Thursday, June 13, 2024

ಸತ್ಯ | ನ್ಯಾಯ |ಧರ್ಮ

ಉದ್ಯಮಿ ಮಗನ ಪೋಶೆ ಕಾರು ಅಪಘಾತ ಪ್ರಕರಣ: ಮೋದಿ ವಿರುದ್ಧ ಕಿಡಿಕಾರಿದ ರಾಹುಲ್‌

ಮುಂಬೈ:  ಶ್ರೀಮಂತ ಉದ್ಯಮಿ ಮಗ, 17 ವರ್ಷದ ಬಾಲಕ ಮದ್ಯದ ನಶೆಯಲ್ಲಿ ವಿಲಾಸಿ ಕಾರು ‘ಪೋಶೆ’ ಚಾಲನೆ ಮಾಡಿ ಇಬ್ಬರು ಟೆಕಿಗಳ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಆರೋಪಿ ಬಾಲಕನಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಕಿಡಿ ಕಾರಿದ್ದಾರೆ.

ಘಟನೆ ಸಂಬಂಧ ‘ಎಕ್ಸ್‌’ನಲ್ಲಿ ವಿಡಿಯೊ ಹಂಚಿಕೊಂಡಿರುವ ರಾಹುಲ್ ಗಾಂಧಿ, ‘ಯಾವುದೇ ಆಟೊರಿಕ್ಷಾ, ಓಲಾ, ಉಬರ್ ಅಥವಾ ಲಾರಿ – ಬಸ್ ಚಾಲಕರು ವಾಹನ ಚಲಾಯಿಸುವಾಗ ಅಪಘಾತ ಸಂಭವಿಸಿ ಯಾರಾದರೂ ಸಾವಿಗೀಡಾಗಿದ್ದರೆ, ಅಂತಹ ಚಾಲಕರನ್ನು 10 ವರ್ಷಗಳ ಕಾಲ ಜೈಲಿಗೆ ಕಳುಹಿಸಲಾಗುತ್ತಿತ್ತು. ಆದರೆ, ಶ್ರೀಮಂತ ಕುಟುಂಬದ ಬಾಲಕನೊಬ್ಬ ಮದ್ಯದ ನಶೆಯಲ್ಲಿ ಕಾರು ಚಾಲನೆ ಮಾಡಿ ಇಬ್ಬರು ಟೆಕಿಗಳ ಸಾವಿಗೆ ಕಾರಣವಾಗಿದ್ದಾನೆ. ಆತನಿಗೆ  ಜಾಮೀನು ನೀಡಿ ಪೆನ್ನು ಕೊಟ್ಟು ‘ಪ್ರಬಂಧ’ ಬರೆಯಲು ಸೂಚಿಸಲಾಗಿದೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಪುಣೆಯ ಕಲ್ಯಾಣಿ ನಗರದಲ್ಲಿ ಭಾನುವಾರ ಬಾಲಕ ಚಲಾಯಿಸುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಮೃತರನ್ನು ಅನಿಸ್ ಅವಧಿಯಾ ಮತ್ತು ಅಶ್ವಿನಿ ಕೋಸ್ಟಾ ಎಂದು ಗುರುತಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಬಡವರು ಮತ್ತು ಶ್ರೀಮಂತರು ಎಂದು ಎರಡು ಭಾಗಗಳಾಗಿ ವಿಂಗಡಿಸಿದ್ದಾರೆ. ನ್ಯಾಯವೂ ಸಂಪತ್ತಿನ ಮೇಲೆ ಅವಲಂಬಿತವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.ಬಡವರು ಮತ್ತು ಶ್ರೀಮಂತರು ಎಲ್ಲರಿಗೂ ಸಮಾನವಾದ ನ್ಯಾಯ ಸಿಗಬೇಕು. ಅದಕ್ಕಾಗಿಯೇ ನಾವು ನ್ಯಾಯದ ಸಮಾನತೆಗಾಗಿ ಅನ್ಯಾಯದ ವಿರುದ್ಧ ಹೋರಾಡುತ್ತಿದ್ದೇವೆ ಎಂದಿದ್ದಾರೆ.

 ಜಾಮೀನು ಮಂಜೂರು

ರಿಯಲ್ ಎಸ್ಟೇಟ್ ಡೆವಲಪರ್ ಮಗನಾದ ಬಾಲಕನನ್ನು, ಬಾಲ ನ್ಯಾಯ ಮಂಡಳಿ (ಜೆಜೆಬಿ) ಮುಂದೆ ಹಾಜರುಪಡಿಸಲಾಯಿತು. ಕೆಟ್ಟ ಸಹವಾಸದಿಂದ ಬಾಲಕನನ್ನು ದೂರವಿಡುವುದಾಗಿ ತಾತನ ವಾಗ್ದಾನ ಹಾಗೂ ₹7,500 ಶ್ಯೂರಿಟಿ ಆಧಾರದ ಮೇಲೆ ಜಾಮೀನು ನೀಡಲಾಗಿದೆ.

ಕಾನೂನು ಸಂಘರ್ಷದಲ್ಲಿ ಸಿಲುಕಿದ ಬಾಲಕನನ್ನು (ಸಿಸಿಎಲ್) ಕೆಟ್ಟ ಸಹವಾಸದಿಂದ ದೂರವಿಡುವುದಾಗಿ ಬಾಲಕನ ತಾತ ವಾಗ್ದಾನ ನೀಡಿದ್ದಾರೆ. ಅಧ್ಯಯನ ಅಥವಾ ವೃತ್ತಿಜೀವನಕ್ಕೆ ಉಪಯುಕ್ತವಾದ ಯಾವುದೇ ವೃತ್ತಿಪರ ಕೋರ್ಸ್‌ನತ್ತ ಬಾಲಕ ಗಮನ ಹರಿಸುತ್ತಾನೆ. ತನಗೆ ವಿಧಿಸಿರುವ ಷರತ್ತನ್ನು ಪಾಲಿಸಲು ಬಾಲಕ ಸಿದ್ಧನಾಗಿದ್ದಾನೆ. ಹಾಗಾಗಿ ಕಾನೂನು ಸಂಘರ್ಷದಲ್ಲಿ ಸಿಲುಕಿದ ಮಗುವಿಗೆ ಜಾಮೀನು ಮಂಜೂರು ಮಾಡುವುದು ನ್ಯಾಯಸಮ್ಮತವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು