Home ದೇಶ ವಾಣಿಜ್ಯ ಎಲ್‌ಪಿಜಿ ಕೊರತೆ ತೀವ್ರ: ಬಗೆಹರಿಸಲು ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ

ವಾಣಿಜ್ಯ ಎಲ್‌ಪಿಜಿ ಕೊರತೆ ತೀವ್ರ: ಬಗೆಹರಿಸಲು ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ

0

ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದ ಹೋಟೆಲ್ ಹಾಗೂ ಆಹಾರ ಸಂಬಂಧಿತ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ತುರ್ತು ಹಸ್ತಕ್ಷೇಪವನ್ನು ಕೋರಿದ್ದಾರೆ. ಈ ಸಂಬಂಧ ಅವರು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿದ್ದಾರೆ.

ಇತ್ತೀಚೆಗೆ ದೇಶೀಯ ಬಳಕೆಯ ಎಲ್‌ಪಿಜಿ ಪೂರೈಕೆಗೆ ಆದ್ಯತೆ ನೀಡುವಂತೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹೊರಡಿಸಿದ ಆದೇಶದ ಬಳಿಕ, ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ ಎಂದು ಸಿಎಂ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಪರಿಸ್ಥಿತಿಯಿಂದ ಪ್ರತಿದಿನ ಸಾವಿರಾರು ಜನರಿಗೆ ಆಹಾರ ಒದಗಿಸುವ ಹೋಟೆಲ್‌ಗಳು, ಮೆಸ್‌ಗಳು, ವಿದ್ಯಾರ್ಥಿ ವಸತಿಗೃಹಗಳು, ಕಲ್ಯಾಣ ಮಂಟಪಗಳು ಸೇರಿದಂತೆ ಅನೇಕ ಸಂಸ್ಥೆಗಳ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ. ಕೆಲವು ದೊಡ್ಡ ಹೋಟೆಲ್‌ಗಳು ಕೂಡ ಗ್ಯಾಸ್ ಕೊರತೆಯಿಂದಾಗಿ ತಾತ್ಕಾಲಿಕವಾಗಿ ಸೇವೆಗಳನ್ನು ಸ್ಥಗಿತಗೊಳಿಸಿರುವುದು ಗಮನಾರ್ಹ ಎಂದು ಅವರು ತಿಳಿಸಿದ್ದಾರೆ.

ಆದ್ದರಿಂದ ವಾಣಿಜ್ಯ ಎಲ್‌ಪಿಜಿಯ ಸಮರ್ಪಕ ಪೂರೈಕೆಯನ್ನು ತಕ್ಷಣ ಪುನಃಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ. ನಗರದಲ್ಲಿ ಆಹಾರ ಪೂರೈಕೆ ಸರಪಳಿ ವ್ಯತ್ಯಯಗೊಳ್ಳದಂತೆ ತುರ್ತು ಕ್ರಮ ಅಗತ್ಯವಿದೆ ಎಂದು ಅವರು ತಮ್ಮ ಪತ್ರದಲ್ಲಿ ಒತ್ತಿಹೇಳಿದ್ದಾರೆ.

You cannot copy content of this page

Exit mobile version