Wednesday, June 19, 2024

ಸತ್ಯ | ನ್ಯಾಯ |ಧರ್ಮ

ಜಿಲ್ಲೆಯ ಶಿಕ್ಷಣ, ಆರೋಗ್ಯ, ನಿರುದ್ಯೋಗದ ಸ್ಥಿತಿಗತಿಗಳ ಅರಿವಿಲ್ಲದ ಅಭ್ಯರ್ಥಿ ಬೃಜೇಶ್ ಚೌಟ: ಮುನೀರ್ ಕಾಟಿಪಳ್ಳ ಆರೋಪ

ಮೂರು ದಶಕಗಳ ಬಿಜೆಪಿ ದುರಾಡಳಿತದ ವಿರುದ್ದದ ಜನಾಕ್ರೋಶವನ್ನು ತಣಿಸಲು ಬಿಜೆಪಿ ನಳಿನ್ ಕುಮಾರ್ ಕಟೀಲ್ ರಿಗೆ ಟಿಕೇಟ್ ತಪ್ಪಿಸಿ ಬೃಜೇಶ್ ಚೌಟರನ್ನು ಕಣಕ್ಕಿಳಿಸಿದೆ. ವಿದ್ಯಾವಂತ, ಮಾಜಿ ಯೋಧ ಎಂಬ ಬಿರುದಾಂಕಿತ ಅಭ್ಯರ್ಥಿ ಮೂಲಕ ತನ್ನದು ಯೋಗ್ಯ ಅಭ್ಯರ್ಥಿ ಎಂದು ಜನರ ನಡುವೆ ಪ್ರಚಾರ ನಡೆಸುತ್ತಿದೆ. ಆ ಮೂಲಕ ಆಡಳಿತ ವಿರೋಧಿ ಅಲೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ. ಆದರೆ, ಬಿಜೆಪಿ ಹೊಸ ಮುಖ ಬೃಜೇಶ್ ಚೌಟರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಯಾವುದೇ ಸಮಸ್ಯೆಗಳ ಕುರಿತು ಅರಿವಿಲ್ಲ. ಇಲ್ಲಿನ ಜನರನ್ನು ಕಿತ್ತು ತಿನ್ನುತ್ತಿರುವ ಆರೋಗ್ಯ, ಶಿಕ್ಷಣದ ವ್ಯಾಪಾರೀಕರಣದ ಸಮಸ್ಯೆಗಳು, ಉಲ್ಬಣಾವಸ್ಥೆಗೆ ತಲುಪಿರುವ ನಿರುದ್ಯೋಗ ಸ್ಥಿತಿಯ ಕುರಿತು ಚೌಟರಿಗೆ ಅರಿವೂ ಇಲ್ಲ, ಅಧ್ಯಯನವೂ ಇಲ್ಲ ಇಲ್ಲ ಎಂದು ಸಿಪಿಐ ಎಂ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಹತ್ತು ವರ್ಷಗಳ ಅವರ ಸಾರ್ವಜನಿಕ ಜೀವನದಲ್ಲಿ ಚೌಟರು ಈ ಸಮಸ್ಯೆಗಳ ಕುರಿತು ಒಂದು ಶಬ್ದ ಮಾತಾಡಿದ್ದು ಯಾರೂ ಕಂಡಿಲ್ಲ. ಇಂತಹ ಅಭ್ಯರ್ಥಿನ್ನು ಗೆಲ್ಲಿಸಿದರೆ ದ.ಕ. ಜಿಲ್ಲೆಯಲ್ಲಿ ಬಿಜೆಪಿಯ 33 ವರ್ಷಗಳ ಸತತ ಆಳ್ವಿಕೆಯ ಕರಾಳ ಅಧ್ಯಾಯಕ್ಕೆ ಮತ್ತೆ ಐದು ವರ್ಷ ಸೇರ್ಪಡೆ ಮಾತ್ರ ಆಗಲಿದೆ. ಕೋಮುವಾದಕ್ಕೆ ಮಣೆ ಹಾಕುವ ಪಕ್ಷದಿಂದ ಸಮಸ್ಯೆಗಳು ಮತ್ತಷ್ಟು ಹೆಚ್ಚಲಿದೆ. ಜಿಲ್ಲೆಯ ಯುವಜನತೆ ಈಗಲಾದರು ಎಚ್ಚೆತ್ತು ಈ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು, ಆ ಮೂಲಕ ಜಿಲ್ಲೆಯ ಮೂರು ದಶಕಗಳ ಬಿಜೆಪಿ ದುರಾಡಳಿತಕ್ಕೆ ಅಂತ್ಯ ಹಾಡಬೇಕು ಎಂದು ಅವರು ಜನರಲ್ಲಿ ಮನವಿ ಮಾಡಿಕೊಂಡರು.

