ಚೆನ್ನೈ: ತಮಿಳುನಾಡಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕರೂರ್ ಜಿಲ್ಲೆಯ ಕುಳಿತಲೈ ಹೆದ್ದಾರಿಯಲ್ಲಿ ಬುಧವಾರ ಬೆಳಗಿನ ಜಾವ ಬಸ್ ಮತ್ತು ಕಾರು ಡಿಕ್ಕಿ ಹೊಡೆದಿದೆ. ಇದರಿಂದಾಗಿ ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಯಿತು.
ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ಮತ್ತು ಕಾರಿನ ಚಾಲಕ ಸಜೀವ ದಹನವಾಗಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಅವರು ಸುಮಾರು ಒಂದು ಗಂಟೆ ಶ್ರಮಿಸಿದರು. ನಂತರ ಮೃತದೇಹಗಳನ್ನು ಕಾರಿನಿಂದ ಹೊರ ತೆಗೆಯಲಾಯಿತು. ಸತ್ತವರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ ಎಂದು ಪೊಲೀಸರು ಹೇಳಿದರು.
ಮೃತರನ್ನು ಕೊಯಮತ್ತೂರಿನ ಕುಣಿಯಮುತ್ತೂರು ನಿವಾಸಿಗಳು ಎಂದು ಗುರುತಿಸಲಾಗಿದೆ. ಒರಥನಾಡುವಿನ ಕೀಲೈಯೂರ್‌ನಲ್ಲಿರುವ ಅಗ್ನಿವೀರನಾರ್ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ . ಅರಂತಂಗಿಯಿಂದ ತಿರುವೂರಿಗೆ ಹೋಗುತ್ತಿದ್ದ ಸರ್ಕಾರಿ ಬಸ್‌ಗೆ ಕಾರು ಡಿಕ್ಕಿ ಹೊಡೆದಿದೆ. ಅಪಘಾತಕ್ಕೆ ಅತಿವೇಗವೇ ಕಾರಣ ಎಂದು ಆರಂಭದಲ್ಲಿ ತಿಳಿದುಬಂದಿದೆ. ಏತನ್ಮಧ್ಯೆ, ಅಪಘಾತದಿಂದಾಗಿ ಕರೂರ್-ತಿರುಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ. ಕಿಲೋಮೀಟರ್ ಗಟ್ಟಲೆ ವಾಹನಗಳು ನಿಂತಿದ್ದವು.