Home ಬ್ರೇಕಿಂಗ್ ಸುದ್ದಿ ಶೃಂಗೇರಿ ಕ್ಷೇತ್ರ: ಅಂಚೆ ಮತಗಳ ಮರು ಎಣಿಕೆ ವೇಳೆ ಗೊಂದಲ, ನಾಪತ್ತೆಯಾದ ಮತಪತ್ರಗಳು ಪತ್ತೆ

ಶೃಂಗೇರಿ ಕ್ಷೇತ್ರ: ಅಂಚೆ ಮತಗಳ ಮರು ಎಣಿಕೆ ವೇಳೆ ಗೊಂದಲ, ನಾಪತ್ತೆಯಾದ ಮತಪತ್ರಗಳು ಪತ್ತೆ

0

ಚಿಕ್ಕಮಗಳೂರು, ಮೇ 2: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಇಂದು ನಗರದ ಐಡಿಎಸ್‌ಜಿ ಕಾಲೇಜಿನಲ್ಲಿ ನಡೆದಿದ್ದು, ಆರಂಭದಲ್ಲೇ ಉಂಟಾದ ಗೊಂದಲ ಕುತೂಹಲಕ್ಕೆ ಕಾರಣವಾಯಿತು. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸ್ಪರ್ಧೆ ತೀವ್ರಗೊಂಡಿರುವ ಹಿನ್ನೆಲೆ ಮರು ಎಣಿಕೆ ಮಹತ್ವ ಪಡೆದಿದೆ.

ನ್ಯಾಯಾಲಯದ ಆದೇಶದಂತೆ 2023ರ ವಿಧಾನಸಭಾ ಚುನಾವಣೆಯಲ್ಲಿ ಚಲಾವಣೆಯಾಗಿದ್ದ ಒಟ್ಟು 1822 ಅಂಚೆ ಮತಗಳ ಮರು ಎಣಿಕೆಗೆ ಅಧಿಕಾರಿಗಳು ಮುಂದಾಗಿದ್ದರು. ಈ ಪೈಕಿ 279 ಮತಗಳನ್ನು ತಿರಸ್ಕೃತ ಮತಗಳೆಂದು ಗುರುತಿಸಲಾಗಿತ್ತು. ಆದರೆ ಮರು ಎಣಿಕೆ ವೇಳೆ ಸಂಗ್ರಹಿಸಲಾಗಿದ್ದ 20 ಟ್ರಂಕ್‌ಗಳನ್ನು ಪರಿಶೀಲಿಸಿದಾಗ ಕೇವಲ 270 ತಿರಸ್ಕೃತ ಮತಪತ್ರಗಳು ಮಾತ್ರ ಲಭ್ಯವಾಗಿದ್ದು, ಉಳಿದ 9 ಮತಪತ್ರಗಳು ಕಾಣೆಯಾಗಿರುವುದು ಆತಂಕ ಸೃಷ್ಟಿಸಿತು.

ನಾಪತ್ತೆಯಾದ ಮತಪತ್ರಗಳಿಗಾಗಿ ಅಧಿಕಾರಿಗಳು ಬೆಳಗ್ಗಿನಿಂದಲೇ ತೀವ್ರ ಶೋಧ ಕಾರ್ಯ ಕೈಗೊಂಡರು. ಈ ಕಾರಣದಿಂದ ಮರು ಎಣಿಕೆ ಪ್ರಕ್ರಿಯೆ ವಿಳಂಬಗೊಂಡಿತು. ನಂತರ ನಡೆದ ಸತತ ಹುಡುಕಾಟದ ಬಳಿಕ ಕಾಣೆಯಾಗಿದ್ದ 9 ಮತಪತ್ರಗಳು ಪತ್ತೆಯಾಗಿದ್ದು, ಅಧಿಕಾರಿಗಳು ಮರು ಎಣಿಕೆ ಕಾರ್ಯವನ್ನು ಪುನರಾರಂಭಿಸಿದರು.

ಇದರ ನಡುವೆಯೇ ಮತ ಎಣಿಕೆ ಕೇಂದ್ರದ ಹೊರಗೆ ರಾಜಕೀಯ ಚಟುವಟಿಕೆಗಳು ಜೋರಾಗಿವೆ. ಫಲಿತಾಂಶಕ್ಕೂ ಮುನ್ನವೇ ಎನ್.ಆರ್.ಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವಕ್ಕೆ ಚಾಲನೆ ನೀಡಿದ್ದು, ಘೋಷಣೆಗಳನ್ನು ಕೂಗಿ ಸಂಭ್ರಮಾಚರಣೆ ನಡೆಸುತ್ತಿದ್ದಾರೆ.

ಮತ್ತೊಂದೆಡೆ, ಯಾವುದೇ ಅಡಚಣೆಗಳಿಲ್ಲದೆ ಮರು ಎಣಿಕೆ ಪ್ರಕ್ರಿಯೆ ಪೂರ್ಣಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಅಂತಿಮ ಫಲಿತಾಂಶಕ್ಕಾಗಿ ರಾಜಕೀಯ ವಲಯ ಹಾಗೂ ಮತದಾರರು ಕಾದು ನೋಡುತ್ತಿದ್ದಾರೆ.

You cannot copy content of this page

Exit mobile version