Thursday, May 2, 2024

ಸತ್ಯ | ನ್ಯಾಯ |ಧರ್ಮ

ಇರುಳಿಗ ಅರಣ್ಯವಾಸಿ ಜನಾಂಗದವರ ಗುಡಿಸಲುಗಳು ಬೆಂಕಿಗಾಹುತಿ : ರತ್ನಗಿರಿ ಹಾಡಿಯ 18 ಗುಡಿಸಲುಗಳು ಭಸ್ಮ

ಬೆಂಕಿ..ಬೆಂಕಿ..ಬೆಂಕಿ.. ಈಗ ಎಲ್ಲೆಲ್ಲೂ ಬೆಂಕಿಯದೇ ರುದ್ರ ತಾಂಡವ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕೂಟಗಲ್ ಬಳಿಯ ಗುಡ್ಡದಂಚಿನ ರತ್ನಗಿರಿ ಹಾಡಿಯಲ್ಲಿ ಇರುಳಿಗ ಅರಣ್ಯವಾಸಿ ಜನಾಂಗದವರ 18 ಗುಡಿಸಲುಗಳು ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿವೆ. ಎಷ್ಟರಮಟ್ಟಿಗೆ ಎಂದರೆ, ಮನೆಯ ಪಾತ್ರೆ ಪಡಗಗಳು, ಬಟ್ಟೆ ಬರೆ, ಆಧಾರ್-ರೇಶನ್ ಕಾರ್ಡ್‌ ಗಳು, ಬ್ಯಾಂಕ್ ಪಾಸ್ ಬುಕ್, ಮಕ್ಕಳ ದಾಖಲಾತಿಗಳು, ಪುಸ್ತಕ, ಬಟ್ಟೆಬರೆ ಎಲ್ಲವೂ ಅಕ್ಷರಶಃ ಬೂದಿಯಾಗಿವೆ. ಗುಡಿಸಿಲಲ್ಲಿ ಮಲಗಿದ್ದ 3-4 ಕುರಿ, ಮೇಕೆ ಮರಿಗಳ ಸಜೀವ ದಹನವಾಗಿದೆ. ಕೆಲವರಿಗೆ ಸುಟ್ಟ ಗಾಯಗಳಾಗಿವೆ. ’ರತ್ನಗಿರಿ ಹಾಡಿ’ ಎಂದು ಕರೆಸಿಕೊಳ್ಳುವ 28 ಸೋಗೆ ಗುಡಿಸಲುಗಳು  ಮಾಗಡಿಯಿಂದ 20 ಕಿಮೀ ದೂರದಲ್ಲಿದ್ದು  ಅಗ್ನಿಶಾಮಕ ಪಡೆ ಬರುವ ಮುನ್ನವೇ 18 ಗುಡಿಸಲುಗಳು ಬೆಂಕಿಗೆ ಆಹುತಿಯಾಗಿವೆ. ಕೆಲವರು ಕುರಿ ಮೇಕೆ ಮಾರಿ, ಕೂಲಿ-ಕಂಬಳ ಮಾಡಿ ಕೂಡಿಟ್ಟಿದ್ದ ಹಣ ಕೂಡ ಬೆಂದು ಬೂದಿಯಾಗಿದೆ. ಖಾಲಿ ಕೈಯಲ್ಲಿ ಬಯಲಲ್ಲಿ ನಿಂತ ಇವರಿಗೆ ಪ್ರಾಣ ಕಾಪಾಡಿ ಕೊಳ್ಳಲು ಟಾರ್ಪಾಲಿನ್, ಸೀರೆ, 15 ದಿನಕ್ಕೆ ರೇಶನ್, ಪಾತ್ರೆಗಳನ್ನು ಜಿಲ್ಲಾಡಳಿತ ಏರ್ಪಾಡು ಮಾಡಿದೆ.  ಇದನ್ನು ಅವರ ’ಪುನರ್ವಸತಿ’ ಎಂದು ಹೇಳಿದೆ. ತಲೆ ಎತ್ತಿದರೆ ಒಣಗಿ ನಿಂತ ಕಾಡು/ಗುಡ್ಡ. ಯಾವ ಕ್ಷಣದಲ್ಲಾದರೂ ಮತ್ತೊಂದು ಬೆಂಕಿ ಅವಘಡ ಸಂಭವಿಸುವ ಆತಂಕ! 

ತಲೆತಲಾಂತರದಿಂದ ಕಾಡಿನಲ್ಲಿ ವಾಸವಾಗಿದ್ದ ಇವರನ್ನು ಕಾಡಿನಿಂದ ಹೊರದಬ್ಬಿದ ಸರ್ಕಾರ ಅವರನ್ನು ಅದೆಂತಹ ದಯನೀಯ ಸ್ಥಿತಿಯಲ್ಲಿ ಇಟ್ಟಿದೆ ಎಂಬುದು ಈ ಕೆಲ ಚಿತ್ರಗಳನ್ನು ನೋಡಿದರೆ ಅರ್ಥವಾಗುತ್ತದೆ. ನಿರಂತರ ಪ್ರಯತ್ನದಿಂದ ಈಗ 280 ಎಕರೆ ಭೂಮಿ ಅರಣ್ಯ ಹಕ್ಕು ಕಾಯ್ದೆಯಡಿ ಈ ಜನಾಂಗಕ್ಕೆ ಮಂಜೂರಾಗಿದೆ. ರಾಜಕಾರಣಿಗಳ ಸ್ವಾರ್ಥದ  ಕೋಳಿ ಜಗಳದಲ್ಲಿ ಸಿಕ್ಕಿಕೊಂಡು 2-3  ವರ್ಷವಾದರೂ ಅದಿನ್ನೂ ಅವರ ಕೈಸೇರಿಲ್ಲ. ಆದರೆ ರತ್ನಗಿರಿ ಹಾಡಿಯ ಈ ನತದೃಷ್ಟ 28 ಕುಟುಂಬಗಳಿಗೆ ಇದರಲ್ಲೂ ಪಾಲಿಲ್ಲ. ತಕ್ಷಣ ಸರ್ಕಾರ ಮುಂದೆ ಬಂದು ಸೂಕ್ತ ಸ್ಥಳದಲ್ಲಿ ಇವರಿಗೆ ಮನೆಗಳನ್ನು ಕಟ್ಟಿಕೊಡದಿದ್ದರೆ ಈ ಮಳೆಗಾಲದಲ್ಲಿ ಗುಡ್ಡದಿಂದ ಹರಿದು ಬರುವ ಕೆನ್ನೀರ ಹೊಳೆ ಇವರ ಗುಡಿಸಲುಗಳನ್ನು ಆವರಿಸಿ ಬದುಕಲು ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗುತ್ತದೆ. ಸರಕಾರ ಕೂಡಲೇ ಇತ್ತ ಕಡೆ ಗಮನಹರಿಸಬೇಕು.

ವಿ ಗಾಯತ್ರಿ

ಸಹಜ ಸಾಗುವಳಿ ದ್ವೈಮಾಸಿಕ ಪತ್ರಿಕೆಯ ಸಂಪಾದಕರು.

Related Articles

ಇತ್ತೀಚಿನ ಸುದ್ದಿಗಳು