ಅವರು ಕುಳಾಯಿ ಮಹಿಳಾ ಮಂಡಲ ಸಭಾಂಗಣದಲ್ಲಿ ಸಿಪಿಐಎಂ ವತಿಯಿಂದ ಅಯೋಜಿಸಲಾಗಿದ್ದ ಸುರತ್ಕಲ್ ವಿಭಾಗ ಮಟ್ಟದ ರಾಜಕೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ. ಕೃಷ್ಣಪ್ಪ ಕೊಂಚಾಡಿ ಮಾತನಾಡುತ್ತಾ ಹತ್ತು ವರ್ಷಗಳ ಮೋದಿ ಸರಕಾರದ ದುರಾಡಳಿತದಿಂದ ದೇಶದ ದುರಂತದತ್ತ ಚಲಿಸುತ್ತಿದೆ. ಚುನಾವಣಾ ಬಾಂಡ್ ಪಡೆಯುವ ಮೂಲಕ ಕಪ್ಪು ಪಟ್ಟಿಗೆ ಸೇರಬೇಕಾದ ಕಾರ್ಪೊರೇಟ್ ಕಂಪೆನಿಗಳಿಗೆ ರೆಡ್ ಕಾರ್ಪೆಟ್ ಹಾಕಲಾಗುತ್ತಿದೆ. ದೇಶದ ಆದಿವಾಸಿಗಳು, ದಲಿತರು, ಹಿಂದುಳಿದವರನ್ನು ಹಸಿವೆಗೆ ತಳ್ಳಲಾಗುತ್ತಿದೆ. ಈ ಭಾರಿಯ ಚುನಾವಣೆಯಲ್ಲಿ ಮೋದಿ ಸರಕಾರ ಸೋಲಿಸಲು ಈ ಎಲ್ಲಾ ವಿಭಾಗಗಳು ಒಟ್ಟಾಗಿ ದುಡಿಯಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಜಿಲ್ಲಾ ಸಮಿತಿ ಸದಸ್ಯ ಬಿ ಕೆ ಇಮ್ತಿಯಜ್ ಮಾತನಾಡಿದರು.ಮಂಗಳೂರು ನಗರ ಸಮಿತಿ ಸದಸ್ಯರಾದ ಶ್ರೀನಾಥ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು, ಚರಣ್ ಶೆಟ್ಟಿ ವಂದಿಸಿದರು. ನಗರ ಉತ್ತರ ಸಮಿತಿ ಕಾರ್ಯದರ್ಶಿ ಪ್ರಮೀಳಾ ಕೆ, ಮಾಜಿ ಕಾರ್ಪೊರೇಟರ್ ಅಯಾಝ್, ಜೋಕಟ್ಟೆ ಪಂಚಾಯತ್ ಸದಸ್ಯ ಅಬೂಬಕ್ಕರ್ ಬಾವಾ, ಕಾರ್ಮಿಕ ನಾಯಕ ರವಿಚಂದ್ರ ಕೊಂಚಾಡಿ ಸಹಿತ ಹಲವು ಮುಖಂಡರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು