Friday, June 14, 2024

ಸತ್ಯ | ನ್ಯಾಯ |ಧರ್ಮ

ಪುಸ್ತಕ ವಿಮರ್ಶೆ | ಬೆಳಗಿನೊಳಗು ಮಹಾದೇವಿಯಕ್ಕ

ಲೇ: ಡಾ. ಎಚ್ ಎಸ್‌ ಅನುಪಮಾ

ಪ್ರಕಾಶನ : ಲಡಾಯಿ ಪ್ರಕಾಶನ

ಪುಟಗಳು :776

ಬೆಲೆ : 650 ರು

ಮೊ. : 9480286844

ಭಾಗ- 3

ಕಾದಂಬರಿಯ ‘ಬಲ್ಲವರಿದ ಪೇಳಿ’ ಎಂಬ ಕೊನೆಯ ಭಾಗವು 11 ಅಧ್ಯಾಯಗಳನ್ನು ಒಳಗೊಂಡಿದ್ದು, ಕದಳಿಯತ್ತ ದಿಟ್ಟಿನೆಟ್ಟು ಹೊರಟ ಅಕ್ಕನನ್ನು ಇವು ಕೇಂದ್ರೀಕರಿಸಿವೆ. ಹತ್ತಾರು ಕನಸು ಮತ್ತು ಕುತೂಹಲಗಳನ್ನು ಹೊತ್ತು ಕಲ್ಯಾಣ ತಲುಪಿದ ಅಕ್ಕ, ಅಲ್ಲಿಂದ ಹೊರನಡೆವಾಗ ಅಲ್ಲಿನ ರಾಜಕೀಯ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಘರ್ಷಗಳ ಒಳಸುಳಿಗಳನ್ನು ಅರಿತಳು; ದಿನನಿತ್ಯ ಇದು ಸರಿ, ಇದು ತಪ್ಪು ಎಂಬ ಚರ್ಚೆಯ ಒಳಗೆ ಗಿರಕಿ ಹೊಡೆಯುವ ಶರಣಪಂಥವು ಸೆರೆಮನೆಯಂತೆ ಭಾಸವಾಗಿ ಅಲ್ಲಿಂದ ಹೊರಜಿಗಿದಳು; ಅಲ್ಲಮಪ್ರಭು ಕೈದೋರಿದ ಕದಳಿಯ ದಾರಿ ಹಿಡಿದಳು. ಮಾರ್ಗಮಧ್ಯೆ ಚೆಂಚು ಪರಿವಾರದ ಒಳಹೊಕ್ಕು, ಅಲ್ಲಿಂದಲೂ ಹೊರನಡೆದಳು. ಶ್ರೀಶೈಲದ ಚೆನ್ನಮಲ್ಲಿಕಾರ್ಜುನನ ಗುಡಿಮುಂದೆ ತಿಂಗಳುಗಳನ್ನು ಕಳೆದರೂ ಗುಡಿಯ ಒಳಹೊಗಲಿಲ್ಲ! ಸಿದ್ಧ, ಪಾಶುಪತ, ಕಾಳಾಮುಖ ಮುಂತಾದ ಪಂಥದ ಸಾಧಕರ ಮಾತಿಗೆ ಅಲ್ಲಿ ಕಿವಿಯಾದಾಗ ಮಾತ್ರ ಮೊದಲ ಬಾರಿಗೆ ಅವಳಿಗೆ ತನ್ನದು ಯಾವ ಪಂಥ? ತನ್ನ ಗುರುವಿನ ಪಂಥ ಯಾವುದು ಎಂಬ ಜಿಜ್ಞಾಸೆ ಮೂಡುತ್ತದೆ! ಆದರದು ಕ್ಷಣಹೊತ್ತು ಮಾತ್ರ. ಯಾವುದಾದರೇನು? ಬಯಲ ಹೊಕ್ಕವಳಿಗೆ ಪಂಥಗಳ ಹಂಗೇಕೆ ಎಂದು ಕದಳಿಯಲ್ಲಿ ಕರಗಿಹೋದಳು.

