Saturday, June 15, 2024

ಸತ್ಯ | ನ್ಯಾಯ |ಧರ್ಮ

ಪುಸ್ತಕ ವಿಮರ್ಶೆ | ಬೆಳಗಿನೊಳಗು ಮಹಾದೇವಿಯಕ್ಕ

ಲೇ: ಡಾ. ಎಚ್ ಎಸ್‌ ಅನುಪಮಾ

ಪ್ರಕಾಶನ : ಲಡಾಯಿ ಪ್ರಕಾಶನ

ಪುಟಗಳು : 776

ಬೆಲೆ : 650 ರೂ

ಮೊ. : 9480286844

ಡಾ. ಎಚ್ ಎಸ್ ಅನುಪಮಾ ಅವರ ಮಹತ್ವಾಕಾಂಕ್ಷೆಯ ಮತ್ತು ಪರಿಶ್ರಮದ ಬೃಹತ್ ಕೃತಿ ’ಬೆಳಗಿನೊಳಗು ಮಹಾದೇವಿಯಕ್ಕ. ಇದನ್ನು ಕಾದಂಬರಿ ಎಂದು ಕರೆದಿದ್ದರೂ ಆ ಪ್ರಕಾರದಿಂದ ಆಚೆಗಿನ ಹಲವು ಪ್ರಕಾರಗಳ ಸ್ವರೂಪವನ್ನು ಇದು ಹೊಂದಿರುವುದು ಓದಿದ ಎಲ್ಲರ ಗಮನಕ್ಕೆ ಬರುತ್ತದೆ. ಇದು ಕಾದಂಬರಿ ಹೌದು, ಆದರಷ್ಟೇ ಅಲ್ಲ; ಇದೊಂದು ಸಂಶೋಧನಾ ಕೃತಿಯೂ, ಪ್ರವಾಸ ಕಥನವೂ, ಚರಿತ್ರೆಯ ಮರುನಿರೂಪಣೆಯೂ, ಹೆಣ್ಣು ಕಣ್ಣೋಟದಿಂದ ಅಕ್ಕನೆಂಬ ಬಯಲನ್ನು ಹಿಡಿಯಲೆತ್ನಿಸಿದ ಪ್ರಯತ್ನವೂ ಆಗಿದೆ. ಇದರಲ್ಲಿ ಕಲ್ಪನೆ ಇದೆ, ಕಾಲ್ಪನಿಕ ಪಾತ್ರಗಳಿವೆ, ವಚನ ಚಳವಳಿಯ ಕ್ರೋಢೀಕೃತ ನೋಟವಿದೆ, ಹಲವರ ವಚನಗಳನ್ನು ತರ್ಕಬದ್ಧವಾಗಿ ಮತ್ತು ಸಂದರ್ಭೋಚಿತವಾಗಿ ಜೋಡಿಸಿದ ಪ್ರತಿಭೆಯಿದೆ. ಒಟ್ಟಿನಲ್ಲಿ ಸಾಹಿತ್ಯಲೋಕವು ಪ್ರಕಾರಗಳನ್ನು ಗಡಿಕೊರೆದು ಪ್ರತ್ಯೇಕಿಸಿ ಒಂದೊಂದನ್ನೂ ವಿಶ್ಲೇಷಿಸಿ, ಅವುಗಳ ಚಹರೆಗಳನ್ನು ನಿಗದಿಪಡಿಸಿದ್ದರೆ, ಈ ಕೃತಿ ಇಂಥ ಗಡಿಗಳನ್ನೆಲ್ಲ ಮೀರಿದ, ಗಡಿಗಳನ್ನೇ ನಿರಾಕರಿಸಿದ ಬರಹ ಎನ್ನಬಹುದು.

