Friday, May 3, 2024

ಸತ್ಯ | ನ್ಯಾಯ |ಧರ್ಮ

ಒಡೆದು ಆಳುವ ನೀತಿಯ ಮೂಲ ಪುರುಷರು ಬ್ರಿಟಿಷರೇ..!!?

ಮೂಲ ಬ್ರಿಟಿಷರದ್ದೆಂದು ನಂಬಲಾಗುವ “ಒಡಕನ್ನು ಸೃಷ್ಟಿಸಿ ಗೆಲ್ಲುವ” ತಂತ್ರಕ್ಕೆ ಈ ದೇಶದಲ್ಲಿ ಬ್ರಿಟಿಷ್ ವಸಾಹತಿಗೂ ಹಿಂದಿನ ಇತಿಹಾಸವಿದೆಯೆನ್ನುವುದು ಅಷ್ಟೇ ಸತ್ಯ. ಪಂಚತಂತ್ರದ ಕತೆಯಿಂದ ಹಿಡಿದು ಅನೇಕ ನೀತಿ ಶಾಸ್ತ್ರ ಹಾಗೂ ಪೌರಾಣಿಕ ಕಾವ್ಯಗಳಲ್ಲೂ ಕೂಡ ಈ ಒಡೆದಾಳುವ ನೀತಿಯ ಉಲ್ಲೇಖಗಳಿವೆ. ಒಕ್ಕಲಿಗರ ಪ್ರಾಬಲ್ಯವಿರುವ ಮಂಡ್ಯದಲ್ಲಿ ಹುಟ್ಟಿಕೊಂಡ ಉರಿಗೌಡ, ನಂಜೇ ಗೌಡರ ಕತೆ ಕೂಡ ಪಕ್ಕಾ ಒಡೆದಾಳುವ ನೀತಿಯ ಝಲಕ್ಕೇ ಹೊರತು ಬೇರೇನಲ್ಲ…. ಇದು ಶಂಕರ್‌ ಸೂರ್ನಳ್ಳಿ ಲೇಖನ.

ಕರಾವಳಿಯಲ್ಲಿ ತುಳು ಸಂಸ್ಕೃತಿ ಅಥವ ತುಳುನಾಡ ಕುರಿತ ಭಾಷಣ, ಸಿನಿಮಾ, ನಾಟಕ, ಹಾಡುಗಳು ಬಂತೆಂದಾಕ್ಷಣ ಅಲ್ಲಿ ಪರಶುರಾಮ ಸೃಷ್ಟಿ ಎನ್ನೋ ವಿಚಾರ ಪ್ರಸ್ತಾಪ ಗೊಳ್ಳಲೇ ಬೇಕು. ಅದೊಂಥರಾ ಅಲಿಖಿತ ನಿಯಮವಿದ್ದಂತೆ. ವೈದಿಕ ಪರಶುರಾಮನ ಕತೆಯನ್ನ ಹುಟ್ಟು ಹಾಕಿದರೆ ಅದನ್ನು ಜನಮಾನಸದಲ್ಲಿ ಗಟ್ಟಿಗೊಳಿಸಿದ್ದು ಮಾತ್ರ ಇಂತಹ ಸಾಂಸ್ಕೃತಿಕ ಹರಿಕಾರರೇ ಎಂಬುದನ್ನು ಯಾವತ್ತೂ ಮರೆಯಬಾರದು. ಅದೇ ರೀತಿ ಒಡೆದಾಳುವ ನೀತಿ- ಉದಾಹರಣೆಗೆ, ಪ್ರಸ್ತುತ ರಾಜಕಾರಣಿಗಳು ಅನುಸರಿಸುವ ತಂತ್ರಗಾರಿಕೆಯಂತವುಗಳನ್ನು ಹೇಳುವಾಗ ಬ್ರಿಟಿಷರ ಒಡೆದಾಳುವ ನೀತಿ ಎಂದೆನ್ನುವುದು ಸಾಮಾನ್ಯ ವಾಡಿಕೆ. ನಿಜಕ್ಕೂ ಒಡೆದಾಳುವ ನೀತಿಗೆ ವಾರಸುದಾರರು ಯಾರು? ನಾವು ಸಹಜವಾಗಿ ಹೇಳುವಂತೆ ಬ್ರಿಟಿಷರೇ..ಅಥವಾ ಮತ್ತಿನ್ಯಾರೇ?