ಅಂತಿಮವಾಗಿ ಕಾದಂಬರಿಯನ್ನು ಸಮಗ್ರವಾಗಿ ಗ್ರಹಿಸುವಾಗ, ಮೊತ್ತಮೊದಲು ಮನಸ್ಸಿಗೆ ಬರುವುದು ಲೇಖಕಿಯ ಪರಿಶ್ರಮ, ಸಮಗ್ರ ನೋಟದ ಆಸ್ಥೆ, ಬಹುತೇಕರಿಗೆ ಅಪರಿಚಿತವಾದ ಅಕ್ಕನ ಪೂರ್ವಾಶ್ರಮದ ನಿರೂಪಣೆ ಕುರಿತ ಶ್ರದ್ಧೆ, ಶರಣ ಚಳವಳಿಯ ಕುರಿತ ವಿಮರ್ಶಾತ್ಮಕ  ಮತ್ತು ಬಹುಮುಖೀ ಆಯಾಮದ ನೋಟ, ಘಟನೆಗಳನ್ನು ಮರುನಿರೂಪಿಸುವಾಗಿನ ಸೃಜನಾತ್ಮಕ ನೆಲೆ, ಸೋದರಿತ್ವವನ್ನು ಕೃತಿಯುದ್ದಕ್ಕೂ ಹೆಣೆದ ಬಗೆ, ಬಿಡಿಚಿತ್ರಗಳನ್ನು ಒಗ್ಗೂಡಿಸಿ ಮರುಕಟ್ಟಲೆತ್ನಿಸಿದ ಚಾರಿತ್ರಿಕ ನೋಟ, ಸಂಶೋಧನಾ ಶಿಸ್ತು ಮತ್ತು ಸುಲಲಿತ ನಿರೂಪಣಾ ಮಾದರಿ ಹೀಗೆ ಹಲವನ್ನು ನೆನಪಿಸಿ ಕೊಳ್ಳಬೇಕೆನಿಸುತ್ತದೆ. ಭಿನ್ನ ವೃತ್ತಿಕ್ಷೇತ್ರವನ್ನು ಅವಲಂಬಿಸಿಯೂ ಕನ್ನಡದ ಓದುಗರಿಗೆ ಅವರು ಕಾಣಿಸಲೆತ್ನಿಸಿದ ಅಕ್ಕನ ಬದುಕಿನ ಸಾಧ್ಯತೆಗೆ ನಿಜವಾಗಿಯೂ ಮೆಚ್ಚುಗೆ ಸಲ್ಲಬೇಕು.

