Home ಬೆಂಗಳೂರು ಮೆಟ್ರೋ ದರ ಏರಿಕೆಗೆ ಬ್ರೇಕ್: ಫೆ.9ರಿಂದ ಟಿಕೆಟ್ ದರ ಏರಿಕೆ ಇಲ್ಲ

ಮೆಟ್ರೋ ದರ ಏರಿಕೆಗೆ ಬ್ರೇಕ್: ಫೆ.9ರಿಂದ ಟಿಕೆಟ್ ದರ ಏರಿಕೆ ಇಲ್ಲ

0

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಮಾತಿನ ಸಮರಕ್ಕೆ ಕಾರಣವಾಗಿದ್ದ ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರ ಇದೀಗ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಫೆಬ್ರವರಿ 9ರಿಂದ ಜಾರಿಗೆ ಬರಬೇಕಿದ್ದ ದರ ಏರಿಕೆಯನ್ನು ಬಿಎಂಆರ್‌ಸಿಎಲ್‌ (BMRCL) ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಕೇಂದ್ರ ಸರ್ಕಾರದಿಂದ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರಿಗೆ ಇ-ಮೇಲ್ ಮೂಲಕ ಸೂಚನೆ ಬಂದಿರುವ ಬೆನ್ನಲ್ಲೇ ದರ ಏರಿಕೆ ನಿರ್ಧಾರಕ್ಕೆ ಬ್ರೇಕ್ ಬೀಳಲಾಗಿದೆ. ಮುಂದಿನ ಆದೇಶದವರೆಗೆ ದರ ಏರಿಕೆ ಜಾರಿಗೆ ಬರಲ್ಲ ಎಂದು ಬಿಎಂಆರ್‌ಸಿಎಲ್‌ ಸ್ಪಷ್ಟಪಡಿಸಿದೆ. ಇದರಿಂದ ನಮ್ಮ ಮೆಟ್ರೋ ಪ್ರಯಾಣಿಕರಿಗೆ ತಾತ್ಕಾಲಿಕ ರಿಲೀಫ್ ದೊರೆತಿದೆ.

ಬಿಎಂಆರ್‌ಸಿಎಲ್ ಮಾಧ್ಯಮ ಪ್ರಕಟಣೆ ಏನು ಹೇಳುತ್ತದೆ?
ಬಿಎಂಆರ್‌ಸಿಎಲ್‌ ತಿಳಿಸಿರುವಂತೆ, ಫೆಬ್ರವರಿ 5ರಂದು ಹೊರಡಿಸಿದ್ದ ಮಾಧ್ಯಮ ಪ್ರಕಟಣೆಯಲ್ಲಿ ಫೆಬ್ರವರಿ 9ರಿಂದ ವಾರ್ಷಿಕ ಸ್ವಯಂಚಾಲಿತ ದರ ಜಾರಿಗೆ ಬರಲಿದೆ ಎಂದು ತಿಳಿಸಲಾಗಿತ್ತು. ಆದರೆ ಈ ನಿರ್ಧಾರವನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಪರಿಷ್ಕೃತ ದರ ಕುರಿತು ಅಂತಿಮ ನಿರ್ಧಾರವನ್ನು ನಿರ್ದೇಶಕರ ಮಂಡಳಿಯ ಪರಿಶೀಲನೆಯ ಬಳಿಕ ಪ್ರಕಟಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ. ಬೆಂಗಳೂರು ನಾಗರಿಕರಿಗೆ ಸುರಕ್ಷಿತ, ನಂಬಿಕಸ್ಥ ಮತ್ತು ಕೈಗೆಟುಕುವ ಮೆಟ್ರೋ ಸೇವೆ ನೀಡಲು ಬದ್ಧವಾಗಿರುವುದಾಗಿ ಸಂಸ್ಥೆ ಸ್ಪಷ್ಟಪಡಿಸಿದೆ.

ರಾಜಕೀಯ ಒತ್ತಡದ ಪರಿಣಾಮ
ಮೆಟ್ರೋ ದರ ಏರಿಕೆ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಅವರು ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿಯಾಗಿ ದರ ಏರಿಕೆಗೆ ತಡೆ ನೀಡುವಂತೆ ಮನವಿ ಮಾಡಿದ್ದರು. ನಂತರ ತೇಜಸ್ವಿ ಸೂರ್ಯ ಅವರು ಫೆಬ್ರವರಿ 9ರಿಂದ ದರ ಏರಿಕೆಯಾಗುವುದಿಲ್ಲ ಎಂದು ಘೋಷಿಸಿದ್ದರು.

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದ ತೇಜಸ್ವಿ ಸೂರ್ಯ, ಮೆಟ್ರೋ ದರ ಏರಿಕೆ ತಡೆಯುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲವೇ ಎಂದು ಪ್ರಶ್ನಿಸಿದ್ದರು.

ಪ್ರಯಾಣಿಕರಿಗೆ ತಾತ್ಕಾಲಿಕ ರಿಲೀಫ್
ಒಟ್ಟಿನಲ್ಲಿ ಮೆಟ್ರೋ ಟಿಕೆಟ್ ದರ ಏರಿಕೆ ಕುರಿತು ಗೊಂದಲದಲ್ಲಿದ್ದ ಪ್ರಯಾಣಿಕರಿಗೆ ಸದ್ಯ ಸ್ಪಷ್ಟತೆ ದೊರೆತಿದ್ದು, ನಾಳೆಯಿಂದ ದರ ಏರಿಕೆ ಆಗುವುದಿಲ್ಲ ಎಂಬುದು ಖಚಿತವಾಗಿದೆ.

You cannot copy content of this page

Exit mobile version