ಚುನಾವಣಾ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳು ಭರ್ಜರಿ ತಯಾರಿಯಲ್ಲಿರುವಾಗ ಅದೇ ನೆಪದಲ್ಲಿ ಒಕ್ಕಲಿಗ ಪ್ರಾಬಲ್ಯವಿರುವ ಮಂಡ್ಯಕ್ಕೆ ಇಂಡಿಯಾದ ಪ್ರಧಾನಿಯನ್ನು ಕರೆಯಿಸಿಕೊಂಡು ರೋಡ್ ಶೋ ಕಾರ್ಯಕ್ರಮವಿಟ್ಟುಕೊಂಡ ಆಡಳಿತ ಪಕ್ಷವು ತನ್ನೀ ಕಾರ್ಯಕ್ರಮದ ದ್ವಾರಕ್ಕೆ ಮೊನ್ನೆ ಮೊನ್ನೆ ಹುಟ್ಟಿಕೊಂಡ ಉರಿ ಗೌಡ ಮತ್ತು ನಂಜೇ ಗೌಡರ ಹೆಸರನ್ನಿಟ್ಟು ಸುದ್ದಿ ಮಾಡಿತ್ತು. ಬಹಳ ವಿರೋಧಗಳು ಬಂದ ಹಿನ್ನೆಲೆಯಲ್ಲಿ ಅದಕ್ಕೂ ಮುಖ್ಯವಾಗಿ ಇದು ಲೆಕ್ಕಕ್ಕಿಂತ ಹೆಚ್ಚು ಚರ್ಚೆಗೊಳಗಾದಲ್ಲಿ ಟಿಪ್ಪುವನ್ನು ವಧಿಸಿದವರೆಂಬ ಈ ಕಾಲ್ಪನಿಕ ಕಥಾ ಪಾತ್ರಗಳ ಸೃಷ್ಟಿಯ ಹಿಂದಿನ ಹೂರಣ ಹೊರ ಬೀಳುವ ಅಪಾಯ (ಈಗಾಗಲೇ ಇತಿಹಾಸಕಾರರು ಈ ಕಥೆಯನ್ನ ಐತಿಹಾಸಿಕ ಸಾಕ್ಷಿಗಳ ಸಮೇತ ಅಲ್ಲಗಳೆದಿದ್ದಾರೆ)ವನ್ನು ಮನಗಂಡು ಅದನ್ನೀಗ ತೆರವುಗೊಳಿಸಿ ದ್ವಾರದ ಹೆಸರನ್ನೂ ಕೂಡ ಏಕಾಏಕಿ ಬದಲಾಯಿಸಲಾಯ್ತು. ಗಮನಿಸಿ ಇಲ್ಲಿರುವುದೂ ಕೂಡ ಪಕ್ಕಾ ಒಡೆದಾಳುವ ನೀತಿಯ ಝಲಕ್ಕೇ ಹೊರತು ಬೇರೇನಲ್ಲ.


