ಬಿಜೆಪಿ ಆಡಳಿತಾವಧಿಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ನಿರ್ವಹಣೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತು ತನಿಖೆ ನಡೆಸಿ ಆಯೋಗ ಸಲ್ಲಿಸಿರುವ ವರದಿಯನ್ನು ಗುರುವಾರದ ಸಚಿವ ಸಂಪುಟ ಸಭೆಯ ಮುಂದೆ ಇಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳವಾರ ಬೆಳಗ್ಗೆ ನಗರದ ಶಾರದಾದೇವಿ ನಗರದಲ್ಲಿನ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಸಚಿವ ಸಂಪುಟದ ನಿರ್ಧಾರದ ಆಧಾರದ ಮೇಲೆ ಹಣ ದುರುಪಯೋಗ ಪಡಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.
ಕೋವಿಡ್‌ಗೆ ಸಂಬಂಧಿಸಿದ ತನಿಖೆ ರಾಜಕೀಯ ಪ್ರೇರಿತವಾಗಿದೆ ಮತ್ತು ಸರ್ಕಾರ ಸುಳ್ಳು ವರದಿಯನ್ನು ಪಡೆದಿದೆ ಎಂದು ಮಾಜಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿರುವ ಬಗ್ಗೆ ಕೇಳಿದಾಗ, ಸಿದ್ದರಾಮಯ್ಯ ಅವರು, “ವರದಿಯ ವಿಷಯ ಇನ್ನೂ ಬಹಿರಂಗವಾಗಿಲ್ಲ, ವಿಷಯ ತಿಳಿಯದೆ ಸುಧಾಕರ್ ಏಕೆ ಪ್ರತಿಕ್ರಿಯಿಸುತ್ತಿದ್ದಾರೆ? ಅವರಿಗೆ ತಪ್ಪುತಸ್ಥ ಭಾವನೆ ಕಾಡುತ್ತಿದೆಯೆ?” ಎಂದು ಅವರು ಕೇಳಿದರು.
ಆಪಾದಿತ ಕೋವಿಡ್ ಹಗರಣದಲ್ಲಿ 7,000 ಕೋಟಿ ರೂಪಾಯಿ ದುರುಪಯೋಗವಾಗಿದೆ ಎನ್ನುವ ವರದಿಗಳ ಕುರಿತು ಕೇಳಿದಾಗ, “ನಾನು ಇನ್ನೂ ವರದಿಯನ್ನು ನೋಡಿಲ್ಲ” ಎಂದು ಅವರು ಹೇಳಿದರು.