ಒಟ್ಟು 762 ಪುಟಗಳ ಬೃಹತ್ ಕ್ಯಾನ್‍ವಾಸ್‍ನಲ್ಲಿ ಐದು ವಿಭಾಗಗಳೂ 84 ಅಧ್ಯಾಯಗಳೂ ಇದ್ದು, ಪ್ರತಿಯೊಂದಕ್ಕೂ ತುಂಬ ಸೂಕ್ತವಾದ ಶೀರ್ಷಿಕೆಗಳಿವೆ. ಅಕ್ಕನೆಂಬ ಬಯಲನ್ನು ಗ್ರಹಿಸಲು, ಅರ್ಥಮಾಡಿಕೊಳ್ಳಲು, ಜೊತೆಜೊತೆಯಲ್ಲಿ ಹೆಜ್ಜೆ ಹಾಕಲು, ಅಕ್ಕನ ಸತ್ವವನ್ನು ಅನುಸಂಧಾನ ಮಾಡಿಕೊಳ್ಳಲು 54ರಷ್ಟು ಕೃತಿಗಳ ಹೆಚ್ಚುವರಿ ಓದಿನಿಂದ ಪಡೆದು ಕೊಂಡಿರುವುದಾಗಿ ಲೇಖಕಿ ಹೇಳಿರುವುದೇ ಇದು ಬರೇ ಕಾದಂಬರಿಯಲ್ಲ ಎನ್ನುವುದಕ್ಕಿರುವ ಇನ್ನೊಂದು ಸಮರ್ಥನೆ. ಇಂಥ ಬೃಹತ್ ಕ್ಯಾನ್‍ವಾಸ್‍ನಲ್ಲಿ ಚಿತ್ರಿತವಾದ ಜಗತ್ತನ್ನು ವಿಮರ್ಶೆ ಮಾಡಹೊರಡುವುದು ಒಂದು ಸಾಹಸವೇ ಸರಿ. ಈ ಕೃತಿಯನ್ನು ಪ್ರಕಟಣೆಗೆ ಮೊದಲು ಓದಿದಾಗ, ಇದರ ಅಗಾಧತೆಗೆ, ಕಾಲ್ಪನಿಕತೆಗೆ, ಸೈದ್ಧಾಂತಿಕ ಗ್ರಹಿಕೆಗೆ, ನಿರೂಪಣೆಗೆ ಮತ್ತು ಸಂದರ್ಭೋಚಿತ ಜೋಡಣೆಗೆ, ಅಕ್ಕ ಉಡತಡಿಯಿಂದ ಬಸವಕಲ್ಯಾಣಕ್ಕೆ ಅಲ್ಲಿಂದ ಶ್ರೀಶೈಲ ಮತ್ತು ಕದಳಿಗೆ ನಡೆದಾಡಿರಬಹುದಾದ ದಾರಿಗಳ ಸಾಧ್ಯತೆಯನ್ನು ಕಲ್ಪಿಸಿದ ಬಗೆಗೆ ಬೆರಗು ಮೂಡಿತ್ತು. ಇಂದು ಮುಂದೇನು ಎಂಬ ಕುತೂಹಲಕ್ಕಿಂತ ಹೇಗೆ ಆಗುಮಾಡಲಾಗಿದೆ ಎಂಬುದರ ಕಡೆಗೆ ಗಮನ ಹರಿಸಿ ಓದಲು ನನಗೆ ಸಾಧ್ಯವಾಗಿದೆ. ಈ ನೆಲೆಯಲ್ಲಿ ಸಹಪಯಣಿಗಳಾಗಿ ನನ್ನ ಅನುಭವವನ್ನಷ್ಟೇ ಇಲ್ಲಿ ಇಡಲು ಪ್ರಯತ್ನಿಸುವೆ.

ಅಕ್ಕಮಹಾದೇವಿಯ ಬದುಕು ಮತ್ತು ಅವಳ ವಚನಗಳ ಕುರಿತು ಹೇರಳವಾದ ಅಧ್ಯಯನಗಳು ನಡೆದಿವೆ. ಕನ್ನಡದ ಅನೇಕ ಲೇಖಕಿಯರಿಗೆ ಅಕ್ಕ ಹಲವು ವಿಧಗಳಲ್ಲಿ ಆದರ್ಶವಾಗಿ, ವ್ಯಕ್ತಿ ಸ್ವಾತಂತ್ರ್ಯದ ದ್ಯೋತಕವಾಗಿ, ಸವಾಲಾಗಿ, ಏರಬೇಕಾದ ಗಿರಿಯಾಗಿ, ಸಾಧನೆಗೆ ಮಾದರಿಯಾಗಿ ಕಾಲಕಾಲಕ್ಕೆ ಕಂಡವಳು. ಆದರೆ ನೀ ಏರಿದ ಎತ್ತರಕ್ಕೆ ನಾನೇರಲಾರೆ; ನಿನ್ನಂತೆ ಲೌಕಿಕವ ತೊರೆದು ಬದುಕುವ ಕಸುವು ನನ್ನಲ್ಲಿಲ್ಲ; ನಿನ್ನಂತೆ ಸಮಾಜವನ್ನು ಎದುರು ಹಾಕಿಕೊಳ್ಳುವ ಎದೆಗಾರಿಕೆ ನನ್ನಲ್ಲಿಲ್ಲ ಎಂದೇ ಹಲವರು ನಿಟ್ಟುಸಿರು ಬಿಟ್ಟರು; ಏದುಸಿರು ಬಿಟ್ಟರು. ಇನ್ನು ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೋ ಅವಳ ವೈಯಕ್ತಿಕ ವಿವರ ಮತ್ತು ವಚನಗಳು ಪ್ರತ್ಯೇಕ ಜಗತ್ತಾಗಿ ಕಂಡಿವೆ. ಅವರಿಗಾಗಲಿ, ಅವರಿಗೆ ತರಗತಿಯಲ್ಲಿ ಅಕ್ಕಮಹಾದೇವಿಯನ್ನು ಪರಿಚಯಿಸುವ ಅಧ್ಯಾಪಕರಿಗಾಗಲಿ, ಅವಳ ಪೂರ್ವಾಶ್ರಮ ನಾಲ್ಕೈದು ವಾಕ್ಯಗಳಲ್ಲಿ ಹೇಳಿ ಮುಗಿಸುವ ಕಥನ. ಹರಿಹರನ ರಗಳೆಯ ಮಹಾದೇವಿಯಕ್ಕ ಇನ್ನೊಂದು ತುದಿಯಲ್ಲಿ ನಿಲ್ಲುತ್ತಾಳೆ. ಓರ್ವ ಬಾಲೆ, ಪೋರಿ ಅಕ್ಕನಾಗಿ ರೂಪುಗೊಂಡ ಪರಿ ಯಾವುದು ಎಂಬ ಶೋಧವು ತರಗತಿಯ ಚರ್ಚೆಗೆ ಕಾಲಹರಣ ಎನಿಸುತ್ತದೆ. ಶೈಕ್ಷಣಿಕ ಲೋಕವು ಅಕ್ಕ ಹೇಗೆ ರೂಪುಗೊಂಡಳು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳದೆ, ಅವಳನ್ನು ಸ್ತ್ರೀಲೋಕದ ಅಪವಾದಾತ್ಮಕ ನಿದರ್ಶನವಾಗಿ ಸುಲಭವಾಗಿ ಸ್ವೀಕರಿಸಿತು. ಇನ್ನು ಭಕ್ತರಿಗೆ ಆಕೆ ವಿರಾಗಿಣಿ, ಸಂತಳಾಗಿ ಮುಖ್ಯಳಾದಳು. ಅವಳ ವಚನಗಳು ಮತ್ತೆಮತ್ತೆ ಗಟ್ಟಿಯಾಗಿ ಉಚ್ಚರಿಸುವ ಹೆಣ್ಣು-ಗಂಡಿನ ನಡುವಿನ ಸಖತನ, ಸಾಂಗತ್ಯ, ಪ್ರೇಮ, ದಾಂಪತ್ಯದ ಆದರ್ಶ ಮಾದರಿಗಳನ್ನು ಸಮಾಜವು ಪ್ರಜ್ಞಾಪೂರ್ವಕವಾಗಿ ತೆರೆಮರೆಗೆ ಸರಿಸಲೆತ್ನಿಸಿತು. ಇನ್ನೊಂದು ಸಣ್ಣ ಗುಂಪಿಗೆ ನಗ್ನಳಾಗಿ ಹೊರಟ ಅಕ್ಕ ಹುಚ್ಚಿ, ಮತಿಗೆಟ್ಟವಳಾಗಿ ಕಂಡಳು. ಒಟ್ಟಿನಲ್ಲಿ ಸಾಮಾಜಿಕರು ಅವಳು ಆತುಕೊಂಡ ಬತ್ತಲೆತನಕ್ಕೆ ಕಣ್ಣು ಮುಚ್ಚಿದರು; ಹೇಸಿದರು; ಅಪ್ರತಿಭರಾದರು; ಭಯಗೊಂಡರು. ಹೀಗಾಗಿ ಇವರಾರಿಗೂ ಅಕ್ಕ ಇಡಿಯಾಗಿ ದಕ್ಕಲಿಲ್ಲ.

