ಮುಂಬೈ: ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ರಕ್ಷಿಸಲು ಭಾರತ ಕೈಗೊಂಡಿರುವ ಕ್ರಮಗಳ ಬಗ್ಗೆ ಸಂಸತ್ತಿಗೆ ತಿಳಿಸುವಂತೆ ಶಿವಸೇನೆ (ಯುಬಿಟಿ) ಅಧ್ಯಕ್ಷ ಮತ್ತು ಮಾಜಿ ಸಿಎಂ ಉದ್ಧವ್ ಠಾಕ್ರೆ ಪ್ರಧಾನಿ ಪಿಎಂ ನರೇಂದ್ರ ಮೋದಿಯವರನ್ನು ಕೇಳಿದ್ದಾರೆ.
ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಹಿಂದೂ ಧರ್ಮ ಮತಕ್ಕಾಗಿ ಮಾತ್ರ. ಬಾಂಗ್ಲಾದೇಶದಲ್ಲಿ ಹಿಂದೂಗಳು ಅಪಾಯದಲ್ಲಿದ್ದಾರೆ. ಇಸ್ಕಾನ್ ಕಚೇರಿಗಳಿಗೆ ಬೆಂಕಿ ಹಚ್ಚಲಾಗಿದೆ. ಆದರೆ ಪ್ರಧಾನಿ ಮೋದಿ ಮೌನ ವಹಿಸಿದ್ದಾರೆ. ಒಂದೇ ಫೋನ್ ಕರೆಯಲ್ಲಿ ರಷ್ಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸುವ ಶಕ್ತಿ ಹೊಂದಿರುವ ಪ್ರಧಾನಿಗೆ ಬಾಂಗ್ಲಾದೇಶದ ಹಿಂಸಾಚಾರವನ್ನು ತಡೆಯಲು ಸಾಧ್ಯವಿಲ್ಲವೇ ಎಂದು ಉದ್ಧವ್ ಠಾಕ್ರೆ ಪ್ರಶ್ನಿಸಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಘಟನೆಗಳ ವಿರುದ್ಧ ನಿಲ್ಲುವಂತೆ ಜಗತ್ತಿನಾದ್ಯಂತ ಇರುವ ಎಲ್ಲ ಹಿಂದೂಗಳ ಪರವಾಗಿ ಮೋದಿಯವರನ್ನು ವಿನಂತಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ನಮ್ಮ ದೇಶದಲ್ಲಿ ಏಕತೆಯ ಬಗ್ಗೆ ಭಾಷಣ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಭಾರತೀಯರನ್ನು ಹಿಂಸೆಗೆ ಗುರಿಪಡಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರಧಾನಿ ಮೋದಿ ಅವರು ವಿಶ್ವ ಸುತ್ತುವ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದು, ಸಂಸದರನ್ನು ಭೇಟಿ ಮಾಡಲು ಕೂಡ ಸಮಯ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೋದಿ ಅವರು ಪದೇ ಪದೇ ವಿದೇಶ ಪ್ರವಾಸದಲ್ಲಿರುವುದರಿಂದ ಮಣಿಪುರ ಗಲಭೆ ಮತ್ತು ಬಾಂಗ್ಲಾದೇಶದ ಹಿಂಸಾಚಾರದ ಬಗ್ಗೆ ಅವರಿಗೆ ತಿಳಿದಿಲ್ಲದಿರಬಹುದು ಎಂದು ಅವರು ಹೇಳಿದರು. ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಭಾರತದಲ್ಲಿ ಸುರಕ್ಷಿತವಾಗಿದ್ದಾರೆ. ಆದರೆ ಆ ದೇಶದಲ್ಲಿ ನರಳುತ್ತಿರುವ ಹಿಂದೂಗಳ ಪಾಡೇನು? ಎಂದು ಪ್ರಶ್ನಿಸಿದರು.