ಸಧ್ಯ ಶಿವಮೊಗ್ಗ ಮತ್ತು ಭದ್ರಾವತಿ 144 ಸೆಕ್ಷನ್ ಅಡಿಯಲ್ಲಿ ಸೋಮವಾರ ಸಂಜೆಯಿಂದ ಸ್ವಲ್ಪ ಮಟ್ಟಿಗೆ ತಣ್ಣಗಾಗಿದೆ. ಸ್ಥಳೀಯ ಆಡಳಿತದಿಂದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ಅಕ್ಕಪಕ್ಕದ ಜಿಲ್ಲೆ, ತಾಲ್ಲೂಕುಗಳಿಂದ ಹೆಚ್ಚುವರಿ ಪೊಲೀಸರನ್ನು ಕರೆತರಲಾಗಿದೆ. ನಗರದ ಅಮೀರ್ ಅಹ್ಮದ್ ವೃತ್ತ, ಶಿವಪ್ಪ ನಾಯಕ ವೃತ್ತ, ಅಶೋಕ ನಗರ, ನೆಹರೂ ರಸ್ತೆ, ಗಾಂಧಿ ಬಜಾರ್, ರಾಗಿಗುಡ್ಡ ಪ್ರದೇಶಗಳಲ್ಲಿ ನಿನ್ನೆ ಸಂಜೆಯಿಂದಲೇ ಪೊಲೀಸ್ ತುಕಡಿಗಳು ಬೀಡು ಬಿಟ್ಟಿವೆ.
ಇನ್ನು ಟಿಪ್ಪು-ಸಾವರ್ಕರ್ ಫ್ಲೆಕ್ಸ್ ವಿವಾದದ ಹಿನ್ನೆಲೆಯಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ನಿನ್ನೆ ಸಂಜೆಯ ವೇಳೆಗೆ ಚಾಕು ಇರಿತಕ್ಕೆ ಒಳಗಾದವನಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಇಂದು ಬೆಳಿಗ್ಗೆ ಪೊಲೀಸರ ತಂಡ ಚಾಕು ಇರಿದ ವ್ಯಕ್ತಿಯನ್ನು ಬಂಧಿಸಲು ತೆರಳಿದ್ದರು. ಆ ಸಂದರ್ಭದಲ್ಲಿ ವ್ಯಕ್ತಿ ಪೊಲೀಸರ ಮೇಲೂ ಹಲ್ಲೆ ನಡೆಸಿದ ಪರಿಣಾಮ ಪೊಲೀಸರು ಆ ದುಷ್ಕರ್ಮಿ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಜೈಲ್ ವಾರ್ಡ್ ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಈ ನಡುವೆ ಆಗಸ್ಟ್ 18 ರ ರಾತ್ರಿ 10 ಗಂಟೆಯ ವರೆಗೆ ನಿಷೇಧಾಜ್ಞೆ ಮುಂದುವರೆಯಲಿದೆ. ಇದರ ಜೊತೆಗೆ 40 ವರ್ಷದ ಒಳಗಿನವರನ್ನು ಬೈಕ್ ಹಿಂಬದಿ ಕೂತು ಸವಾರಿ ಮಾಡುವುದನ್ನು ನಿಷೇಧ ಮಾಡಲಾಗಿದೆ. ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಇರುವವರೆಗೂ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆ ವರೆಗೂ ಒಟ್ಟಾರೆ ಬೈಕ್ ಸಂಚಾರವನ್ನು ಕೂಡಾ ನಿರ್ಬಂಧಿಸಲಾಗಿದೆ. 