ದೇಶಾದ್ಯಂತ ಅನುಷ್ಠಾನಗೊಳ್ಳುತ್ತಿರುವ ಐನೂರಕ್ಕೂ ಹೆಚ್ಚು ಹೆದ್ದಾರಿ ಯೋಜನೆಗಳು ನಿಗದಿತ ಗಡುವು ಮೀರಿದ್ದರೂ ಪೂರ್ಣಗೊಂಡಿಲ್ಲ. ಈ ಯೋಜನೆಗಳಲ್ಲಿ ಅತ್ಯಂತ ಹೆಚ್ಚಿನ ಯೋಜನೆಗಳು ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಸಂಬಂಧಿಸಿವೆ. ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ಕೇಂದ್ರ ಸರ್ಕಾರ ದಂಡ ವಿಧಿಸಿದೆಯಾದರೂ, ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ. ಇಷ್ಟೇ ಅಲ್ಲದೆ, ಸರ್ಕಾರ ವಿಧಿಸಿದ ದಂಡದ ಪೂರ್ಣ ಮೊತ್ತವನ್ನು ಗುತ್ತಿಗೆದಾರರಿಂದ ವಸೂಲಿ ಮಾಡಲು ಕೂಡ ಸಾಧ್ಯವಾಗಿಲ್ಲ. ಇತ್ತೀಚೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ವರದಿಯಲ್ಲಿ ಈ ಮಾಹಿತಿ ತಿಳಿದುಬಂದಿದೆ.
ವರದಿಯ ಪ್ರಕಾರ, ರಸ್ತೆ ಯೋಜನೆಗಳಿಗೆ ಸಂಬಂಧಿಸಿದಂತೆ ದೇಶಾದ್ಯಂತ ಕಳೆದ ಐದು ವರ್ಷಗಳಿಂದ 527 ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಈ ಯೋಜನೆಗಳಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿದ್ದ ಗಡುವು ಬಹಳ ಹಿಂದೆಯೇ ಮುಗಿದಿದ್ದರೂ, ಇಂದಿಗೂ ಅವು ಸಾರ್ವಜನಿಕರ ಬಳಕೆಗೆ ಮುಕ್ತವಾಗಿಲ್ಲ. ಇದರಿಂದಾಗಿ ಕೆಲವು ಸ್ಥಳಗಳಲ್ಲಿ, ವಿಶೇಷವಾಗಿ ರಾಜ್ಯಗಳ ಪ್ರಮುಖ ರಸ್ತೆ ಜಂಕ್ಷನ್‌ಗಳ ಬಳಿ ತೀವ್ರ ಸಂಚಾರ ದಟ್ಟಣೆಯ ಸಮಸ್ಯೆ ಎದುರಾಗುತ್ತಿದೆ.
ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಪ್ರಕಾರ, ಕಾಮಗಾರಿ ಪೂರ್ಣಗೊಳ್ಳದ ಕಾರಣ ಈ ಯೋಜನೆಗಳಿಗೆ ಕಾಲಕಾಲಕ್ಕೆ ನಿಗದಿಪಡಿಸಲಾಗಿದ್ದ ಅಂತಿಮ ಗಡುವನ್ನು ವಿಸ್ತರಿಸಲಾಗಿದೆ. ಭೂಸ್ವಾಧೀನ, ಕಾನೂನುಬದ್ಧ ಅನುಮತಿಗಳು, ಅತಿಕ್ರಮಣ ತೆರವುಗೊಳಿಸುವಲ್ಲಿ ವಿಳಂಬ ಮತ್ತು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ತಾಂತ್ರಿಕ ಅಡಚಣೆಗಳು ಯೋಜನೆಗಳ ವಿಳಂಬಕ್ಕೆ ಪ್ರಮುಖ ಕಾರಣಗಳಾಗಿವೆ. ಇದರ ಜೊತೆಗೆ ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಕಾಮಗಾರಿ ಸ್ಥಗಿತಗೊಂಡಿದ್ದು ಕೂಡ ಯೋಜನೆಗಳು ಅಪೂರ್ಣವಾಗಿ ಉಳಿಯಲು ಪ್ರಮುಖ ಕಾರಣ ಎಂದು ಹೇಳಲಾಗಿದೆ.