‘ಬೆಳಗಿನೊಳಗು’ ಕೃತಿಯನ್ನು ವಿಶ್ಲೇಷಣೆಯ ಅನುಕೂಲಕ್ಕಾಗಿ ಎರಡು ಭಾಗಗಳಾಗಿ ವಿಂಗಡಿಸುವುದಾದರೆ, ಉಡತಡಿಯೊಳಗೆ ರೂಪುಗೊಂಡ ಅಕ್ಕ ಮತ್ತು ಉಡತಡಿ ತೊರೆದ ಬಳಿಕದ ಅಕ್ಕ ಎಂದು ವಿಂಗಡಿಸಬಹುದು. ‘ಕಲ್ಲರಳಿ’ ಮತ್ತು ‘ಹೂವಾಗಿ’ ಎಂಬ ಎರಡು ಭಾಗಗಳು ಪೂರ್ವಾರ್ಧದ ಅಕ್ಕನ ಬದುಕಿನ ಕುರಿತಾಗಿವೆ; ಮತ್ತು ಅದೇ ಕಾರಣಕ್ಕೆ ವಿಶಿಷ್ಟವೂ ಮಹತ್ವದವೂ ಆಗಿವೆ. ನಿರೂಪಕಿಗೆ ಅಕ್ಕನೆಂಬ ಚೇತನ ರೂಪುಗೊಳ್ಳಲು ಪೂರಕವಾದ ಪರಿಸರದ ಬಗ್ಗೆ ಇನ್ನಿಲ್ಲದ ಕುತೂಹಲ, ಉತ್ಸಾಹ. ಅವು ಹಲವು ಚಾರಿತ್ರಿಕ ಮತ್ತು ಸಂಭವನೀಯ ವಿದ್ಯಮಾನಗಳನ್ನು ಗುರುತಿಸುತ್ತವೆ ಮತ್ತು ಊಹಿಸುತ್ತವೆ. ಅಕ್ಕಮಹಾದೇವಿಯ ಅಸಾಮಾನ್ಯತೆಯಲ್ಲಿ ಅವಳದೆಷ್ಟು ಪಾಲು? ಅವಳ ಕುಟುಂಬದ ಪಾಲೆಷ್ಟು? ಪರಿಸರದ ಪಾಲೆಷ್ಟು? ಚರಿತ್ರೆಯ ಮತ್ತು ಅಂದು ಪ್ರಚಲಿತವಿದ್ದ ಮತಧರ್ಮಗಳ ಕೊಡುಗೆ ಎಷ್ಟು? ಈ ಕುರಿತ ಪುನಾರಚನೆಯೇ ಈ ಕಾದಂಬರಿಯ ಮುಖ್ಯ ಚಾಲಕ ಶಕ್ತಿ ಎನಿಸಿದೆ. ಅಂತೆಯೇ ಮೂವತ್ತು ಅಧ್ಯಾಯಗಳಲ್ಲಿ (ಸುಮಾರು ಮುನ್ನೂರು ಪುಟ)  ಈ ಹುಡುಕಾಟ ತಾರ್ಕಿಕ ಅಂತ್ಯವನ್ನು ಕಂಡಿದೆ.

ಸ್ವಾತಂತ್ರ್ಯ ಅಪೇಕ್ಷಿಸುವ, ಭಯವಿಲ್ಲದ, ನಿಸರ್ಗ ಶಿಶುವೊಂದನ್ನು ಸಾಮಾಜೀಕರಣವು ನಿರಂತರ ಪಳಗಿಸುವ ಮೂಲಕ ಹೆಣ್ಣಾಗಿ/ಗಂಡಾಗಿ ರೂಪುಗೊಳಿಸುವ ಸತ್ಯ ಎಲ್ಲರ ಅರಿವಿನಲ್ಲಿದ್ದರೂ ಪ್ರಜ್ಞಾಸ್ತರದಲ್ಲಿ ಜಾಗೃತವಾಗಿಲ್ಲ. ಅಕ್ಕಮಹಾದೇವಿ ಯಾರ ಮತ್ತು ಯಾವ ಪಳಗಿಸುವ ಕುಲುಮೆಗೂ ಸಿಲುಕದೆ, ಪ್ರತಿಯೊಂದನ್ನೂ ಪ್ರಶ್ನಿಸುವ ಮೂಲಕ ತನ್ನನ್ನೂ, ತನ್ನ ಸುತ್ತಲಿನವರನ್ನೂ, ಅವರ ರೀತಿ-ರಿವಾಜುಗಳನ್ನೂ, ಪರಿಸರದ ಆಗುಹೋಗುಗಳನ್ನೂ ಗ್ರಹಿಸುತ್ತ, ನಿರಾಕರಿಸುತ್ತ, ವಿಶ್ಲೇಷಿಸುತ್ತ, ತನ್ನದೇ ಮಾದರಿಯನ್ನು ಕಟ್ಟಿಕೊಂಡವಳು. ಲಿಖಿತ ದಾಖಲೆಗಳೇ ಇಲ್ಲದ, ಪೌರಾಣಿಕ ಆವರಣದಲ್ಲಿ ಹುದುಗಿ ಹೋದ, ಸಹಜ ಹೆಜ್ಜೆಗುರುತುಗಳೇ ಮಾಸಿಹೋದ ಭೂತಕಾಲದಿಂದ ಅಕ್ಕನ ಹುಟ್ಟು-ಬಾಲ್ಯ-ಯೌವನ-ಶಿಕ್ಷಣ-ದಾಂಪತ್ಯದ ಬದುಕನ್ನು ಲೇಖಕಿ ಅತ್ಯಂತ ತಾರ್ಕಿಕವಾಗಿ, ವಾಸ್ತವವೆಂಬಂತೆ ಕಟ್ಟಿಕೊಟ್ಟಿದ್ದಾರೆ. ಮನೆಯವರ, ಆಳುಕಾಳುಗಳ, ಗೆಳತಿಯರ ನಡುವಲ್ಲಿ ಬೆಳೆವಾಗ, ಅವರೆಲ್ಲರ ಮಾದು, ಮಾದಿ, ಮಾನಿ, ಮಾದೇವಿ ಎಂಬ ಸಂಬೋಧನೆಗಳು ಆಕೆ ಅಕ್ಕಮಹಾದೇವಿ ಎನ್ನುವುದನ್ನೇ ಓದುಗರಿಗೆ ಮರೆಸಿಬಿಡುತ್ತವೆ!