ಆರಂಭದಲ್ಲಿ ಈ ಕಾದಂಬರಿಯು ಅಕ್ಕನ ಬದುಕು-ಚಿಂತನೆ ಮತ್ತು ಲೋಕದೃಷ್ಟಿಯನ್ನು ಕಟ್ಟಿಕೊಡುವ ಆಸ್ಥೆಹೊಂದಿದೆ ಎಂದಿದ್ದೆ. ಬಹುಶ: ಅದನ್ನು ಇನ್ನಷ್ಟು ಸ್ಪಷ್ಟ ಪಡಿಸುವುದಾದರೆ, ಅಕ್ಕನೆಂಬ ಅಗಾಧ ಚೇತನದ ಮೂಲಕ ಕಾದಂಬರಿಯು ಒಟ್ಟು ಮಹಿಳಾ ಲೋಕದೃಷ್ಟಿಯನ್ನು ಕಟ್ಟಿಕೊಡುವ ಆಸ್ಥೆಯನ್ನು ಹೊಂದಿದೆ. ಮೊದಲ ಅಧ್ಯಾಯವು ಎಕ್ಕಮ್ಮಜ್ಜಿಯಿಂದ ಆರಂಭವಾಗಿ, ಅಕ್ಕ ಕದಳಿಯನ್ನು ಹೊಗುವಲ್ಲಿಗೆ ಮುಕ್ತಾಯವಾಗುವುದು ಸಾಂಕೇತಿಕ. ಕಣ್ಣೆದುರಿನ ಎಕ್ಕಮ್ಮಜ್ಜಿ ಮತ್ತವಳ ಬಳಗವನ್ನು ಉಪೇಕ್ಷಿಸಿ, ದಮನಿಸಿ ಇಟ್ಟ ಸಮಾಜಕ್ಕೆ ಅಕ್ಕಮಹಾದೇವಿಯ ಮುಂದೆ ಮಂಡಿಯೂರುವುದು ಅನಿವಾರ್ಯವಾಗಿದೆ. ಇದರ ಕಾರಣವನ್ನು ಅಕ್ಕನ ವ್ಯಕ್ತಿತ್ವದಲ್ಲಿ ಹುಡುಕಬೇಕೇ ಅಥವಾ ಅಕ್ಕ ತನ್ನ ಸಂವೇದನೆ, ಜೀವನ ದೃಷ್ಟಿಗಳನ್ನು ಪ್ರಧಾನ ಧಾರೆಯ ಸಾಹಿತ್ಯ ಲೋಕದಲ್ಲಿ ದಾಖಲಿಸಿದ್ದರಲ್ಲಿ ಕಾಣಬೇಕೇ? ಏಕೆಂದರೆ ಎಕ್ಕಮ್ಮಜ್ಜಿ, ಜಟ್ಟಮ್ಮ, ಮಾಲತಿ, ಮೈಲಬ್ಬೆ, ತಿಪ್ಪವ್ವ ಮುಂತಾದ ದಾರಿದೇವತೆಗಳೆಲ್ಲ ಅಕ್ಕನ ಹಾದಿಯಲ್ಲಿ ಹೆಜ್ಜೆಹಾಕಿ ಬೇರೆಬೇರೆ ಹಂತಗಳಲ್ಲಿ ನಿಂತವರು; ಮೌಖಿಕ ಪರಂಪರೆಯ ಪ್ರತಿನಿಧಿಗಳು. ಶ್ರದ್ಧಾಮತಿ, ಮಂಕಾಳಮ್ಮ ಮುಂತಾದ ಕೆಲವರು ಧಾರ್ಮಿಕ ಜಿಜ್ಞಾಸೆಗಳಲ್ಲಿ ಗಟ್ಟಿಗಿತ್ತಿಯರಾಗಿ ಸಾಧು ಸಂತರ ಜೊತೆ ವಾದ ಮಂಡಿಸುವಷ್ಟು ಬೆಳೆದವರು; ಎಲ್ಲ ಪಂಥದೊಳಗೂ ಹೆಣ್ಣು ದ್ವಿತೀಯ ದರ್ಜೆಯ ಪ್ರಜೆಯಾಗಿಯೇ ಪರಿಗಣಿತವಾಗಿರುವುದನ್ನು ಗ್ರಹಿಸಿ, ಅಂಥ ಸಮಾಜಗಳಿಂದ ಹೊರಗುಳಿದವರು. ಹೀಗೆ ಸಮಾಜದಲ್ಲಿ ಕೌಟುಂಬಿಕ ಚೌಕಟ್ಟನ್ನು ನಿರಾಕರಿಸಿ ಸ್ವತಂತ್ರ ಬದುಕನ್ನು ಆಯ್ದುಕೊಂಡವರು ಕುಲಟೆಯರು, ಬಹಿಷ್ಕೃತರು ಎನಿಸಿದರೆ, ಭಕ್ತಿಯ ಆಸರೆ ಪಡೆದವರು ನಿಧಾನಕ್ಕೆ ಮಾನ್ಯರಾಗಿದ್ದಾರೆ; ಅದೇ ಸಮಾಜದಿಂದ ಭಯಮಿಶ್ರಿತ ಗೌರವಕ್ಕೂ ಪಾತ್ರರಾಗಿದ್ದಾರೆ (ಅಕ್ಕ ಅಂಥ ಒಬ್ಬಳಲ್ಲ, ಮೀರಾಬಾಯಿ, ಹರಪನಹಳ್ಳಿ ಭೀಮವ್ವ ಮುಂತಾದವರನ್ನು ನೆನಪಿಸಿಕೊಳ್ಳಬಹುದು).