ವರದಿಯ ಪ್ರಕಾರ, ಇಂತಹ ಅಪೂರ್ಣ ಯೋಜನೆಗಳು ಹೆಚ್ಚಾಗಿರುವ ರಾಜ್ಯಗಳಲ್ಲಿ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಸೇರಿವೆ. ಸರ್ಕಾರದ ಮಾಹಿತಿ ಪ್ರಕಾರ, ವಿಳಂಬವಾದ ಯೋಜನೆಗಳ ಪ್ರಕರಣಗಳಲ್ಲಿ ಗುತ್ತಿಗೆದಾರರಿಗೆ ಇಲ್ಲಿಯವರೆಗೆ 2,732 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆಯಾದರೂ, ಈ ಪೈಕಿ ಕೇವಲ 780 ಕೋಟಿ ರೂಪಾಯಿಯನ್ನು ಮಾತ್ರ ಸರ್ಕಾರ ವಸೂಲಿ ಮಾಡಿದೆ.
ವಿಳಂಬವಾದ ಯೋಜನೆಗಳಲ್ಲಿ ವೆಚ್ಚ ಹೆಚ್ಚಳಕ್ಕೆ (Cost Escalation) ಅವಕಾಶವಿರುವುದಿಲ್ಲ. ಒಂದು ವೇಳೆ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ವಿಳಂಬ ಸಂಭವಿಸಿದರೆ, ಒಪ್ಪಂದದ ನಿಯಮಗಳ ಪ್ರಕಾರ ಕ್ರಮ ಕೈಗೊಂಡು ದಂಡ ವಿಧಿಸಲಾಗುತ್ತದೆ. ಯೋಜನೆಗಳ ನಿರಂತರ ಉಸ್ತುವಾರಿಗಾಗಿ ಸರ್ಕಾರ ಭೂಮಿರಾಶಿ ಪೋರ್ಟಲ್, ಜಿಐಎಸ್ ಆಧಾರಿತ ಭೂಸ್ವಾಧೀನ ಪೋರ್ಟಲ್ ಹಾಗೂ ಪರಿವೇಶ ಪೋರ್ಟಲ್‌ಗಳನ್ನು ಪ್ರಾರಂಭಿಸಿದೆ. ಮೂರು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ವಿಳಂಬವಾಗಿರುವ ಯೋಜನೆಗಳನ್ನು ಶೀಘ್ರವೇ ಸಾರ್ವಜನಿಕರಿಗೆ ಮುಕ್ತಗೊಳಿಸಲು ಈ ವ್ಯವಸ್ಥೆಗಳ ಮೂಲಕ ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತಿದೆ.
ವಾರಾಣಸಿಗೆ ₹25,500 ಕೋಟಿ ಕೊಡುಗೆ
ಇದೇ ವೇಳೆ ಕೇಂದ್ರ ಸರ್ಕಾರವು ಬುಧವಾರ ವಾರಾಣಸಿಗೆ ಎರಡು ಪ್ರಮುಖ ಹೆದ್ದಾರಿ ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಯೋಜನೆಗಳಿಗೆ ಒಟ್ಟಾರೆಯಾಗಿ ಸುಮಾರು 25,500 ಕೋಟಿ ರೂಪಾಯಿ ಹೂಡಿಕೆಯಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿ (CCEA) ಉತ್ತರ ಪ್ರದೇಶದ ವಾರಾಣಸಿ ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ವರುಣಾ ನದಿಯ ದಂಡೆಯ ಉದ್ದಕ್ಕೂ ರಾಷ್ಟ್ರೀಯ ಹೆದ್ದಾರಿ-31 ಮತ್ತು ವಾರಾಣಸಿ ರಿಂಗ್ ರೋಡ್ ಅನ್ನು ಸಂಪರ್ಕಿಸುವ 43.22 ಕಿಲೋಮೀಟರ್ ಉದ್ದದ ಲಿಂಕ್ ರಸ್ತೆ ಅಭಿವೃದ್ಧಿಗೆ ಅನುಮೋದನೆ ನೀಡಿದೆ.
