ಜಮ್ಮುವಿನ ಹೊರವಲಯದ ಬಂಟಲಾಬ್ ಸಮೀಪದ ಥುಥರ್ ಪ್ರದೇಶದಲ್ಲಿ ಹಳೆಯ ಸೇತುವೆಯೊಂದು ಕುಸಿದು ಮೂವರು ಸಾವನ್ನಪ್ಪಿ, ಒಬ್ಬರು ಗಾಯಗೊಂಡಿರುವ ದುರ್ಘಟನೆ ಶುಕ್ರವಾರ ಸಂಭವಿಸಿದೆ.
ಘಟನೆ ನಡೆದ ತಕ್ಷಣ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಸುಮಾರು 12 ಗಂಟೆಗಳ ನಿರಂತರ ಕಾರ್ಯಾಚರಣೆಯ ನಂತರ ಅವಶೇಷಗಳಡಿ ಸಿಲುಕಿದ್ದ ಮೂರು ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಗಾಯಗೊಂಡ ವ್ಯಕ್ತಿಯನ್ನು ಸುರಕ್ಷಿತವಾಗಿ ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇತುವೆ ಕುಸಿದ ಕೂಡಲೇ ಒಬ್ಬ ಕಾರ್ಮಿಕನನ್ನು ಪ್ರಾಥಮಿಕವಾಗಿ ರಕ್ಷಿಸಲಾಗಿತ್ತು. ಬಳಿಕ ಇನ್ನಿತರರಿಗಾಗಿ ಶೋಧ ಮುಂದುವರಿಸಲಾಗಿದ್ದು, ಶನಿವಾರ ಬೆಳಿಗ್ಗೆ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಘಟನೆಯ ಹಿನ್ನೆಲೆ ಪರಿಶೀಲಿಸಲು ಉಪಮುಖ್ಯಮಂತ್ರಿ ಸುರಿಂದರ್ ಕುಮಾರ್ ಚೌಧರಿ ಮಧ್ಯರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿರ್ಲಕ್ಷ್ಯ ಆರೋಪದ ಮೇರೆಗೆ ಇಬ್ಬರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಲಾಗಿದ್ದು, ಪ್ರಕರಣದ ಸಮಗ್ರ ತನಿಖೆಗೆ ಸರ್ಕಾರ ಸಮಿತಿಯನ್ನು ರಚಿಸಿದೆ.