ಕಾದಂಬರಿಯ ಉತ್ತರಾರ್ಧದಲ್ಲಿ ಹಲವರಿಂದ ಹಲವೆಡೆ ಕುತೂಹಲ, ಅಚ್ಚರಿ, ಹೇವರಿಕೆಗೆ ಕಾರಣವಾದ ಅಕ್ಕನ ಮೂರು ಸಂಗತಿಗಳು- ಅವಳ ಅಧ್ಯಾತ್ಮದ ಹಸಿವು, ಅವಳ ಅರೆನಗ್ನತೆ ಮತ್ತು ಅಂಗಸಾಧನೆ- ಏಕಾಏಕಿ ಸಂಭವಿಸಿದ್ದಾಗಿರದೆ, ಬಾಲ್ಯದಲ್ಲೇ ಅವುಗಳ ಬೇರು ಇರುವುದನ್ನು ಕಾದಂಬರಿಯು ನಿಚ್ಚಳಗೊಳಿಸಿದೆ. ಮಠದ ಗುರುಗಳಾದ ಸಿದ್ಧಲಿಂಗರ ಮೂಲಕವೇ ಮಹಾದೇವಿಗೆ ಬಳ್ಳಿಗಾವೆಯ ಅಲ್ಲಮಪ್ರಭುವಿನ ಬಗ್ಗೆ, ಕಲ್ಯಾಣದ ಶರಣ ಚಳವಳಿಯ ಬಗ್ಗೆ, ಬಸವಾದಿ ಶರಣರ ಸಿದ್ಧಾಂತಗಳ ಬಗ್ಗೆ ಅರಿವು, ಕುತೂಹಲ, ಬೆರಗು ಮೂಡಿವೆ. ತಂದೆಯಿಂದ ಮತ್ತು ಎಕ್ಕಮ್ಮಜ್ಜಿ ಕಟ್ಟೆಯ ಮಾಲತಿಯಿಂದ ಅಂಗಸಾಧನೆಯ ಪಟ್ಟುಗಳನ್ನು ಕಲಿತಳು; ಆಚರಣೆಗೂ ತಂದಳು. ಭಸ್ಮಧಾರಿ ನಗ್ನಮುನಿ, ಜೈನ ದಿಗಂಬರ ಮುನಿಗಳಿಂದ ನಗ್ನತೆಯ ಕುರಿತ ಅನೇಕ ಪ್ರಶ್ನೆಗಳಿಗೆ ಉತ್ತರ ಪಡೆಯುತ್ತಾಳೆ. ಎಕ್ಕಮ್ಮಜ್ಜಿ, ಬಿದ್ರಕಾನಿನ ಅಜ್ಜಿ, ಅವರ ಊರಾಚೆಯ ಕಾಡಿನ ಸಮುದಾಯ ಹೀಗೆ ಸುತ್ತಮುತ್ತ ವಸ್ತ್ರದ ಕುರಿತು ಕನಿಷ್ಟ ಕಾಳಜಿ ಹೊಂದಿದ ಹಲವರನ್ನು ಕಂಡು, ತನ್ನ ಪ್ರಶ್ನೆ, ಕುತೂಹಲ ಮತ್ತು ಜಿಜ್ಞಾಸೆಗಳನ್ನು ಮುಂದಿಡುತ್ತಾಳೆ. ತನ್ನ ತಾಯಿಗೂ ಇದೇ ಪ್ರಶ್ನೆ ಎಸೆದಾಗ “ಎಲ್ಲನ್ನು ಬಿಟ್ಟೆ ಅನ್ನಕ್ಕೆ ಮಾ ಧೈರ್ಯ ಬೇಕು. ಆತುಮ ಶಕ್ತಿ ಬೇಕು. ಅಂತಿಂಥಾ ಧೈರ್ಯ ಸಾಕಾಗಲ್ಲ, ಸುಲಬಿಲ್ಲ ಮಾದು”(ಪುಟ 141) ಎಂಬ ಮಾತೂ ಅವಳ ಮನೋಲೋಕದಲ್ಲಿ ದಾಖಲಾಗುತ್ತದೆ. ಇವೆಲ್ಲವೂ ಒಂದು ತುರಿಯಾವಸ್ಥೆಯಲ್ಲಿ ಅವಳನ್ನು, ಅವಳ ಬದುಕಿನ ಆಯ್ಕೆಯನ್ನು ನಿರ್ಧರಿಸುತ್ತವೆ.