ಅಕ್ಕ ಮತ್ತು ಅಲ್ಲಮನ ಭಾವಸಂಬಂಧದ ತಂತು ಅವಳ ಬಾಲ್ಯದಿಂದ ಕೊನೆವರೆಗೆ ಕೃತಿಯಲ್ಲಿ ವಿಶಿಷ್ಟವಾಗಿ ಒಡಮೂಡಿದೆ. ಗಿರಿ-ಗವಿ ಸಂವಾದ ಗಮನ ಸೆಳೆಯುವ ಭಾಗ. ಈ ರೀತಿ ಹೇಳಿಯೂ ಹೇಳದ, ಎಚ್ಚರ-ಸುಶುಪ್ತಿ ನೆಲೆಯ, ಕನಸೋ-ವಾಸ್ತವವೋ ಎಂಬ ಸಂವಾದದ ಉದ್ದೇಶವಾದರೂ ಏನು? ಇದನ್ನು ಓದುಗರ ಜಿಜ್ಞಾಸೆಗೆ ಬಿಡುವುದೋ ಅಥವಾ ಸಾಮಾಜಿಕ ವಿರೋಧಗಳನ್ನು ತಡೆಯಲು ಗುರಾಣಿಯಾಗಿ ಬಳಸಿಕೊಂಡಿರುವ ನಿರೂಪಣೆಯೋ ಅಥವಾ ಎಲ್ಲ ಸಂಬಂಧಗಳಿಗೂ ನಿರ್ದಿಷ್ಟ ಚೌಕಟ್ಟು ಹಾಕಿ, ಅರ್ಥವನ್ನು ನೀಡುವ ಸಾಮಾಜಿಕರ ದೃಷ್ಟಿಕೋನಕ್ಕೆ ಮುಖಾಮುಖಿಯಾಗಿ ಪದಗಳಿಗೆ ಸಿಗಲಾರದ ಭಾವಸಂಬಂಧಗಳ ಸ್ಥಾಪನೆಯ ಸೂಚಕವೋ ಹೇಗೆ ಬೇಕಾದರೂ ಅರ್ಥೈಸಬಹುದು.

 ‘ಬಂದಿತು ಕಲ್ಯಾಣ’ ಮತ್ತು ‘ಎಳೆಗರುವ ರಕ್ಷಿಸಿದ ಹುಲಿ’ ಈ ಅಧ್ಯಾಯಗಳನ್ನು ಮುಖಾಮುಖಿಯಾಗಿ ಇಟ್ಟು ನೋಡಿದಾಗ, ಎರಡರ ನಿರೂಪಣಾ ಕ್ರಮದ ಭಿನ್ನತೆಗಳು ಅಕ್ಕನ ವ್ಯಕ್ತಿತ್ವದ ಮೇಲೆ ಬೀರುವ ಪರಿಣಾಮಗಳನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಅಕ್ಕನನ್ನು ಪರೀಕ್ಷಿಸುವೆನೆಂದು ಬಂದ ಕಿನ್ನರಿ ಬೊಮ್ಮಯ್ಯನ ಕಣ್ಣಲ್ಲಿ ಅಕ್ಕನ ವ್ಯಕ್ತಿತ್ವ ಕ್ಷಣಕ್ಷಣಕ್ಕೂ ಹಿರಿದಾಗುತ್ತ, ಗುರುತ್ವ ಪಡೆಯುತ್ತ, ಎತ್ತರಕ್ಕೇರಿದರೆ, ಎರಡನೆಯ ನಿರೂಪಣಾ ಕ್ರಮದಲ್ಲಿ ಗಂಗಾಂಬಿಕೆ, ನೀಲಾಂಬಿಕೆ ಮತ್ತು ನಾಗಮ್ಮರ ಮನೋವ್ಯಾಪಾರದ ಅನಾವರಣಕ್ಕೆ ಅಕ್ಕನ ‘ಕಾಯಕದವರ ಕಾಯಕ’ದ ಸೇವೆಯು ನಿಮಿತ್ತವಾಗಿ, ಅವಳು ಆನುಷಂಗಿಕಳಾಗುತ್ತಾಳೆ. ಹೀಗೆ ಕೃತಿ ಉತ್ತರಾರ್ಧದಲ್ಲಿ ಅಕ್ಕನ ವ್ಯಕ್ತಿತ್ವವು ಅಲ್ಲಲ್ಲಿ ತೆಳುವಾಗಿ, ಹೊಳಪು ಕಳೆದು ಕೊಂಡಂತೆ ಅನಿಸುತ್ತದೆ.

ಅಕ್ಕನ ಪೂರ್ವಾಶ್ರಮದ ಭಾಗದಷ್ಟು ಉತ್ತರಾರ್ಧವು ಯಾಕೆ ಕಾದಂಬರಿಯಲ್ಲಿ ಪರಿಣಾಮಕಾರಿಯಾಗಿಲ್ಲ ಎಂದು ಪದೇಪದೇ ನಾನು ಪ್ರಶ್ನಿಸಿಕೊಂಡಿರುವೆ. ಅಕ್ಕನ ಉತ್ತರಾರ್ಧದ ಬದುಕು ನಮಗೆ ಪರಿಚಿತವೆಂದು ಹೀಗೆ ಅನಿಸಿದೆಯೇ? ಅವಳ ಪಯಣದ ಕ್ಷಣದಿಂದ ಕದಳಿ ತಲುಪಿದ ಕ್ಷಣದವರೆಗೆ ಅವಳ ವೈಚಾರಿಕ ಬೆಳವಣಿಗೆಯು ಸ್ಫುಟವಾಗುವುದಿಲ್ಲವೆಂದೇ? ಅಲ್ಲೆಲ್ಲ ಅವಳೋರ್ವ ಪ್ರವಾಸಿಗಳಂತೆ, ಶರಣ ಕಾಯಕದವರ ಕಾಯಕದವಳಾಗಿ ಉಳಿದಳೆಂದೇ? ಬಸವಣ್ಣ ಮತ್ತು ಅಲ್ಲಮರಿಗೆ ತನ್ನ ಪ್ರಶ್ನೆಗಳ ಮೊನೆಯಿಂದ ಘಾಸಿಗೊಳಿಸಿದಳು ಎಂಬುದು ಕೇವಲ ಹೇಳಿಕೆ ಎನಿಸಿದ್ದರಿಂದಲೇ? ನಡುವಲ್ಲಿ ಬಂದು ಹಿರಿಯ ಶರಣಗಣಗಳ ಆದರ-ಗೌರವಾದಿಗಳಿಗೆ ಪಾತ್ರಳಾದಳಾದುದು ಶರಣೆಯರ ದೃಷ್ಟಿಯಲ್ಲಿ ಅವಳ ಉಪೇಕ್ಷೆಗೆ ಕಾರಣವಾಯಿತೆಂಬುದು ಸಮರ್ಥನೀಯ ಎನಿಸದ್ದಕ್ಕೇ? ಅಥವಾ ಉಡುತಡಿ ತೊರೆಯುವಾಗ ಎಲ್ಲ ಬಿಟ್ಟು ಹೊರಡುವ ತುರ್ತು ಮಹಾದೇವಿಗೆ ಮನವರಿಕೆಯಾದಂತೆ, ನಂತರದ ಬದುಕು ಅವಳಿಗೇ ಅಸ್ಪಷ್ಟವಾಗಿರುವಂತೆ ನಿರೂಪಿತವಾಗಿರುವುದಕ್ಕೇ? ಅಥವಾ ಇದು ನನ್ನ ಊಹೆಯೇ ಇದ್ದಿರಬಹುದೇ? ಗೊತ್ತಿಲ್ಲ. ಆದರೆ ಅನುಪಮಾ ಅವರ ಪರಿಶ್ರಮಕ್ಕೆ ಮೆಚ್ಚುಗೆ ಸಲ್ಲಲೇಬೇಕು. ಹಳೆಬೇರು-ಹೊಸ ಚಿಗುರು ಬೆರೆತಂತೆ ಭೂತಕಾಲದ ವಸ್ತು ಮತ್ತು ವರ್ತಮಾನದ ನೋಟಗಳ ಮಿಳಿತವು ‘ಬೆಳಗಿನೊಳಗು- ಅಕ್ಕಮಹಾದೇವಿ’ ಕೃತಿಯಾಗಿದೆ.

ಡಾ ಎಚ್‌ ಎಸ್‌ ಅನುಪಮಾ ಅವರ ಬೆಳಗಿನೊಳಗು ಕಾದಂಬರಿಯನ್ನು ಡಾ ಸಬಿಹಾ ಅವರು ಸವಿಸ್ತಾರವಾಗಿ ವಿಮರ್ಶಿಸಿದ್ದಾರೆ. ಈ ಸುದೀರ್ಘ ವಿಮರ್ಶೆಯನ್ನು ಮೂರು ಭಾಗಗಳಲ್ಲಿ ಪೀಪಲ್‌ ಮೀಡಿಯಾವು ಪ್ರಕಟಿಸಿದ್ದು ಇದು ಕೊನೆಯ ಭಾಗವಾಗಿದೆ.

Related Articles

ಇತ್ತೀಚಿನ ಸುದ್ದಿಗಳು