ಬೆಂಗಳೂರು/ನವದೆಹಲಿ: ದೆಹಲಿಯಲ್ಲಿ ಇಂದು ನಡೆದ ಕಾವೇರಿ ನೀರು ನಿರ್ವಹಣಾ ಸಮಿತಿ (CWRC) ಸಭೆಯಲ್ಲಿ ಕರ್ನಾಟಕಕ್ಕೆ ಹಿನ್ನಡೆಯಾಗಿದ್ದು, ಮುಂದಿನ 15 ದಿನಗಳ ಕಾಲ ಪ್ರತಿದಿನ ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಹರಿಸುವಂತೆ ಸಮಿತಿ ಆದೇಶ ನೀಡಿದೆ.
ರಾಜ್ಯದಲ್ಲಿ ಮಳೆಯ ಕೊರತೆ ಹಾಗೂ ಜಲಾಶಯಗಳಲ್ಲಿ ನೀರಿನ ಅಭಾವವಿರುವ ಪರಿಸ್ಥಿತಿಯ ನಡುವೆಯೇ ಈ ಆದೇಶ ಹೊರಬಿದ್ದಿರುವುದು ರಾಜ್ಯ ಸರ್ಕಾರಕ್ಕೆ ಆತಂಕ ಉಂಟುಮಾಡಿದೆ. ಸಮಿತಿಯ ನಿರ್ದೇಶನದಂತೆ ಮುಂದಿನ 15 ದಿನಗಳ ಕಾಲ ನಿರಂತರವಾಗಿ ನೀರು ಬಿಡುಗಡೆ ಮಾಡಬೇಕಾಗಿದೆ.
ಈ ಕುರಿತು ತಕ್ಷಣವೇ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, “ಇಂದು ಸಭೆ ನಡೆದಿದ್ದು, 15 ದಿನಗಳ ಕಾಲ 3,500 ಕ್ಯೂಸೆಕ್ ನೀರು ಬಿಡುವಂತೆ ಸೂಚಿಸಿದ್ದಾರೆ. ಇದರಿಂದ ಸುಮಾರು 4 ಟಿಎಂಸಿ ನೀರು ಬಿಡುಗಡೆ ಮಾಡಬೇಕಾಗುತ್ತದೆ. ಈ ಆದೇಶದ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA)ಕ್ಕೆ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ. ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ಸಭೆಗೆ ಮುನ್ನ ರಾಜ್ಯ ಜಲಸಂಪನ್ಮೂಲ ಇಲಾಖೆಯು, ಕಾವೇರಿ ಜಲಾನಯನ ಪ್ರದೇಶದಲ್ಲಿ ತೀವ್ರ ಮಳೆಯ ಕೊರತೆ ಉಂಟಾಗಿರುವ ಕಾರಣ ತಮಿಳುನಾಡಿಗೆ ನೀರು ಹರಿಸುವುದು ಸಾಧ್ಯವಿಲ್ಲ ಎಂದು ಸಮಿತಿಯ ಗಮನಕ್ಕೆ ತಂದಿತ್ತು. ಜೂನ್ ತಿಂಗಳಲ್ಲಿ ಕೆಆರ್‌ಎಸ್ ಸೇರಿದಂತೆ ಪ್ರಮುಖ ಜಲಾಶಯಗಳ ವ್ಯಾಪ್ತಿಯಲ್ಲಿ ಸಮರ್ಪಕ ಮಳೆಯಾಗದ ಕಾರಣ ಒಳಹರಿವು ಬಹುತೇಕ ಶೂನ್ಯವಾಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದರು.
ಜುಲೈ ತಿಂಗಳಲ್ಲಿಯೂ ಕೆಲವೆಡೆ ಮಾತ್ರ ಅಲ್ಪ ಪ್ರಮಾಣದ ಮಳೆಯಾಗಿದ್ದು, ಅಣೆಕಟ್ಟುಗಳಲ್ಲಿ ಅಗತ್ಯ ಪ್ರಮಾಣದ ನೀರು ಸಂಗ್ರಹವಾಗಿಲ್ಲ. ಜೊತೆಗೆ ಮುಂಗಾರು ಮತ್ತೆ ಚುರುಕಾಗುವ ಸ್ಪಷ್ಟ ಮುನ್ಸೂಚನೆಯೂ ಇಲ್ಲದಿರುವುದರಿಂದ ತಮಿಳುನಾಡಿಗೆ ನೀರು ಹರಿಸುವುದು ಕಷ್ಟಕರ ಎಂದು ರಾಜ್ಯವು ವಾದಿಸಿತ್ತು.
ಪ್ರಸ್ತುತ ಜಲಾಶಯಗಳಲ್ಲಿರುವ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಬೇಕಾದ ಅನಿವಾರ್ಯತೆ ಇದೆ ಎಂದು ಕರ್ನಾಟಕ ಸಮಿತಿಯ ಮುಂದೆ ತನ್ನ ವಾದ ಮಂಡಿಸಿತ್ತು. ಹಿಂದೆಂದೂ ಕಾಣದಷ್ಟು ಮಳೆಯ ಕೊರತೆಯನ್ನು ರಾಜ್ಯ ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಈ ಪರಿಸ್ಥಿತಿಯಲ್ಲೂ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರು ಬಿಡುಗಡೆ ಮಾಡಲು ನೀಡಿರುವ ಆದೇಶವು ರಾಜ್ಯದ ಪಾಲಿಗೆ ದೊಡ್ಡ ಹೊರೆಯಾಗಲಿದೆ.
