Monday, June 17, 2024

ಸತ್ಯ | ನ್ಯಾಯ |ಧರ್ಮ

ಗಡಿ ವಿವಾದ: 12 ಮಂದಿ ಕರವೇ ಕಾರ್ಯಕರ್ತರ ವಿರುದ್ಧ ಎಫ್ಐಆರ್

ಬೆಳಗಾವಿ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಭುಗಿಲೆದ್ದಿದ್ದು, ಮಂಗಳವಾರ ಬೆಳಗಾವಿ ಬಳಿ ನೂರಾರು ಕರ್ನಾಟಕ ರಕ್ಷಣಾ ವೇದಿಕೆ (ಕೆಆರ್ ವಿ) ಬೆಂಬಲಿಗರನ್ನು ಬಂಧಿಸಲಾಗಿದ್ದು, ಮಹಾರಾಷ್ಟ್ರ ನೋಂದಣಿ ಸಂಖ್ಯೆ ಹೊಂದಿರುವ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಬೆಳಗಾವಿ ಪೊಲೀಸರು 12 ಮಂದಿಯ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

ಕರ್ನಾಟಕದ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ನಿಯೋಗದ ಉದ್ದೇಶಿತ ಭೇಟಿಯನ್ನು ಮಂಗಳವಾರ ಮುಂದೂಡಿದ ನಂತರ ವಿವಾದ ಇನ್ನೂ ತಾರಕಕ್ಕೇರಿದ್ದು, ಏತನ್ಮಧ್ಯೆ, ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎಂಎಸ್ಆರ್‌ಟಿಸಿ) ಪೊಲೀಸ್ ಸಲಹೆಯನ್ನು ಉಲ್ಲೇಖಿಸಿ ದಕ್ಷಿಣ ರಾಜ್ಯಕ್ಕೆ ಬಸ್ ಸೇವೆಗಳನ್ನು ಸ್ಥಗಿತಗೊಳಿಸಿದೆ.

ಬೆಳಗಾವಿ ಸಮೀಪದ ಹಿರೇಬಾಗವಾಡಿಯಲ್ಲಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಹಾರಾಷ್ಟ್ರದ ಆರು ವಾಹನಗಳ ಮೇಲೆ ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳು ಮಂಗಳವಾರ ರಾತ್ರಿ ದೂರವಾಣಿಯಲ್ಲಿ ಪರಸ್ಪರ ಮಾತನಾಡಿ, ಎರಡೂ ಕಡೆ ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು ಎಂದು ಒಪ್ಪಿಕೊಂಡಿದ್ದಾರೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತನಾಡಿ ಹಿಂಸಾಚಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಇದಕ್ಕೆ ಬೊಮ್ಮಾಯಿ ಅವರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಮಹಾರಾಷ್ಟ್ರದಿಂದ ಬರುವ ವಾಹನಗಳನ್ನು ರಕ್ಷಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು