ಹೊಸದಿಲ್ಲಿ: ಲೋಕಸಭಾ ಚುನಾವಣೆ ನಡೆಯುವ ಮೊದಲೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಜಾರಿಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಸಿಎಎ ದೇಶದ ಮಹೋನ್ನತ ಕಾಯ್ದೆಯಾಗಲಿದೆ ಎಂದು ಪ್ರತಿಪಾದಿಸಿರುವ ಅವರು, ಈ ಕಾಯ್ದೆಯ ಉದ್ದೇಶ ಪೌರತ್ವವನ್ನು ನೀಡುವುದೇ ಹೊರತು ಯಾರದ್ದಾದರೂ ಪೌರತ್ವವನ್ನು ಕಿತ್ತುಕೊಳ್ಳುವುದಲ್ಲ ಎಂದೂ ಅಮಿತ್ ಶಾ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ET Now ಜಾಗತಿಕ ವ್ಯಾಪಾರ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯು ದೇಶದ ಕಾಯ್ದೆಯ ಅಧಿಸೂಚನೆಯನ್ನು ಚುನಾವಣೆಗೂ ಮುನ್ನವೇ ಹೊರಡಿಸಲಾಗುತ್ತದೆ. ಈ ಕುರಿತು ಯಾವುದೇ ಗೊಂದಲ ಪಡುವ ಅಗತ್ಯವಿಲ್ಲ ಎಂದರು.
ಮುಸ್ಲಿಮರ ಪ್ರಚೋದನೆ ಸಲ್ಲದು ಈ ಕಾಯ್ದೆಯ ವಿರುದ್ಧ ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರನ್ನು, ವಿಶೇಷವಾಗಿ ಮುಸ್ಲಿಮರನ್ನು ಪ್ರಚೋದಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಯಾರದ್ದಾದರೂ ಪೌರತ್ವವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ, ಕಾಯ್ದೆಯಲ್ಲಿ ಅಂತಹ ಅವಕಾಶವೇ ಇಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯು ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾಗಿ ದೇಶಕ್ಕೆ ಆಗಮಿಸಿರುವ ನಿರಾಶ್ರಿತರಿಗೆ ಮಾನ್ಯತೆಯಿಂದ ಪೌರತ್ವ ನೀಡುವ ಕುರಿತು ರೂಪಿಸಿರುವ ಕಾಯ್ದೆಯಾಗಿದೆ ಎಂದರು.
ಕಾಂಗ್ರೆಸ್ ಸರಕಾರವು ಈ ಹಿಂದೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವುದಾಗಿ ತಿಳಿಸಿತ್ತು. ಆದರೆ, ಈಗ ವಿರೋಧ ಮಾಡುತ್ತಿದೆ. ದೇಶವು ವಿಭಜನೆಯಾದಾಗ, ಆ ದೇಶಗಳಲ್ಲಿ ಅಲ್ಪಸಂಖ್ಯಾತರು ಕಿರುಕುಳಕ್ಕೊಳಗಾಗಿದ್ದರು. ಆಗ ನಿರಾಶ್ರಿತರನ್ನು ದೇಶಕ್ಕೆ ಸ್ವಾಗತಿಸಲಾಗುವುದು. ಅವರಿಗೆ ಭಾರತೀಯ ಪೌರತ್ವವನ್ನು ನೀಡುವುದಾಗಿ ಕಾಂಗ್ರೆಸ್ ಹೇಳಿತ್ತು.” ಎಂದು ಅಮಿತ್ ಶಾ ಸ್ಮರಿಸಿಕೊಂಡರು.
ಸಿಎಎ ಕಾಯ್ದೆಯ ವಿರುದ್ಧ ಕಳೆದ ನಾಲ್ಕೈದು ವರ್ಷಗಳ ಹಿಂದೆ ದೇಶದಾದ್ಯಂತ ಬೃಹತ್ ಪ್ರತಿಭಟನೆ ನಡೆದಿತ್ತು. ಕೆಲವು ರಾಜ್ಯಗಳಲ್ಲಿ ಜನರು ವರ್ಷಗಟ್ಟಲೇ ಬೀದಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದರಿಂದ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಮೌನವಾಗಿತ್ತು. ಈಗ ಲೋಕಸಭೆ ಚುನಾವಣೆಗೂ ಮುನ್ನವೇ ಸಿಎಎ ಕಾನೂನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.