Home ಬೆಂಗಳೂರು ತಮಿಳುನಾಡಿಗೆ ಒಂದು ಹನಿ ನೀರು ಹರಿದರೆ ರಾಜ್ಯದಲ್ಲಿ ಬೆಂಕಿ ಬೀಳಲಿದೆ – ವಾಟಾಳ್ ನಾಗರಾಜ್

ತಮಿಳುನಾಡಿಗೆ ಒಂದು ಹನಿ ನೀರು ಹರಿದರೆ ರಾಜ್ಯದಲ್ಲಿ ಬೆಂಕಿ ಬೀಳಲಿದೆ – ವಾಟಾಳ್ ನಾಗರಾಜ್

ಬೆಂಗಳೂರು : ರಾಜ್ಯದಲ್ಲಿ ತೀವ್ರ ಅಭಾವದ ನಡುವೆಯೂ, ಕಾವೇರಿ ನೀರು (Cauvery Water Dispute) ನಿಯಂತ್ರಣ ಸಮಿತಿ (CWRC) ಕರ್ನಾಟಕಕ್ಕೆ ಮತ್ತೊಂದು ಬಿಗ್ ಶಾಕ್ ನೀಡಿದೆ. ತಮಿಳುನಾಡಿಗೆ (Tamil Nadu) ಮುಂದಿನ 15 ದಿನಗಳ ಕಾಲ ಪ್ರತಿನಿತ್ಯ 3,500 ಕ್ಯೂಸೆಕ್‌ನಂತೆ ಒಟ್ಟು 4 ಟಿಎಂಸಿ ನೀರು ಬಿಡುವಂತೆ ಸಮಿತಿ ನಿರ್ದೇಶನ ನೀಡಿದೆ.

ಸಮಿತಿಯ ಈ ನಿರ್ಧಾರಕ್ಕೆ ಕಾವೇರಿ ಭಾಗದ ರೈತರು ಮತ್ತು ಕನ್ನಡಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಮ್ಮಲ್ಲಿಯೇ ಕುಡಿಯುವ ನೀರಿಗೆ ಅಭಾವವಿರುವಾಗ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವೇ ಇಲ್ಲ. ಜೀವ ಕೊಟ್ಟೇವು, ರಕ್ತ ಕೊಟ್ಟೇವು… ಆದರೆ ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಒಂದು ಹನಿ ನೀರು ಬಿಟ್ಟರೂ ರಾಜ್ಯದಲ್ಲಿ ಬೆಂಕಿ ಬೀಳಲಿದೆ!

ಈ ಆದೇಶದ ವಿರುದ್ಧ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ ಬೆಳೆಗಳಿಗೆ ಹಾಗೂ ಕುಡಿಯಲು ನೀರಿಲ್ಲದೆ ರೈತರು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಈ ನೈಜ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ CWRCಗೆ ಸರಿಯಾಗಿ ಮನವರಿಕೆ ಮಾಡಿಕೊಡಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಒಂದು ಹನಿ ನೀರನ್ನೂ ಹರಿಸಬಾರದು. ಸರ್ಕಾರದ ಮೃದು ಧೋರಣೆಯಿಂದ ನೀರು ಹರಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಹಾಗೂ ರಾಜ್ಯದಲ್ಲಿ ಬೆಂಕಿ ಬೀಳಲಿದೆ ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮಿಳುನಾಡು ಸಿಎಂ ಭೇಟಿಗೆ ವಿರೋಧ!

ಕಾವೇರಿ ನೀರು ಹಂಚಿಕೆ ವಿಚಾರವಾಗಿ ಚರ್ಚಿಸಲು ಆಗಸ್ಟ್ 3ರಂದು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಕರ್ನಾಟಕಕ್ಕೆ ಆಗಮಿಸಲಿದ್ದು, ಉಭಯ ರಾಜ್ಯಗಳ ಸಿಎಂ ಸಭೆ ನಡೆಯುವ ವಿಚಾರವಾಗಿ ಪ್ರತಿಕ್ರಿಯಿಸಿದ ವಾಟಾಳ್‌ ನಾಗರಾಜ್‌, ಯಾವ ಅಜೆಂಡಾ ಇಟ್ಟುಕೊಂಡು ಅವರನ್ನು ಆಹ್ವಾನಿಸಿದ್ದೀರಿ? ಈ ಮಾತುಕತೆಗೆ ಮಣಿದು ತಮಿಳುನಾಡಿಗೆ ನೀರು ಹರಿಸಿದರೆ ಡಿ.ಕೆ.ಶಿವಕುಮಾರ್ ಹಾಗೂ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ನೇರ ಎಚ್ಚರಿಕೆ ನೀಡಿದ್ದಾರೆ.

You cannot copy content of this page

Exit mobile version