆ ಮಾಡಲು ವಿಪಕ್ಷಗಳು ಲೋಕಸಭೆಯಲ್ಲಿ ಅವಿಶ‍್ವಾಸ ಮತವನ್ನು ಮಂಡಿಸಿದವು. ಹಾಗಾಗಿ ಪ್ರಧಾನಿಗಳು ಲೋಕಸಭೆಗೆ ಬರಲೇಬೇಕಾಯಿತು. ಅನಿವಾರ್ಯವಾಗಿ ಅಲ್ಲಿಗೆ ಬಂದ ಪ್ರಧಾನಿಗಳು ಸುಮಾರು 133 ನಿಮಿಷಗಳ ಕಾಲ ಮಾತನಾಡಿದರೂ ಮಣಿಪುರದ ಬಗ್ಗೆ ಮಾತನಾಡಿದ್ದು ಕೇವಲ ಒಂದೆರಡು ನಿಮಿಷ! ಅಲ್ಲಿಯೂ ಸ್ಪಷ್ಟ ಉತ್ತರವಿಲ್ಲ. ಸಾಲದೆಂಬಂತೆ ವಿಪಕ್ಷಗಳನ್ನು ಟೀಕಿಸುವ ಭರದಲ್ಲಿ ಅವರ ಭಾಷಣದ ತುಂಬಾ ಅಸಂಖ್ಯ ಸುಳ್ಳುಗಳಿದ್ದವು.

ಅಂತಹ ಒಂದು ದೊಡ್ಡ ಸುಳ್ಳು ಎಂದರೆ, 1966 ರಲ್ಲಿ ಇಂದಿರಾಗಾಂಧಿ ಸರಕಾರ ಮಿಝೋರಾಂ ನಲ್ಲಿ ನಮ್ಮದೇ ದೇಶದ ಪ್ರಜೆಗಳ ಮೇಲೆ ಬಾಂಬ್ ದಾಳಿ ನಡೆಸಿತು ಎನ್ನುವುದು. ಮಣಿಪುರದಲ್ಲಿ ತಮ್ಮ ಸರಕಾರದ ಲೋಪ ಅಥವಾ ಅತಿರೇಕವನ್ನು ಪರೋಕ್ಷವಾಗಿ ಸಮರ್ಥಿಸಿಕೊಳ್ಳಲು ಇತಿಹಾಸದಲ್ಲಿ ಆಗಿಹೋದ ಯಾವುದೋ ಒಂದು ಘಟನೆಯನ್ನು ಹೀಗೆ ಅವರು ಅನಗತ್ಯವಾಗಿ ಎಳೆದು ತಂದರು!

1966 ರ ಮಿಝೋರಾಂ ಬಾಂಬ್ ದಾಳಿ ಪ್ರಕರಣ ಹೊಸ ತಲೆಮಾರಿಗೆ ಅಷ್ಟಾಗಿ ಗೊತ್ತಿರದ್ದು. ಹಾಗಾಗಿ, ತಕ್ಷಣ ಪ್ರತಿಕ್ರಿಯೆಗಳು ಬರಲಾರಂಭಿಸಿದವು; ಹೆಚ್ಚಿನವು ತಪ್ಪು ಮಾಹಿತಿಯಿಂದ ಕೂಡಿದ್ದವು. ಎಂದಿನಂತೆ ಬಿಜೆಪಿಯ ಬೆಂಬಲಿಗರು ಒಂದು ಸುಳ್ಳಿಗೆ ಹತ್ತಾರು ಸುಳ್ಳುಗಳನ್ನು ಸೇರಿಸಿ ಪ್ರಧಾನಿಗಳ ಮಾತು ಸರಿ ಎಂದು ಬಿಂಬಿಸಲು ಯತ್ನಿಸಿದರು. ಎಲ್ಲಿಯವರೆಗೆ ಎಂದರೆ, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಆ ಮಿಝೋರಾಂ ಮೇಲಣ ಬಾಂಬ್ ದಾಳಿಯ ನೇತೃತ್ವ ವಹಿಸಿದ್ದು ಆಗ ವಾಯುಪಡೆಯ ಪೈಲಟ್ ಆಗಿದ್ದ, ಮುಂದೆ ಕಾಂಗ್ರೆಸ್ ನಾಯಕರಾದ ದಿವಂಗತ ರಾಜೇಶ್ ಪೈಲಟ್ ಮತ್ತು ಸುರೇಶ್ ಕಲ್ಮಾಡಿ ಎಂದೂ ಹೇಳಿದರು (ರಾಜೇಶ್ ಪೈಲಟ್ ಅವರು ಆಗ ಪೈಲಟ್ ಆಗಿಯೇ ಇರಲಿಲ್ಲ, ಸದರಿ ಬಾಂಬ್ ದಾಳಿ ನಡೆದ ತಿಂಗಳುಗಳ ಬಳಿಕಷ್ಟೇ ಅವರು ಪೈಲಟ್ ಆಗಿ ನೇಮಕವಾದುದು ಎಂಬುದನ್ನು ತಕ್ಷಣ ಅವರ ಪುತ್ರ ಸಚಿನ್ ಪೈಲಟ್ ಪ್ರಮಾಣ ಪತ್ರ ಸಹಿತ ಬಹಿರಂಗಪಡಿಸಿದರು).