ಇಡೀ ಕಾದಂಬರಿಯ ಅತ್ಯಂತ ಪ್ರಭಾವೀ ಹಾಗೂ ಪರಿಣಾಮಕಾರೀ ಭಾಗವೆಂದರೆ ‘ನಾ ನಿಲ್ಲುವಳಲ್ಲ’ ಅಧ್ಯಾಯ. ಇಲ್ಲಿಯ ಒಂದೊಂದು ಸಣ್ಣಸಣ್ಣ ವಿವರಗಳು, ಘಟನೆಗಳು, ಮಾತುಗಳು ಮತ್ತು ಪ್ರತಿಕ್ರಿಯೆಗಳು ಮುಂದಿನ ಘಟನೆಯ ಬೆಳವಣಿಗೆಗೆ ಅನಿವಾರ್ಯವಾಗುವುದನ್ನು ನಾವು ಓದಿಯೇ ಅರಿಯಬೇಕು. ಬಾಲ್ಯಸಖಿ ಚಂದ್ರಿಯನ್ನು ಕಾಣಹೋಗುವ ಅಕ್ಕನ ತೀರ್ಮಾನ, ಕಸಪಯ್ಯನ ಅಸಮ್ಮತಿ, ಒಯ್ದ ಊಟದ ಹೆಡಿಗೆ, ಕಸಪಯ್ಯನ ಅನಿರೀಕ್ಷಿತ ಆಗಮನ, ಅವನ ಸೆಡವು, ಆವೇಶ, ಮೂದಲಿಕೆ, ‘ನೀನುಟ್ಟ, ತೊಟ್ಟ ಎಲ್ಲವೂ ನನ್ನದೆಂಬ’ ತುಟಿಮೀರಿದ ಮಾತು, ಕಠೋರಾತಿ ಕಠೋರ ವರ್ತನೆಗಳು ಆಂತರ್ಯದ ಅಕ್ಕನನ್ನು ಬಡಿದೆಬ್ಬಿಸುತ್ತವೆ. ಕೆಲಕ್ಷಣ ಗೆಳತಿಯೊಂದಿಗೆ ಮಾತಾಡಿ ಹಗುರಾಗಿ ಹೋಗಬೇಕೆಂದು ಬಂದವಳು, ದುಂಡಗೆ ಎಲ್ಲರನ್ನು, ಎಲ್ಲವನ್ನು ಬಿಟ್ಟು ಹೊರಡುವಲ್ಲಿಗೆ ಮುಕ್ತಾಯವಾಗುತ್ತದೆ. ‘ಎಲ್ಲ ಕಳಚಿ ಹೊರಡುವುದು ಸುಲಭಿಲ್ಲ ಮಾದು ಸುಲಭಿಲ್ಲ’ ಎಂಬ ತಾಯಿಯ ಮಾತು, ಆ ಕ್ಷಣ ಅವಳಿಗೆ ಸಹಜ, ಸತ್ಯ, ಸುಲಭವಾಗಿ ಬಿಡುವುದರ ಹಿಂದೆ ಎಕ್ಕಮ್ಮಜ್ಜಿ, ಜಟ್ಟಮ್ಮ, ಮಾಲತಿಯಂಥವರ ಚೈತನ್ಯ, ಅದುವರೆಗಿನ ಅವಳ ಒಳತೋಟಿಯ ಸಂಘರ್ಷಗಳು ಮುಪ್ಪುರಿಗೊಂಡಿದ್ದು, ಅವಳ ತೀರ್ಮಾನವನ್ನು ಅನಿವಾರ್ಯ ಗೊಳಿಸಿರುವುದನ್ನು ಇಡೀ ಅಧ್ಯಾಯ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ.

ಅಕ್ಕ ಅಪವಾದವಲ್ಲ; ಮತಿಭ್ರಷ್ಟಳಂತೂ ಅಲ್ಲವೇಅಲ್ಲ. ಅವಳಂತೆ ಸ್ವತಂತ್ರ ಬದುಕನ್ನು ಅರಸಿದ ಹೆಣ್ಣುಮಕ್ಕಳ ಗುಂಪು ಅಂದಿನ ಕಾಲದಲ್ಲಿ ಎಲ್ಲೆಡೆಯೂ ಇತ್ತು. ಇದೊಂದು ಬಹಿಷ್ಕೃತ ಮಹಿಳಾ ಸಮಾಜ. ಇದರಲ್ಲಿ ಒಂಟಿ ಹೆಂಗಸರಿದ್ದಾರೆ, ಮನೆಮಠಗಳು ಹೊರದೂಡಿದವರಿದ್ದಾರೆ, ಗಂಡ ಬಿಟ್ಟವರು, ತೊರೆದವರು, ಓಡಿಬಂದವರು, ಹೇಸಿದವರು ಎಂಬ ದೊಡ್ಡ ಪಟ್ಟಿಯೇ ಕಾದಂಬರಿಯಲ್ಲಿದೆ. ಇವರ ಬೀಡು ಊರಾಚೆ, ಕೆರೆದಂಡೆಯ ಕಟ್ಟೆಯ ಮೇಲೆ ಸಾಗಿದೆ. ಈ ಸತ್ಯವನ್ನು ಸಮಕಾಲೀನ ಸಮಾಜ ಮಾತ್ರ ಉಪೇಕ್ಷಿಸಿ, ತಿರಸ್ಕರಿಸಿ, ಪ್ರಭುತ್ವದ ಬಲದಿಂದ ಹಿಮ್ಮೆಟ್ಟಿಸಿ, ತಾವು ಗೆದ್ದೆವೆಂಬ, ತಮ್ಮವರನ್ನು ಅವರಿಂದ ರಕ್ಷಿಸಿದೆವೆಂಬ ಸುಳ್ಳು ಭ್ರಮೆಯಲ್ಲಿ ಉಳಿದಿದೆ. ಒಂದೆಡೆ ಹಣಿದರೇನು ಇನ್ನೊಂದೆಡೆ ಅವರಂಥ ಹೆಣ್ಣುಗಳು ತಾವೇ ತಾವಾಗಿ ಜೀವಿಸುವ ವಾಸ್ತವ ಸತ್ಯವು ಅಕ್ಕ ಉಡತಡಿ ತೊರೆದು ಹೋದ ದಾರಿಯುದ್ದಕ್ಕೂ ಕಾಣಸಿಗುತ್ತದೆ. ಪುರುಷ ಪ್ರಧಾನ ಸಮಾಜವು ತಾನು ಹಾಕಿದ ಗೆರೆಯೊಳಗೆ ಬದುಕಿದ ಹೆಣ್ಣು ಜೀವಗಳನ್ನು ಕೀರ್ತಿಸಿದರೆ, ಗೆರೆ ದಾಟಿದವರನ್ನು ಹೀಗೆ ಬಹಿಷ್ಕರಿಸುವ ಸತ್ಯದ ಅನಾವರಣವೇ ಕಾದಂಬರಿಯ ಶಕ್ತಿ.

(ಡಾ ಎಚ್‌ ಎಸ್‌ ಅನುಪಮಾ ಅವರ ʼಬೆಳಗಿನೊಳಗು ಮಹಾದೇವಿಯಕ್ಕʼ ಕಾದಂಬರಿಯನ್ನು ಡಾ ಸಬಿಹಾ ಭೂಮೀಗೌಡ ಅವರು ಸವಿಸ್ತಾರವಾಗಿ ವಿಮರ್ಶಿಸಿದ್ದಾರೆ. ಈ ಸುದೀರ್ಘ ವಿಮರ್ಶೆಯನ್ನು ಮೂರು ಭಾಗಗಳಲ್ಲಿ ಪೀಪಲ್‌ ಮೀಡಿಯಾವು ಪ್ರಕಟಿಸುತ್ತದೆ.)

ಡಾ. ಸಬಿಹಾ ಭೂಮೀಗೌಡ

ಲೇಖಕರು, ವಿಮರ್ಶಕರು

Related Articles

ಇತ್ತೀಚಿನ ಸುದ್ದಿಗಳು