ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (JNU) ಡಾ. ಬಿ.ಆರ್. ಅಂಬೇಡ್ಕರ್ ಸೆಂಟ್ರಲ್ ಲೈಬ್ರರಿಯ ಪ್ರವೇಶ ದ್ವಾರದಲ್ಲಿ ಅಳವಡಿಸಲಾದ ಬಯೋಮೆಟ್ರಿಕ್ ವ್ಯವಸ್ಥೆ ವಿರುದ್ಧ ನಡೆದ ಪ್ರತಿಭಟನೆ ವೇಳೆ ಸಿಸಿಟಿವಿ ಕ್ಯಾಮೆರಾ ಸೇರಿದಂತೆ ವಿಶ್ವವಿದ್ಯಾಲಯದ ಆಸ್ತಿಗಳಿಗೆ ಹಾನಿಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಎಲ್ಲಾ ಚುನಾಯಿತ ನಾಯಕತ್ವವನ್ನು ವಿಶ್ವವಿದ್ಯಾಲಯ ಆಡಳಿತ ಅಮಾನತುಗೊಳಿಸಿದೆ.
ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆ ಅದಿತಿ ಮಿಶ್ರಾ, ಉಪಾಧ್ಯಕ್ಷೆ ಗೋಪಿಕಾ ಬಾಬು, ಪ್ರಧಾನ ಕಾರ್ಯದರ್ಶಿ ಸುನೀಲ್ ಯಾದವ್, ಜಂಟಿ ಕಾರ್ಯದರ್ಶಿ ದಾನಿಶ್ ಆಲಿ ಹಾಗೂ ಮಾಜಿ ಅಧ್ಯಕ್ಷ ನಿತೀಶ್ ಕುಮಾರ್ ಸೇರಿ ಐವರು ವಿದ್ಯಾರ್ಥಿ ಮುಖಂಡರನ್ನು ಎರಡು ಸೆಮಿಸ್ಟರ್‌ಗಳವರೆಗೆ ಅಮಾನತುಗೊಳಿಸಲಾಗಿದೆ.
ಈ ಐವರಿಗೆ 2026ರ ವಿಂಟರ್ ಮತ್ತು ಮಾನ್ಸೂನ್ ಸೆಮಿಸ್ಟರ್‌ಗಳಲ್ಲಿ ಕ್ಯಾಂಪಸ್ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ತಲಾ ₹20,000 ದಂಡ ವಿಧಿಸಲಾಗಿದೆ. ಈ ಕುರಿತು ಫೆಬ್ರವರಿ 2ರಂದು ಜೆಎನ್‌ಯು ಆಡಳಿತ ನೋಟಿಸ್ ಜಾರಿಗೊಳಿಸಿದೆ.
ಕಳೆದ ವರ್ಷ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಕೆಗೆ ವಿರೋಧವಾಗಿ ನಡೆದ ಪ್ರತಿಭಟನೆಯ ವೇಳೆ ಗೇಟ್‌ಗಳು ಹಾಗೂ ಸಿಸಿಟಿವಿ ಕ್ಯಾಮೆರಾಗಳಿಗೆ ಹಾನಿಯಾಗಿದ್ದು, ವಿಶ್ವವಿದ್ಯಾಲಯಕ್ಕೆ ಅಂದಾಜು ₹20 ಲಕ್ಷ ನಷ್ಟವಾಗಿದೆ ಎಂದು ಆಡಳಿತ ತಿಳಿಸಿದೆ. ಈ ಸಂಬಂಧ 2025ರ ನವೆಂಬರ್ 21ರಂದು ತನಿಖೆ ನಡೆಸಲಾಗಿತ್ತು.
ಈ ಅಮಾನತು ಕ್ರಮಕ್ಕೆ ಎಐಎಸ್‌ಎ ಸೇರಿದಂತೆ ಹಲವು ವಿದ್ಯಾರ್ಥಿ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದನ್ನು “ವಿದ್ಯಾರ್ಥಿಗಳ ಧ್ವನಿಯನ್ನು ಅಡಗಿಸುವ ಪ್ರಯತ್ನ” ಎಂದು ಆರೋಪಿಸಿವೆ. ಕಾಂಗ್ರೆಸ್, ಸಿಪಿಐ (ಎಂಎಲ್), ಭಾರತ್ ಆದಿವಾಸಿ ಪಾರ್ಟಿ ಹಾಗೂ ಆರ್‌ಜೆಡಿ ಪಕ್ಷದ ಕೆಲ ಸಂಸದರು ಕೂಡ ಅಮಾನತು ಆದೇಶವನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ.
