ಪರಿಷತ್‌ ಸೋಲು | ನಾನು ಯಡಿಯೂರಪ್ಪನವರ ಮಗ, ಸೋಲಿಗೆ ಹೆದರಿ ಓಡಿಹೋಗುವವನಲ್ಲ: ಬಿ.ವೈ. ವಿಜಯೇಂದ್ರ

ಬೆಂಗಳೂರು: “ನನ್ನ ಹಣೆಬರಹದಲ್ಲಿ ಏನಿದೆಯೋ ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಹಾಗೆಯೇ ಬೇರೆಯವರ ಹಣೆಬರಹವನ್ನು ಬದಲಾಯಿಸಲು ನನ್ನಿಂದಲೂ ಆಗುವುದಿಲ್ಲ. ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಹೆದರಿ ಓಡಿಹೋಗುವವ ನಾನಲ್ಲ, ನಾನು ಬಿ.ಎಸ್. ಯಡಿಯೂರಪ್ಪನವರ ಮಗ,” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬಂಡಾಯ ನಾಯಕರು ಹಾಗೂ ವಿರೋಧಿಗಳಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ರಾಜ್ಯಸಭಾ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ಹಿನ್ನೆಲೆಯಲ್ಲಿ ತಮಗೆ ರಾಜ್ಯಾಧ್ಯಕ್ಷ ಸ್ಥಾನ ಕೈತಪ್ಪಬಹುದು ಎಂಬ ವದಂತಿಗಳ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಅತ್ಯಂತ ಕಡಕ್ ಆಗಿ ಉತ್ತರಿಸಿದ್ದಾರೆ. ಇಂತಹ ಸವಾಲುಗಳನ್ನು ಅರಗಿಸಿಕೊಳ್ಳುವ ಮತ್ತು ಎದುರಿಸುವ ಸಂಪೂರ್ಣ ಶಕ್ತಿ ತಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ತಾವು ಪಕ್ಷದ ಅಧ್ಯಕ್ಷರಾಗಿ ಯಾರಿಗೆ ಏನು ಹೇಳಬೇಕೋ ಅದನ್ನು ಸೂಕ್ತ ವೇದಿಕೆಯಲ್ಲಿ ಖಂಡಿತವಾಗಿ ಹೇಳುವುದಾಗಿ ತಿಳಿಸಿದರು.

ಚುನಾವಣಾ ತಂತ್ರಗಾರಿಕೆಯ ಕುರಿತು ಮಾತನಾಡಿದ ವಿಜಯೇಂದ್ರ, “ಎಂಟು-ಹತ್ತು ದಿನಗಳ ಹಿಂದೆಯೇ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿಯವರು ನನಗೆ ಕರೆ ಮಾಡಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಚರ್ಚಿಸಿದ್ದರು. ಎರಡೂ ಪಕ್ಷಗಳಲ್ಲಿ ಯಾರಾದರೂ ಒಬ್ಬರು ಅಭ್ಯರ್ಥಿ ಹಾಕಿ ಜಂಟಿಯಾಗಿ ಹೋರಾಡೋಣ ಎಂದಾಗ, ನೀವೇ ಅಭ್ಯರ್ಥಿ ಹಾಕಿ ಎಂದು ನಾನೇ ಹೇಳಿದ್ದೆ.

