Friday, April 26, 2024

ಸತ್ಯ | ನ್ಯಾಯ |ಧರ್ಮ

ಸುಮಲತಾ ಅಂಬರೀಶ್ ಕಣಕ್ಕೆ! ; ಮತ್ತೊಮ್ಮೆ ಹೈವೋಲ್ಟೇಜ್ ಕ್ಷೇತ್ರವಾಗುವತ್ತ ಮಂಡ್ಯ

ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಮತ್ತೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಜನಪ್ರತಿನಿಧಿಯಾಗಿ ಇನ್ನೂ ಸಹ ತನ್ನ ಚಾರ್ಮ್ ಉಳಿಸಿಕೊಂಡಿರುವ ಸುಮಲತಾ ಅಂಬರೀಶ್ ತಮಗಿರುವ ಜನಪ್ರಿಯತೆ ಮತ್ತೊಬ್ಬರಿಗೆ ಯಾಕೆ ಧಾರೆ ಎರೆಯಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಬೆಂಬಲಿಗರ ಕಡೆಯಿಂದ ಮತ್ತೊಮ್ಮೆ ಕಣಕ್ಕಿಳಿಯುವ ಬಗ್ಗೆಯೂ ಸುಮಲತಾ ಅಂಬರೀಶ್ ಅವರಿಗೆ ಒತ್ತಡ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.

ಮೇಲಾಗಿ ಕಳೆದ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲೇ ಏಕೈಕ ಹೈವೋಲ್ಟೇಜ್ ಕಣವಾಗಿ ರೂಪುಗೊಂಡು, ತನ್ನ ಪತಿ ಅಂಬರೀಶ್ ಅವರ ಜನಪ್ರಿಯತೆಯನ್ನು ಸಮರ್ಥವಾಗಿ ಬಳಸಿಕೊಂಡ ಸುಮಲತಾ ನಿರಾಯಾಸವಾಗಿ ಮಂಡ್ಯ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಒಬ್ಬ ಮಹಿಳೆಯಾಗಿ ಮಾಜಿ ಪ್ರಧಾನಿ ಮೊಮ್ಮಗನನ್ನು ಎದುರಿಸಿ ಗೆದ್ದದ್ದು ರಾಜ್ಯದ ಜನತೆ ಇನ್ನೂ ಮರೆತಿಲ್ಲ.

ಈಗಾಗಲೇ ಸುಮಲತಾ ಅವರನ್ನು ಲೋಕಸಭಾ ಕಣದಿಂದ ದೂರವಿಡಲು ಜೆಡಿಎಸ್ ಮತ್ತು ಬಿಜೆಪಿ ನಾಯಕರು ದಂಡು ದಂಡಾಗಿ ಭೇಟಿ ಮಾಡಿ ಮನವೊಲಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಇಂದೂ ಕೂಡಾ ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸುಮಲತಾ ಮನೆಗೆ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಸತತ ಮೂವತ್ತು ನಿಮಿಷಗಳ ಚರ್ಚೆ ಬಳಿಕ ಕುಮಾರಸ್ವಾಮಿ ಇದೊಂದು ಸೌಹಾರ್ದ ಭೇಟಿ ಎಂದು ಕೈ ತೊಳೆದುಕೊಂಡಿದ್ದಾರೆ.

ಆದರೆ ಸುಮಲತಾ ಅಂಬರೀಶ್ ಈವರೆಗೆ ಯಾರಿಗೂ ಸ್ಪಷ್ಟ ಅಭಿಪ್ರಾಯ ತಿಳಿಸದೇ ಹಾಗೇ ಕಳಿಸಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ನಾಯಕರು ಸುಮಲತಾ ಇನ್ನು ಕಣಕ್ಕೆ ಇಳಿಯುವುದಿಲ್ಲ ಎಂಬುದನ್ನೇ ಬಿಂಬಿಸಿದರೂ ಈ ಬಗ್ಗೆ ಸುಮಲತಾ ಅಂಬರೀಶ್ ಏಪ್ರಿಲ್ 3 ರ ವರೆಗೂ ಕಾಯುವಂತೆ ತಿಳಿಸಿದ್ದಾರೆ.