5 ಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ. ಯಾವುದೇ ಸಭೆ ಸಮಾರಂಭ ನಡೆಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಇವು ಸಧ್ಯದ ಶಿವಮೊಗ್ಗ ನಗರದ ಪರಿಸ್ಥಿತಿಯಾಗಿದೆ. ಬಿಜೆಪಿ ಆಡಳಿತದಲ್ಲಿ ಪದೇ ಪದೆ ಇಂತಹ ಕೋಮು ಸಂಬಂಧಿತ ಘರ್ಷಣೆ ನಡೆಯುತ್ತಿರುವುದು ಸ್ವತಃ ಬಿಜೆಪಿ ಪಕ್ಷಕ್ಕೆ ಮುಜುಗರ ತರಿಸುವ ವಿಚಾರವಾಗಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಗೃಹ ಮಂತ್ರಿಗಳ ಸ್ವಂತ ಜಿಲ್ಲೆಯಲ್ಲೇ ಇಂತಹ ಘಟನೆಗಳು ನಡೆಯುತ್ತಿರುವುದು ಬಿಜೆಪಿ ಕಾನೂನು ಸುವ್ಯವಸ್ಥೆ ಹತೋಟಿಗೆ ತರಲು ಸೋತಿರುವುದನ್ನ ಎತ್ತಿ ತೋರಿಸುತ್ತಿದೆ. ಪ್ರತಿಪಕ್ಷ ಕಾಂಗ್ರೆಸ್ ಕೂಡಾ ‘ಸರ್ಕಾರ ಮತ್ತು ಸ್ಥಳೀಯ ಆಡಳಿತ ಎಲ್ಲವೂ ಬಿಜೆಪಿ ಹಿಡಿತದಲ್ಲೇ ಇದ್ದೂ, ಮೇಲಿಂದ ಮೇಲೆ ಹಿಂದೂ ಮುಸ್ಲಿಂ ಗಲಾಟೆ ಪರೋಕ್ಷವಾಗಿ ಬಿಜೆಪಿಗೆ ವರದಾನವಾಗಿದೆ, ಅಧಿಕಾರಕ್ಕೇರಲು ಬಿಜೆಪಿ SDPI ಯಂತಹ ಸಂಘಟನೆಗಳನ್ನು ಪರೋಕ್ಷವಾಗಿ ಬೆಂಬಲಿಸುತ್ತಿದೆ. ಕೋಮು ಗಲಭೆ ಅನ್ನೋದು ಬಿಜೆಪಿ ಅಧಿಕಾರದ ಮಾದರಿ’ ಎಂದು ಆರೋಪಿಸಿದೆ.
ಕಾಂಗ್ರೆಸ್ ಪಕ್ಷದ ಆರೋಪಕ್ಕೆ ಸರಿಯಾಗಿ ಬಿಜೆಪಿ ಪಕ್ಷದ ನಾಯಕರೂ ಸಹ ಗಲಭೆ ತಿಳಿಗೊಳಿಸುವ ಬದಲಾಗಿ ಆರೋಪ ಪ್ರತ್ಯಾರೋಪಕ್ಕೆ ತೊಡಗಿದ್ದಾರೆ. ಗಲಭೆ ಹಿಂದೆ ಕಾಂಗ್ರೆಸ್ ಇದೆ, SDPI ಇದೆ. ಎಲ್ಲಾ ಹಂತದಲ್ಲೂ ಅಧಿಕಾರದಲ್ಲಿ ಇರುವ ಬಿಜೆಪಿ ಅಂತವರ ಮೇಲೆ ಸಾಕ್ಷ್ಯಾಧಾರಗಳ ಸಮೇತ ಕ್ರಮ ಕೈಗೊಂಡು ಬಂಧಿಸುವುದು ಬಿಟ್ಟು ಹೀಗೆ ಆರೋಪವನ್ನ ಯಾರಿಗೆ ಮಾಡುತ್ತಿದ್ದಾರೆ ಎಂಬುದು ಸಧ್ಯದ ಪ್ರಶ್ನೆ.
ಇನ್ನು ಶಿವಮೊಗ್ಗದಲ್ಲಿ ಆಗುತ್ತಿರುವ ಈ ಗಲಭೆ 15 ದಿನಗಳಲ್ಲಿ ಶುರುವಾಗುವ ಗಣೇಶ ಉತ್ಸವಕ್ಕೆ ತೀವ್ರವಾದ ಪರಿಣಾಮ ಬೀರುವ ಸಾಧ್ಯತೆ ತೋರುತ್ತಿದೆ. ಪೊಲೀಸರು ಪರಿಸ್ಥಿತಿ ಎಷ್ಟೇ ತಣ್ಣಗಾಗಿಸಿದರೂ ಅದು ಬೂದಿ ಮುಚ್ಚಿದ ಕೆಂಡದಂತೆ. ಯಾವೊಂದು ಗಲಭೆ, ಘರ್ಷಣೆ ಇಲ್ಲದ ಸಂದರ್ಭದಲ್ಲೂ ಶಿವಮೊಗ್ಗ ಗಣೇಶ ಉತ್ಸವದಲ್ಲಿ ಕೋಮುಗಲಭೆ ಆದ ಎಷ್ಟೋ ಉದಾಹರಣೆಗಳು ಕಣ್ಣ ಮುಂದಿವೆ. ಹೀಗಿರುವಾಗ ಮುಂದಿನ ಕೆಲವು ದಿನಗಳು ಮಾತ್ರ ಶಿವಮೊಗ್ಗ ಅತ್ಯಂತ ಸೂಕ್ಷ್ಮ ಪ್ರದೇಶ ಎನ್ನುವುದರಲ್ಲಿ ಎರಡು ಮಾತಿಲ್ಲ.