ಮೈತ್ರಿಯಂತೆ ಉಭಯ ಪಕ್ಷಗಳು ಒಟ್ಟಾಗಿಯೇ ಇದ್ದೆವು. ಆದರೆ ದುರಾದೃಷ್ಟವಶಾತ್ ಜೆಡಿಎಸ್‌ನಿಂದ ಆರೇಳು ಹಾಗೂ ಬಿಜೆಪಿಯಿಂದ ನಾಲ್ಕೈದು ಶಾಸಕರು ಅಡ್ಡಮತದಾನ ಮಾಡಿದ್ದಾರೆ. ಪಕ್ಷಕ್ಕೆ ದ್ರೋಹ ಬಗೆದ ಇಂತಹ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ಕ್ಷಮೆ ಇಲ್ಲ. ಯಾರ್ಯಾರು ಈ ಒಳಸಂಚಿನ ಆಟವಾಡಿದ್ದಾರೆ ಎಂಬ ಸಂಪೂರ್ಣ ಮಾಹಿತಿ ನಮ್ಮ ಬಳಿ ಇದೆ,” ಎಂದು ಎಚ್ಚರಿಸಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಚಾಣಕ್ಯ ತಂತ್ರದ ಕುರಿತ ಪ್ರಶ್ನೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, “ರಾಜ್ಯದ ಜನತೆ ಹಾಗೂ ನಾವು ಇಂತಹ ಬಹಳ ಜನ ಚಾಣಕ್ಯರನ್ನು ನೋಡಿದ್ದೇವೆ. ಕುದುರೆಯು ಓಡುವ ಸಮಯದಲ್ಲಿ ಓಡುತ್ತದೆ, ಮುಗ್ಗರಿಸಿ ಬೀಳುವಾಗ ಬೀಳುತ್ತದೆ. ಎದುರಾಳಿಗಳನ್ನು ಯಾವ ರೀತಿ ಬಗ್ಗಿಸಬೇಕೋ ಆ ತಂತ್ರ ನಮಗೂ ಗೊತ್ತಿದೆ. ಇಲ್ಲಿಗೆ ಎಲ್ಲವೂ ಮುಗಿದಿಲ್ಲ. ಶಿವಕುಮಾರ್ ಆಗಲಿ ಅಥವಾ ಇನ್ಯಾರೇ ಆಗಲಿ, ನಾವು ಯಾವುದಕ್ಕೂ ಹೆದರಿ ಓಡಿಹೋಗುವವರಲ್ಲ,” ಎಂದರು.

ಅಡ್ಡಮತದಾನದಿಂದ ತಮಗೂ ಮತ್ತು ಕುಮಾರಸ್ವಾಮಿ ಅವರಿಗೂ ತೀವ್ರ ಬೇಸರ ಹಾಗೂ ನೋವಾಗಿದೆ ಎಂದು ಒಪ್ಪಿಕೊಂಡ ವಿಜಯೇಂದ್ರ, ಈ ಇಡೀ ಪ್ರಸಂಗವನ್ನು ಪಕ್ಷವು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರದಲ್ಲೇ ಇದರ ಸಂಪೂರ್ಣ ಚಿತ್ರಣ ಹೊರಬರಲಿದೆ ಎಂದಿದ್ದಾರೆ.

ಬಂಡಾಯವೆದ್ದವರ ವಿರುದ್ಧ ಕ್ರಮದ ಕುರಿತು ಮಾತನಾಡಿದ ಅವರು, “ನಾನು ಈಗಾಗಲೇ ಪಕ್ಷದ ರಾಷ್ಟ್ರೀಯ ನಾಯಕರ ಭೇಟಿಗೆ ಸಮಯ ಕೇಳಿದ್ದು, ಶೀಘ್ರದಲ್ಲೇ ದೆಹಲಿಗೆ ತೆರಳಲಿದ್ದೇನೆ. ನಮ್ಮ ಬೆನ್ನಿಗೆ ಇರಿದ ಆ ‘ಮೀರ್ ಸಾದಿಕ್’ಗಳು ಯಾರು ಎಂಬ ಪಟ್ಟಿಯನ್ನು ಹೈಕಮಾಂಡ್ ನಾಯಕರ ಮುಂದೆ ನೇರವಾಗಿ ಇಟ್ಟು, ಅವರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದು ನಿಶ್ಚಿತ,” ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ, ಬಿಜೆಪಿ ಪಾಳಯದಲ್ಲಿ ಗೊಂದಲ ಮೂಡಿಸಲು ಕಾಂಗ್ರೆಸ್ ನಾಯಕರು ಕೆಲವು ಶಾಸಕರ ಹೆಸರುಗಳನ್ನು ವ್ಯವಸ್ಥಿತವಾಗಿ ತೇಲಿಬಿಡುತ್ತಿದ್ದಾರೆ ಎಂದು ಆರೋಪಿಸಿದ ವಿಜಯೇಂದ್ರ, ಮಾಜಿ ಸಚಿವ ಭೈರತಿ ಬಸವರಾಜ್ ಅವರ ಹೆಸರು ಹರಿದಾಡುತ್ತಿರುವುದರ ಹಿಂದೆ ಕಾಂಗ್ರೆಸ್‌ನ ಕುತಂತ್ರವಿದೆ. ಬಸವರಾಜ್ ಯಾವುದೇ ತಪ್ಪು ಕೆಲಸ ಮಾಡಿಲ್ಲ ಮತ್ತು ಅವರು ಪಕ್ಷದ ನಿಷ್ಠಾವಂತ ನಾಯಕರಾಗಿದ್ದಾರೆ ಎಂದು ಬೆಂಬಲ ಸೂಚಿಸಿದರು.

Related Articles

ಇತ್ತೀಚಿನ ಸುದ್ದಿಗಳು