Friday, April 26, 2024

ಸತ್ಯ | ನ್ಯಾಯ |ಧರ್ಮ

ಬಿಸಿಲು ನೆತ್ತಿಗೇರುವ ಮೊದಲೇ ಮತ ಚಲಾಯಿಸಿದ ನಿರ್ಮಲಾ ಸೀತಾರಾಮನ್, ನಾರಾಯಣ ಮೂರ್ತಿ, ರಾಹುಲ್ ದ್ರಾವಿಡ್

ಬೆಂಗಳೂರು: ಕರ್ನಾಟಕದ 14 ಕ್ಷೇತ್ರಗಳಲ್ಲಿ ಶುಕ್ರವಾರ ನಡೆದ ಮೊದಲ ಹಂತದ ಲೋಕಸಭೆ ಚುನಾವಣೆಗೆ ಮತದಾನ ಆರಂಭವಾದ ಮೊದಲ ಎರಡು ಗಂಟೆಗಳಲ್ಲಿ ಅಂದಾಜು ಶೇ.9.21ರಷ್ಟು ಮತದಾನವಾಗಿದೆ.

ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾದಾಗಿನಿಂದ ಜನರು, ವಿಶೇಷವಾಗಿ ಹಿರಿಯ ನಾಗರಿಕರು ಮತ್ತು ಬೆಳಗಿನ ವಾಕಿಂಗ್ ಮಾಡುವವರು ಮತದಾನ ಮಾಡಲು ಬಂದಿದ್ದರಿಂದ ಮತಗಟ್ಟೆಗಳಲ್ಲಿ ಉದ್ದನೆಯ ಸರತಿ ಸಾಲುಗಳು ಕಂಡುಬಂದವು.

ಚುನಾವಣಾಧಿಕಾರಿಗಳ ಪ್ರಕಾರ, ಬೆಳಗ್ಗೆ 9 ಗಂಟೆಯವರೆಗೆ ಶೇ 9.21ರಷ್ಟು ಮತದಾನವಾಗಿದೆ. ಇಂದು ಮತದಾನ ನಡೆಯಲಿರುವ 14 ಕ್ಷೇತ್ರಗಳ ಪೈಕಿ ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಶೇ.14.33, ಉಡುಪಿ-ಚಿಕ್ಕಮಗಳೂರು ಶೇ.12.82, ಚಾಮರಾಜನಗರ ಮತ್ತು ಮಂಡ್ಯದಲ್ಲಿ ಕನಿಷ್ಠ ಶೇ.7.70ರಷ್ಟು ಮತದಾನವಾಗಿದೆ.

ಬೆಂಗಳೂರು ನಗರದ ಮೂರು ಕ್ಷೇತ್ರಗಳಲ್ಲಿ ಬೆಂಗಳೂರು ದಕ್ಷಿಣದಲ್ಲಿ ಶೇ.9.08, ಬೆಂಗಳೂರು ಉತ್ತರದಲ್ಲಿ ಶೇ.8.64 ಮತ್ತು ಬೆಂಗಳೂರು ದಕ್ಷಿಣದಲ್ಲಿ ಶೇ.8.14ರಷ್ಟು ಮತದಾನವಾಗಿದೆ.

“ಬೆಳಿಗ್ಗೆಯೇ ಜನರು ಮತದಾನ ಮಾಡಲು ಬರುವುದನ್ನು ನಾವು ನೋಡುತ್ತಿದ್ದೇವೆ.ಬೇಸಗೆಯ ಬಿಸಿಲಿನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಜನರು ಬೇಗನೇ ಬಂದು ವೋಟ್‌ ಹಾಕಿ ಹೋಗುತ್ತಿದ್ದಾರೆ” ಎಂದು ಬೆಂಗಳೂರು ದಕ್ಷಿಣ ವಿಭಾಗದ ಮತದಾನ ಕೇಂದ್ರದ ಚುನಾವಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಟಿ ಉದ್ಯಮದ ದಿಗ್ಗಜ ಎನ್‌ಆರ್ ನಾರಾಯಣ ಮೂರ್ತಿ, ಅವರ ಪತ್ನಿ ಮತ್ತು ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯೆ ಸುಧಾ ಮೂರ್ತಿ, ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್, ಕೇಂದ್ರ ಹಣಕಾಸು ಸಚಿವೆ ಮತ್ತು ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ಮತ್ತು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಬೆಂಗಳೂರು ನಗರದಲ್ಲಿ ಬೆಳಗಿನ ಹೊತ್ತು ಮತ ಚಲಾಯಿಸಿದ ಕೆಲವು ಚಿರಪರಿಚಿತ ಮುಖಗಳು.

ಚಿತ್ರನಟರಾದ ಪ್ರಕಾಶ್ ರಾಜ್, ಗಣೇಶ್, ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿ ಸೇರಿದಂತೆ ಪ್ರಮುಖರು ಆಯಾ ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು. ಮೈಸೂರು ರಾಜಮನೆತನದ ಹಿಂದಿನ ವಂಶಸ್ಥರು ಮತ್ತು ಮೈಸೂರಿನ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪತ್ನಿ ತ್ರಿಷಿಕಾ ಕುಮಾರಿ ದೇವಿ ಮತ್ತು ಪ್ರಮೋದಾ ದೇವಿ ಒಡೆಯರ್ ಮೈಸೂರಿನಲ್ಲಿ ಮತ ಚಲಾಯಿಸಿದರು.

ಗೃಹ ಸಚಿವ ಜಿ.ಪರಮೇಶ್ವರ, ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್, ಪಕ್ಷದ ತುಮಕೂರು ಅಭ್ಯರ್ಥಿ ವಿ.ಸೋಮಣ್ಣ ಸಹ ಮತ ಚಲಾಯಿಸಿದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ವಧುವೊಬ್ಬರು ಬೆಳಿಗ್ಗೆ ಮದುವೆ ಸ್ಥಳಕ್ಕೆ ತಲುಪುವ ಮೊದಲು ತನ್ನ ಹಕ್ಕು ಚಲಾಯಿಸಿದರು.

Related Articles

ಇತ್ತೀಚಿನ ಸುದ್ದಿಗಳು