ಬೆಂಗಳೂರು: ಇಲ್ಲಿನ ವಿಧಾನಸೌಧದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿ ಬಸ್ ಸ್ಟ್ಯಾಂಡ್ ಒಂದು ಕಳ್ಳತನಕ್ಕೀಡಾಗಿದ್ದು, ಈ ಕುರಿತು ಬಸ್ ಶೆಲ್ಟರ್ ಸ್ಥಾಪಿಸಿದ್ದ ಕಂಪನಿ ಪೊಲೀಸರಿಗೆ ದೂರು ನೀಡಿದೆ.
ಈ ಶೆಲ್ಟರ್ ನಿರ್ಮಾಣಕ್ಕೆ 10 ಲಕ್ಷ ರೂ ವೆಚ್ಚ ಮಾಡಲಾಗಿತ್ತು. ಶೆಲ್ಟರ್ ಅಳವಡಿಸಿದ ಒಂದು ವಾರದ ನಂತರ ಕಳ್ಳತನ ನಡೆದಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ನಗರದ ಜನನಿಬಿಡ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಶೆಲ್ಟರ್ ಸ್ಥಾಪಿಸಲಾಗಿತ್ತು. ಶೆಲ್ಟರ್ ನಿರ್ಮಾಣದ ಹೊಣೆ ಹೊತ್ತಿರುವ ಕಂಪನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ನಗರದಲ್ಲಿ ಬಸ್ ತಂಗುದಾಣ ನಿರ್ಮಿಸಲು ಬಿಬಿಎಂಪಿ ಕಾಮಗಾರಿಯನ್ನು ಕಂಪನಿಯೊಂದಕ್ಕೆ ವಹಿಸಿದ್ದು, ಈ ಸಂಪೂರ್ಣ ಅವ್ಯವಹಾರ ಕುರಿತು ಕಂಪನಿ ಅಧಿಕಾರಿ ಎನ್.ರವಿರೆಡ್ಡಿ ಅವರು ಸೆ.30ರಂದು ದೂರು ದಾಖಲಿಸಿದ್ದಾರೆ. ಈ ನಿಲ್ದಾಣವನ್ನು ಅತ್ಯಂತ ಬಲವಾದ ಸ್ಟೇನ್ಲೆಸ್ ಸ್ಟೀಲ್ ಬಳಸಿ ಮಾಡಲಾಗಿದೆ. ಪೊಲೀಸರು ಐಪಿಸಿ ಸೆಕ್ಷನ್ 279 (ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ತಂಗುದಾಣವನ್ನು ಆಗಸ್ಟ್ 21ರಂದು ಸ್ಥಾಪಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆದರೆ, ಕಂಪನಿಯ ಉದ್ಯೋಗಿಗಳು ಆಗಸ್ಟ್ 28ರಂದು ಈ ತಂಗದಾಣವನ್ನು ನೋಡಲು ಹೋದಾಗ ಸ್ಥಳದಲ್ಲಿ ಏನೂ ಕಂಡುಬಂದಿಲ್ಲ. ಶೆಲ್ಟರ್ ನಾಪತ್ತೆಯಾಗಿರುವ ಬಗ್ಗೆ ಏನಾದರೂ ಮಾಹಿತಿ ಇದೆಯೇ ಎಂದು ಬಿಬಿಎಂಪಿ ಅಧಿಕಾರಿಗಳನ್ನು ಕೇಳಿದರು. ಅವರು ತಮ್ಮಲ್ಲಿ ಯಾವುದೇ ಮಾಹಿತಿಯಿಲ್ಲವೆಂದು ಸ್ಪಷ್ಟವಾಗಿ ನಿರಾಕರಿಸುತ್ತಾರೆ. ನಂತರ ಕಂಪನಿ ದೂರು ನೀಡಲು ನಿರ್ಧರಿಸಿಸಿ, ಪೊಲೀಸರನ್ನು ಸಂಪರ್ಕಿಸಿತು.
ಲಿಂಗರಾಜಪುರ, ಹೆಣ್ಣೂರು, ಬಾಣಸವಾಡಿ, ಪುಲಕೇಶಿನಗರ, ಗಂಗೇನಹಳ್ಳಿ, ಹೆಬಾಳ ಮತ್ತು ಯಲಹಂಕಕ್ಕೆ ತೆರಳುವ ನೂರಾರು ಪ್ರಯಾಣಿಕರಿಗೆ ಈ ಬಸ್‌ಸ್ಟ್ಯಾಂಡ್ ಶೆಲ್ಟರ್ ನೆರಳು ನೀಡುತ್ತಿತ್ತು. ಹಳೆ ಬಸ್ ತಂಗುದಾಣ ಅತ್ಯಂತ ಶಿಥಿಲಗೊಂಡಿದ್ದು, ಭಾರಿ ಮಳೆಯ ಸಂದರ್ಭದಲ್ಲಿ ಪ್ರಯಾಣಿಕರಿಗೆ ಅಪಾಯ ತಂದೊಡ್ಡುವ ಸ್ಥಿತಿಯಲ್ಲಿದ್ದ ಕಾರಣ ಕೆಲ ದಿನಗಳ ಹಿಂದೆ ಕೆಡವಲಾಗಿದೆ ಎಂದು ಪ್ರಯಾಣಿಕರೊಬ್ಬರು ತಿಳಿಸಿದರು. ಸದ್ಯ ಬಸ್ ನಿಲ್ದಾಣದಲ್ಲಿ ಕೇವಲ 20 ಪ್ರಯಾಣಿಕರು ಕುಳಿತುಕೊಳ್ಳಬಹುದಾದ ಸಣ್ಣ ಶೆಲ್ಟರ್ ಮಾತ್ರ ಉಳಿದಿದೆ.