ಹಾಗಾದರೆ ಮಿಝೋರಾಂ ನಲ್ಲಿ ಆಗ ನಿಜವಾಗಿಯೂ ನಡೆದುದೇನು? ಅಲ್ಲಿ ಮಾರ್ಚ್ 1966 ರಲ್ಲಿ ಭಾರತೀಯ ವಾಯುಪಡೆಯ ಮೂಲಕ ಬಾಂಬ್ ದಾಳಿ ನಡೆಸಲಾಯಿತೇ? ಬಾಂಬ್ ದಾಳಿ ನಡೆಸಿದ್ದು ಯಾರ ಮೇಲೆ? ಯಾಕಾಗಿ? ಎಂಬುದನ್ನು ತಿಳಿಯಬೇಕಾದರೆ ಆ ಸೇನಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಮತ್ತು ಮಿಜೋರಾಂ ಅನ್ನು ಭಾರತಕ್ಕೆ ಉಳಿಸಿಕೊಟ್ಟ ಭಾರತೀಯ ಸೇನೆಯ ಲೆಜೆಂಡರಿ ಅಧಿಕಾರಿ ಬ್ರಿಗೇಡಿಯರ್ (ಮುಂದೆ ಮೇಜರ್ ಜನರಲ್) ರುಸ್ತುಮ್ ಝಲ್ ಕಬ್ರಾಜಿಯವರ ಬಗ್ಗೆ ಓದಬೇಕು.

ಬ್ರಿಗೇಡಿಯರ್ ರುಸ್ತುಮ್ ಝಲ್ ಕಬ್ರಾಜಿ

ಮೇಜರ್ ಜನರಲ್ ಕಬ್ರಾಜಿಯವರು 1941 ರಲ್ಲಿ ಮಧ್ಯಪ್ರದೇಶದ ಮಾವ್ (Mhow) ನ ಅಧಿಕಾರಿಗಳ ತರಬೇತಿ ಶಾಲೆಯಿಂದ ಕೋರ್ ಆಫ್ ಸಿಗ್ನಲ್ಸ್ ನಲ್ಲಿ ಸೇನಾ ವೃತ್ತಿ ಆರಂಭಿಸಿದವರು. ಮೌಂಟನ್ ಬ್ರಿಗೇಡನ್ನು ಕಮಾಂಡ್ ಮಾಡಲು ನೇಮಕಗೊಂಡ ಮೊದಲ ಸಿಗ್ನಲ್ಸ್ ಆಫೀಸರ್ ಅವರು. 61 ನೇ ಮೌಂಟನ್ ಬ್ರಿಗೇಡ್ ನ ಕಮಾಂಡಿಂಗ್ ಆಫೀಸರ್ ಆಗಿದ್ದವರು. ಮೇಜರ್ ಜನರಲ್ ಕಬ್ರಾಜಿಯವರು ಮುಂದೆ ಡಿವಿಶನ್ ಕಮಾಂಡರ್ ಆಗಿ ಕೆಲಸ ಮಾಡಿದರು. 6 ನೇ ಮೌಂಟನ್ ಬ್ರಿಗೇಡ್ ನ ಜಿಒಸಿ ಆಗಿ ಸೇವೆ ಸಲ್ಲಿಸಿದರು.

ಕಬ್ರಾಜಿಯವರ ಪುತ್ರ ಝುಬಿನ್ ಕಬ್ರಾಜಿಯವರು ಹೇಳುವ ಪ್ರಕಾರ, ಮೇಜರ್ ಜನರಲ್ ಕಬ್ರಾಜಿಯವರು ಕ್ವೆಟ್ಟಾದ ಸ್ಟಾಫ್ ಕಾಲೇಜಿನಲ್ಲಿ ಕಲಿತವರು. 1 ನೇ ಆರ್ಮರ್ಡ್ ಡಿವಿಶನ್ ಸಿಗ್ನಲ್ ರೆಜಿಮೆಂಟ್ ಅನ್ನು ಕಮಾಂಡ್ ಮಾಡಿದವರು. ಜಮ್ಮ ಕಾಶ್ಮೀರದ ಬಾರಾಮುಲ್ಲಾದಲ್ಲಿ 19 ನೇ ಇನ್ ಫೆಂಟ್ರಿ ಡಿವಿಶನ್ ನ ಜಿಎಸ್ ಒ 1 ಆಗಿ ಮತ್ತು ಮಾವ್ ನ ಸ್ಕೂಲ್ ಆಫ್ ಸಿಗ್ನಲ್ಸ್ ನ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸಿದವರು. ವೆಲ್ಲಿಂಗ್ಟನ್ ನ ಡಿಫೆನ್ಸ್ ಸ್ಟಾಫ್ ಕಾಲೇಜಿನಲ್ಲಿ ಚೀಫ್ ಡೈರೆಕ್ಟಿಂಗ್ ಸ್ಟಾಫ್ ಕಾರ್ಡಿನೇಶನ್ ಆಗಿ ಮತ್ತು ಪೂರ್ವ ಕಮಾಂಡ್ ನ ಚೀಫ್ ಸಿಗ್ನಲ್ ಆಫೀಸರ್ ಆಗಿ ಕೆಲಸ ಮಾಡಿದವರು.

ಮೇ. ಜ. ಕಬ್ರಾಜಿಯವರು ಪುಣೆಯ ಸದರ್ನ್ ಕಮಾಂಡ್ ನ ಚೀಫ್ ಆಫ್ ಸ್ಟಾಫ್ ಆಗಿ 1970 ರಲ್ಲಿ ಸೇನೆಯಿಂದ ನಿವೃತ್ತರಾದರು. ಆಗ ಅವರು ಭಾರತದ ರಾಷ್ಟ್ರಪತಿಗಳ ಗೌರವ ಎಡಿಸಿ ಆಗಿದ್ದರು ಕೂಡಾ. ಫೆಬ್ರವರಿ 21, 2008 ರಲ್ಲಿ, 91 ರ ಹರೆಯದಲ್ಲಿ ಅವರು ನಿಧನರಾದರು.

ಮಿಝೋರಾಂ ಸೇನಾ ಕಾರ್ಯಾಚರಣೆ, 1966

1966 ರಲ್ಲಿ, ಮಿಝೋರಾಂನಲ್ಲಿ, ಮಿಝೋ ಬಂಡುಕೋರರು ರಾಜ್ಯದ ಅಸ್ಸಾಂ ರೈಫಲ್ಸ್ ಮತ್ತು ಬಿ ಎಸ್ ಎಫ್ ನೆಲೆಗಳ ಮೇಲೆ ಭಾರೀ ದಾಳಿಗಳನ್ನು ಸಂಘಟಿಸಿದರು. ಸಾವಿರಾರು ಮಿಝೋ ಸಶಸ್ತ್ರ ಬಂಡುಕೋರರು ಏಕಕಾಲಕ್ಕೆ ಅಸ್ಸಾಂ ರೈಫಲ್ಸ್  ಮತ್ತು ಗಡಿ ಭದ್ರತಾ ಪಡೆ (ಬಿ ಎಸ್ ಎಫ್) ನೆಲೆಗಳ ಮೇಲೆ ಎರಗಿ, ಅಂತಿಮವಾಗಿ  ಮಿಝೋರಾಂ ರಾಜದಾನಿ ಐಜ್ವಾಲ್ ತನಕವೂ ತಲಪಿ, ಅಲ್ಲಿ ಸರಕಾರಿ ಕೋಠಿಯಿಂದ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ನಗದು ಹಣವನ್ನು ವ್ಯಾಪಕವಾಗಿ ಲೂಟಿ ಮಾಡಿದರು. ಮಿಝೋ ರೆಬೆಲ್ ಗಳು 1 ಅಸ್ಸಾಂ ರೈಫಲ್ಸ್ ನ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿ, ಅಲ್ಲಿದ್ದ ಡೆಪ್ಯುಟಿ ಕಮಿಷನರ್ ರನ್ನು ಒತ್ತೆ ಸೆರೆಯಾಳಾಗಿ ಇರಿಸಿಕೊಂಡರು. ಸ್ಥಳೀಯ ಜೈಲಿನಿಂದ ಎಲ್ಲ ಕೈದಿಗಳನ್ನು ಬಿಡುಗಡೆಗೊಳಿಸಿದರು. ಮಿಝೋರಾಂ ಗೆ ಸ್ವಾತಂತ್ರ್ಯವನ್ನು ಘೋಷಿಸಿದರು. ಶರಣಾಗುವಂತೆ ಅಸ್ಸಾಂ ರೈಫಲ್ಸ್ ಗೆ ಆದೇಶಿಸಿದರು.

ಅಸ್ಸಾಂ ರೈಫಲ್ಸ್  ಬೆಟಾಲಿಯನ್ ಗೆ ಹೆಲಿಕಾಪ್ಟರ್ ಮೂಲಕ ಮರು ಸರಬರಾಜುಗಳನ್ನು ಮಾಡಲು ಯತ್ನಿಸಲಾಯಿತಾದರೂ, ಬಂಡುಕೋರರ ಭೀಕರ ಗುಂಡಿನ ದಾಳಿಯ ಕಾರಣ ಇದು ಸಾಧ್ಯವಾಗಲಿಲ್ಲ. ಭಾರತವು ಬಹುತೇಕ ಮಿಝೋರಾಂ ಅನ್ನು ಕಳೆದುಕೊಂಡ ಇಂತಹ ಬಿಕ್ಕಟ್ಟಿನ ಹೊತ್ತಿನಲ್ಲಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಮತ್ತು ಮಿಜೋ ಬಂಡುಕೋರರನ್ನು ಹೊರಬ್ಬಲು, ತ್ರಿಪುರದ ಅಗರ್ತಲಾದಲ್ಲಿದ್ದ 61 ನೇ ಮೌಂಟನ್ ಬ್ರಿಗೇಡ್ ಅನ್ನು ಐಜ್ವಾಲ್ ಗೆ ಹೋಗುವಂತೆ ಆದೇಶಿಸಲಾಯಿತು. ಬ್ರಿಗೇಡಿಯರ್ ಕಬ್ರಾಜಿ ಈ ಭೂಸೇನಾ ಕಾರ್ಯಾಚರಣೆಯ ನೇತೃತ್ವ ವಹಿಸಿದರು.

ಬಂಡುಕೋರರ ತೀವ್ರ ಪ್ರತಿರೋಧದ ಕಾರಣ ಸೇನಾಪಡೆಗೆ ಐಜ್ವಾಲ್ ತಲಪಲು ಅನೇಕ ದಿನಗಳೇ ಹಿಡಿದವು. ಕೊನೆಗೂ ಐಜ್ವಾಲ್ ತಲಪಿ ಅಲ್ಲಿನ ಅಸ್ಸಾಂ ರೈಫಲ್ಸ್ ನ ಮುತ್ತಿಗೆಯನ್ನು 2 ಪಾರಾ ಬಟಾಲಿಯನ್ ಗಳ ನೆರವಿನೊಂದಿಗೆ 8 ಸಿಖ್ ನ ಸೇನಾಪಡೆ ಗಳು ಕೊನೆಗೊಳಿಸಿದವು. ಬಂಡುಕೋರರ ವಶದಲ್ಲಿರುವ ಪ್ರದೇಶಗಳನ್ನು ಮರು ವಶಪಡಿಸಿಕೊಳ್ಳಲು 2/11 ಗೂರ್ಖಾ ರೈಫಲ್ಸ್ ಮತ್ತು 3 ಬಿಹಾರ್ ಬಟಾಲಿಯನ್ ಗಳು ಕಾರ್ಯಾಚರಣೆಯ ಇನ್ನೊಂದು ಮಗ್ಗುಲಿನಿಂದ ಮುಂದುವರಿದವು.

ಬಂಡುಕೋರರನ್ನು ಅವರ ನೆಲೆಗಳಿಂದ ಹೊರದಬ್ಬಲು ಭೂಸೇನೆಗೆ ಕಷ್ಟಕರವಾದಾಗ ಮತ್ತು 8 ಸಿಖ್ ಮತ್ತು 2 ಪಾರಾ ರೆಜಿಮೆಂಟ್ ಗಳ ಮುನ್ನಡೆ ಸಾಧ್ಯವೇ ಇಲ್ಲ ಅನಿಸಿದಾಗ ಐಜ್ವಾಲ್ ನ ಬಂಡುಕೋರ ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಲು ವಾಯುಸೇನೆಗೆ ಸೂಚಿಸಲಾಯಿತು. ವಾಯುದಾಳಿಯ ಸಹಾಯದಿಂದ, ಬಂಡುಕೋರರ ವಶವಾಗಿ  ಸ್ವಾತಂತ್ರ್ಯ ಘೋಷಣೆ ಮಾಡಿಕೊಂಡಿದ್ದ ಅಪಾರ ಪ್ರದೇಶವನ್ನು ಮರುವಶಪಡಿಸಿಕೊಳ್ಳುವುದು ಭೂಸೇನೆಗೆ ಸಾಧ್ಯವಾಯಿತು. ತಿಂಗಳ ಕೊನೆಗಾಗುವಾಗ ಬ್ರಿಗೇಡಿಯರ್ ಕಬ್ರಾಜಿಯ ಬ್ರಿಗೇಡ್ ಮಿಝೋರಾಂ ಮೇಲೆ ನಿಯಂತ್ರಣ ಮರು ಪಡೆಯಿತು.

ಇದು ಮಿಜೋರಾಂ ಮೇಲಣ ಬಾಂಬ್ ದಾಳಿಯ ವಾಸ್ತವ ಸತ್ಯ. ಆದರೆ ಸತ್ಯ ಯಾರಿಗೆ ಬೇಕಾಗಿದೆ? ‘ಸತ್ಯ ಮನೆಯಿಂದ ಹೊರಬರುವಾಗ ಸುಳ್ಳು ಇಡೀ ಭೂಮಂಡಲವನ್ನು ಪ್ರದಕ್ಷಿಣೆ ಹಾಕಿಬಂದಿತು’ ಎಂಬ ಮಾತಿದೆ. ಹಾಗಾಗಿದೆ ಪರಿಸ್ಥಿತಿ ಸತ್ಯೋತ್ತರ ಯುಗದಲ್ಲಿ. ದೇಶವನ್ನು ಮುನ್ನಡೆಸಿದ ಪ್ರತಿಯೊಂದು ಸರಕಾರಗಳೂ ದೇಶದ ಸಾರ್ವಭೌಮತೆಯನ್ನು ಮತ್ತು ಅಖಂಡತೆಯನ್ನು ಕಾಪಾಡಿಕೊಳ್ಳಲು ಕರ್ತವ್ಯ ಬದ್ದವಾಗಿದ್ದು, ಕಾಲಕಾಲಕ್ಕೆ ಅವು ಸೂಕ್ತ ಕ್ರಮ ಜರುಗಿಸುತ್ತಲೇ ಬಂದಿವೆ. ಅವುಗಳಲ್ಲಿ ಸಫಲತೆ ಮತ್ತು ವಿಫಲತೆ ಸಹಜ.

ಆದರೆ, ಭೂತಕಾಲದ ಇಂತಹ ಸೂಕ್ಷ್ಮ ವಿಷಯಗಳನ್ನು ಭವಿಷ್ಯದ ಯಾವುದೋ ಸರಕಾರ ವಿಮರ್ಶಿಸುವಾಗ, ಟೀಕಿಸುವಾಗ ತುಂಬಾ ಎಚ್ಚರದಿಂದಿರಬೇಕು, ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಅದು ಪೂರ್ವಸೂರಿಗಳನ್ನು ಅವಮಾನಿಸುವಂತಿರಬಾರದು ಮತ್ತು ದೇಶದ ಸೇನಾಪಡೆಯ ನೈತಿಕ ಬಲ ಕುಂದಿಸುವಂತಿರಬಾರದು. ಆದರೆ, ಈಗಿನ ಸರಕಾರವನ್ನು ನಡೆಸುತ್ತಿರುವವರು ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು, ತಮ್ಮ ರಾಜಕೀಯ ಲಾಭಕ್ಕಾಗಿ ಸುಳ್ಳುಗಳನ್ನು ಹೇಳುವ ಮೂಲಕ ಇತಿಹಾಸಕ್ಕೆ ಅಪಚಾರ ಎಸಗುತ್ತಿರುವುದು ವಿಷಾದದ ಸಂಗತಿ. ಇದು ಒಂದು ರೀತಿಯ ದೇಶದ್ರೋಹದ ಕೆಲಸವಲ್ಲವೇ?

ಶ್ರೀನಿವಾಸ ಕಾರ್ಕಳ

ಚಿಂತಕರೂ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡವರು.

ಇದನ್ನೂ ಓದಿ ಮಣಿಪುರ | ಪ್ರಧಾನಿಯಿಂದ ಚಿಲ್ಲರೆ ರಾಜಕಾರಣ

Related Articles

ಇತ್ತೀಚಿನ ಸುದ್ದಿಗಳು