ಒಕ್ಕಲಿಗರ ಪ್ರಾಬಲ್ಯವಿರುವ ಮಂಡ್ಯದಲ್ಲಿ ಉರಿಗೌಡ, ನಂಜೇ ಗೌಡರ ಹೆಸರಲ್ಲಿ ಮತ್ತು ಅವರು ಮುಸಲ್ಮಾನ ಟಿಪ್ಪುವನ್ನ ಕೊಂದು ಸೇಡು ತೀರಿಸಿಕೊಂಡರೆಂಬ ಕಥೆಯ ಮೂಲಕ ಒಕ್ಕಲಿಗ ಸಮುದಾಯದ ಧಾರ್ಮಿಕ ಭಾವನೆಯನ್ನು ಕೆರಳಿಸಿ ಅವರನ್ನು ಹಿಂದುತ್ವದ ಬುಟ್ಟಿಗೆ ಬೀಳಿಸುವ ಹುನ್ನಾರ ಇಲ್ಲಿ ನಡೆದಿತ್ತು. ಹಿಂದೆ ಕೋಮು ಪ್ರಚೋದನೆಯ ಮೂಲಕ ಬಹುಸಂಖ್ಯಾತ ಬಿಲ್ಲವರನ್ನು ಕಾಂಗ್ರೆಸ್‌ ನಿಂದ ತಮ್ಮೆಡೆಗೆ ಸೆಳೆದುಕೊಂಡಂತಹ ಅನುಭವವಿರುವ ಹಿಂದುತ್ವವಾದಿಗಳು ತಮ್ಮ ಪಕ್ಷದ ಒಕ್ಕಲಿಗ ನಾಯಕರನ್ನೇ ಛೂ ಬಿಟ್ಟು ಉರಿ ಗೌಡ ನಂಜೇ ಗೌಡರ ಕಟ್ಟುಕಥೆಯನ್ನು ಹಬ್ಬಿಸಲು ನೋಡಿದ್ದವು. ಆ ಪ್ರಕ್ರಿಯೆ ಈಗ ಈ ಮಹಾದ್ವಾರದ ತನಕವೂ ಬಂದು ನಿಂತಿದೆಯಾದರೂ ಹಿಂದುತ್ವವಾದಿ ಸಂಘಟನೆಗಳ ಈ ಹೊಂಚಿ ಒಡೆದಾಳುವ ತಂತ್ರಕ್ಕೆ ಆರಂಭದಲ್ಲೇ ಎದಿರೇಟು ಸಿಕ್ಕ ಪರಿಣಾಮಕ್ಕೆ ಇದು ಅವರು ಯೋಜಿಸಿದಷ್ಟು ಯಶಸ್ವಿಯಾದಂತೇನೂ ತೋರುತ್ತಿಲ್ಲ..


ಮೂಲ ಬ್ರಿಟಿಷರದ್ದೆಂದು ನಂಬಲಾಗುವ ಈ “ಒಡಕನ್ನು ಸೃಷ್ಟಿಸಿ ಗೆಲ್ಲುವ” ತಂತ್ರಕ್ಕೆ ಈ ದೇಶದಲ್ಲಿ ಬ್ರಿಟಿಷ್ ವಸಾಹತಿಗೂ ಹಿಂದಿನ ಇತಿಹಾಸವಿದೆಯೆನ್ನುವುದು ಅಷ್ಟೇ ಸತ್ಯ. (ಗೌರಿ ಲಂಕೇಶ್ ಪತ್ರಿಕೆಯಲ್ಲಿ ಹಿಂದೆಯೇ ಈ ಕುರಿತು ಬರೆದಿದ್ದೆ) ಬುದ್ಧಿವಂತರಲ್ಲದ ರಾಜಕುಮಾರರಿಗೆ ವಿಷ್ಣು ಶರ್ಮನೆಂಬ ಪಂಡಿತ ನೀತಿಕಥೆಗಳ ಮೂಲಕ ತಿದ್ದಿದನೆಂಬ ಕಥೆಯ ಪಂಚತಂತ್ರದಿಂದ ಹಿಡಿದು ಅನೇಕ ನೀತಿ ಶಾಸ್ತ್ರ ಹಾಗೂ ಪೌರಾಣಿಕ ಕಾವ್ಯಗಳಲ್ಲೂ ಕೂಡ ಈ ಒಡೆದಾಳುವ ನೀತಿಯ ಉಲ್ಲೇಖಗಳಿವೆ. ವಿಷ್ಣು ಶರ್ಮನ ಪ್ರಸಿದ್ಧ ಪಂಚತಂತ್ರವೆಂಬ ಐದು ಬಗೆಯ ತಂತ್ರಗಳಲ್ಲಿ ಈ ಒಡೆದಾಳುವ ತಂತ್ರ (ಮಿತ್ರಭೇಧ) ಕೂಡ ಒಂದು. ಅದೇ ರೀತಿ ಭಾರತದ ಮಹಾಕಾವ್ಯಗಳಲ್ಲೊಂದಾದ ಮಹಾಭಾರತದಲ್ಲಿಯೂ ತನ್ನ ಸ್ವಾರ್ಥ ಸಾಧನೆಗಾಗಿ ಒಡೆದಾಳುವ ಅಥವಾ ಎತ್ತಿ ಕಟ್ಟಿ ಕಾರ್ಯಸಾಧನೆ ಮಾಡಿಕೊಳ್ಳುವಂತಹ ಕಥೆಯನ್ನು ಕಾಣಬಹುದು.