ಆ ಮೂಲಕ ಏಪ್ರಿಲ್ 3 ರ ನಂತರ ಮಂಡ್ಯದ ರಣಕಣ ಯಾವ ರೀತಿಯಾಗಿ ರೂಪುಗೊಳ್ಳಬಹುದು ಎಂಬ ಕುತೂಹಲ ಕೂಡಾ ಮನೆ ಮಾಡಿದೆ. ಈಗಾಗಲೇ ಜಿಲ್ಲೆಯಾದ್ಯಂತ ತನ್ನ ಬೆಂಬಲಿಗರು ಹಾಗೂ ಅಂಬರೀಶ್ ಅಭಿಮಾನಿಗಳನ್ನು ಹೊಂದಿರುವ ಸುಮಲತಾ ಅವರಿಗೆ ಚುನಾವಣೆ ನಿಲ್ಲಲು ಒತ್ತಡ ಕೂಡಾ ಹೆಚ್ಚಿದೆ ಎನ್ನಲಾಗಿದೆ. ರಾಜಕೀಯದಲ್ಲಿ ಕಾಯಂ ಶತ್ರು ಹಾಗೂ ಮಿತ್ರ ಇಲ್ಲದೇ ಇದ್ದರೂ ಕಳೆದ ಚುನಾವಣೆಯಲ್ಲಿ ಸುಮಲತಾ ವಿರುದ್ಧ ಮಾತನಾಡಿದ ಅನೇಕ ಜೆಡಿಎಸ್ ನಾಯಕರಿಗೆ ಸರಿಯಾದ ಉತ್ತರ ಈ ಚುನಾವಣೆಯಲ್ಲಿ ಕೊಡಬೇಕು ಎಂಬುದು ಅಂಬರೀಶ್ ಅಭಿಮಾನಿಗಳ ಒತ್ತಾಯವಾಗಿದೆ.

ಸಧ್ಯಕ್ಕೆ ಸಿಕ್ಕ ಮಾಹಿತಿಯಂತೆ ಈ ಬಾರಿ ಮಂಡ್ಯ ಸುಮಲತಾ ಅಂಬರೀಶ್ ಅವರ ಸ್ಪರ್ಧೆಯಿಂದ ತ್ರಿಕೋನ ಸ್ಪರ್ಧೆಯ ಮುನ್ಸೂಚನೆ ಹುಟ್ಟು ಹಾಕಿದೆ. ಸಧ್ಯ ಮೂರೂ ಪಕ್ಷಗಳಲ್ಲೂ ಸಮಾನ ಅಂತರ ಕಾಯ್ದುಕೊಂಡು ಬಂದಿರುವ ಸುಮಲತಾ ಕಣಕ್ಕಿಳಿಯುವುದೇ ಹೌದಾದರೆ ಮತ್ತೊಮ್ಮೆ ಚಿತ್ರರಂಗದ ದಂಡು ಮಂಡ್ಯ ಕ್ಷೇತ್ರವನ್ನು ಆವರಿಸಲಿದೆ.

ಸಧ್ಯದ ಸ್ಥಿತಿಯಲ್ಲಿ ಮೂರೂ ಪಕ್ಷಗಳಲ್ಲೂ ತನ್ನ ಅಭಿಮಾನ ಉಳಿಸಿಕೊಂಡಿರುವ ಸುಮಲತಾ, ತನ್ನ ಸ್ಪರ್ಧೆ ಹೌದೇ ಆದರೆ ಅದರ ಹೆಚ್ಚಿನ ಲಾಭ ಕಾಂಗ್ರೆಸ್ ಪಕ್ಷ ಪಡೆದುಕೊಳ್ಳಲಿದೆ ಎಂಬುದು ಸ್ಪಷ್ಟ.

Related Articles

ಇತ್ತೀಚಿನ ಸುದ್ದಿಗಳು