ಕ್ಷತ್ರಿಯ ಮತ್ತು ಬ್ರಾಹ್ಮಣರಿಗೆ ವಿದ್ಯೆಗೆ ಅವಕಾಶವಿದ್ದ ಆ ಕಾಲದಲ್ಲಿ ಗುರುಕುಲದಲ್ಲಿ ಸಹಪಾಠಿಗಳಾಗಿದ್ದ ಬ್ರಾಹ್ಮಣ ದ್ರೋಣ ಮತ್ತು ಕ್ಷತ್ರಿಯ ದ್ರುಪದ ರಾಜಕುಮಾರ ಮಹಾ ಗೆಳೆಯರಾಗಿದ್ದರಂತೆ. ಎಷ್ಟೊಂದು ಗೆಳೆತನವೆಂದರೆ ರಾಜಕುಮಾರ ದ್ರುಪದ ದ್ರೋಣನಲ್ಲಿ “ಮುಂದೆ ನಾನು ರಾಜನಾದಾಗ ನೀನು ಬಾ ನಿನಗೆ ಕೇಳಿದ್ದನ್ನು ಕೊಡುವೆ” ಅಂದಿದ್ದನಂತೆ. ಅದೇ ರೀತಿ ಎಷ್ಟೋ ಸಮಯದ ಬಳಿಕ ದ್ರೋಣ ಇದೇ ನೆಪವಿಟ್ಟುಕೊಂಡು ದ್ರುಪದನಲ್ಲಿಗೆ ಹೋದಾಗ ಆತ ಅವಮಾನಿಸಿ ಕಳುಹಿಸಿದನಂತೆ. ಇದಕ್ಕೆ ಕುಪಿತನಾದ ದ್ರೋಣ ಮುಂದೆ ಅರ್ಜುನನಂತಹ ಶಿಷ್ಯನನ್ನು ಇನ್ನಿಲ್ಲದಂತೆ (ಏಕಲವ್ಯ, ಕರ್ಣನಂತವರಿಗೆ ದ್ರೋಹ ಬಗೆದು) ಬೆಳೆಸಿ ಅವನ ಮೂಲಕ ದ್ರುಪದನನ್ನು ಗೆದ್ದು  ಸೇಡನ್ನು ತೀರಿಸಿಕೊಳ್ಳುತ್ತಾನೆಯೇ ಹೊರತು ಹಸ್ತಿನಾಪುರದ ಅನ್ನ ತಿಂದು ಆತ ತನ್ನ ಪಾಂಡವ -ಕೌರವ ಶಿಷ್ಯಂದಿರನ್ನು ಎಂದೂ ಸಮಾನವಾಗಿ ಕಂಡಿರಲಿಲ್ಲ. ದ್ರೋಣನಲ್ಲಿ ಈ ಗುರು ಭಾವಕ್ಕಿಂತ ದ್ರುಪದನ ಮೇಲಿನ ಸೇಡಿನ ಭಾವವೇ ’ಗುರು”ತರವಾಗಿತ್ತು.


ಇನ್ನು, ಮತ್ತೊಂದು ಮಹಾ ಕಾವ್ಯ ರಾಮಾಯಣದಲ್ಲೂ ಕೂಡ ಬ್ರಾಹ್ಮಣ ರಾವಣನ ತಮ್ಮ ತನ್ನ ಅಣ್ಣಂದಿರಂತೆ ”ರಾಕ್ಷಸೀಯ’ ಗುಣಗಳಿಲ್ಲದೇ ಧರ್ಮಾತ್ಮನೆಂದು ಆರೋಪಿಸಲ್ಪಟ್ಟ ವಿಭೀಷಣ ಒಡ ಹುಟ್ಟಿದ ತನ್ನ ಸಹೋದರನ ಬೆನ್ನಿಗೆ ಅಥವಾ ಕಡೆ ಪಕ್ಷ ತಟಸ್ಥವಾಗಿಯಾದರೂ ನಿಲ್ಲುವ ಬದಲು ಅಪರಿಚಿತ ಹಾಗೂ ತಂಗಿಯ ಅಂಗಾಗಗಳನ್ನ ಕತ್ತರಿಸಿ ವಿರೂಪಗೊಳಿಸಿದ ದೂರದ ಅಯೋಧ್ಯೆಯ ಸಹೋದರರ ಪರ ನಿಂತು ರಾಮನ ಗೆಲುವಿಗೆ ಕಾರಣನಾಗುತ್ತಾನೆ. ಲಂಕಾ ರಹಸ್ಯಗಳನ್ನು ರಾವಣ, ಕುಂಭಕರ್ಣ, ಇಂದ್ರಜಿತು, ಮೇಘನಾದರಂತಹ ಮಹಾವೀರರ ಸೂಕ್ಷ್ಮ ದೌರ್ಬಲ್ಯಗಳನ್ನೆಲ್ಲ ಸಾಂದರ್ಭಿಕವಾಗಿ ವೈರಿಗಳಿಗೆ ತಿಳಿಸುತ್ತಾ ರಾವಣ ಮತ್ತು ಲಂಕಾ ನಗರಿಯ ಸೋಲಿಗೆ ನೇರವಾಗಿ ಕಾರಣನಾಗಿ ಬಳಿಕ ಆತನೆ ರಾಜ್ಯವಾಳುತ್ತಾನೆ.

ಅದೇ ರೀತಿ, ನಂದರಾಜರಿಂದ ಅವಮಾನಿತನಾದ ಚಾಣಕ್ಯನ ಪಾತ್ರವೂ ಕೂಡ ಚಂದ್ರಗುಪ್ತನನ್ನು ಎತ್ತಿ ಕಟ್ಟಿ ತನ್ನ ಕಾರ್ಯಸಾಧನೆ ಮಾಡುತ್ತದೆ. ಮೂಲತ: ಮಧ್ಯ ಏಷಿಯಾದಿಂದ ಬಂದು ಜನಾಂಗೀಯವಾಗಿ ಅತೀ ಅಲ್ಪ ಸಂಖ್ಯಾತರಾಗಿದ್ದ ಆರ್ಯನ್ ಬುಡಕಟ್ಟಿಗೆ ಸೇಡು ಅಥವ ಕಾರ್ಯಸಾಧನೆಯ ನೆಪದಲ್ಲಿ ಅವರಾಗೇ ಬಹು ಸಂಖ್ಯಾತ ಬಲವಾನ್ ಗಳ ಮೇಲೆ ಮುಗಿಬೀಳುವ ಯೋಜನೆ ಊಹಿಸಲೂ ಆಗದಂತದ್ದು. ಹಾಗಾಗಿ ಪಂಚತಂತ್ರದಲ್ಲಿ ಅವರೇ ಹೇಳಿಕೊಂಡ ಈ “ಮಿತ್ರಬೇಧ” ಸಿದ್ಧಾಂತ ಆಗಾಗ ಬಳಕೆ ಆಗುತ್ತಲೇ ಇರುತ್ತದೆ. ಕಾಲ ಬದಲಾಗಿದೆ. ಆವತ್ತು ಈ ಯೋಜನೆ, ಯೋಚನೆ ಅವರದ್ದಾದರೂ ಅವರ ಉಪಸ್ಥಿತಿಯೂ ಸಹ ಸಣ್ಣ ಮಟ್ಟಿಗಾದರೂ ಇರುತ್ತಿತ್ತು. ಆದರೆ ಇವತ್ತು ತಂತ್ರ ಒಂಚೂರು ಬದಲಾಗಿದೆ. ಯೋಜನೆ ಅವರದ್ದೇ ಆಗಿದ್ದರೂ ಪಿಕ್ಚರ್ ನಲ್ಲಿ ಅವರು ಎಲ್ಲೂ ಕಾಣಸಿಗರು. ಅದಕ್ಕೇ ಪಂಚತಂತ್ರದಿಂದ ಹಿಡಿದು ಅನೇಕ ನೀತಿ ಶಾಸ್ತ್ರ ಹಾಗೂ ಪೌರಾಣಿಕ ಕಾವ್ಯಗಳಲ್ಲೂ ಕೂಡ ಈ ಒಡೆದಾಳುವ ನೀತಿಯ ಉಲ್ಲೇಖಗಳಿವೆ. ಪ್ರಚಾರಕ್ಕೆ ಒಕ್ಕಲಿಗ ನಾಯಕರನ್ನೇ ಛೂ ಬಿಟ್ಟದ್ದು. ಕಥೆ ಕಟ್ಟಿದವರು ಎಲ್ಲೂ ಇಲ್ಲ.


ಶಂಕರ್ ಸೂರ್ನಳ್ಳಿ

ಲೇಖಕರು

Related Articles

ಇತ್ತೀಚಿನ ಸುದ್ದಿಗಳು