ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ ಗೇರುಸೊಪ್ಪ–ಸುಳೆಮುರ್ಕಿ ಕ್ರಾಸ್ ಸಮೀಪ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಸಜೀವ ದಹನವಾಗಿರುವ ದುರ್ಘಟನೆ ನಡೆದಿದೆ.
ತಡರಾತ್ರಿ ಸಂಭವಿಸಿರುವ ಸಾಧ್ಯತೆ ಇರುವ ಈ ಘಟನೆಯಲ್ಲಿ, ಕಾರು ಮೊದಲು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಬಳಿಕ ಕಂದಕಕ್ಕೆ ಬಿದ್ದಿರುವುದು ಸ್ಥಳ ಪರಿಶೀಲನೆಯಿಂದ ತಿಳಿದುಬಂದಿದೆ. ಅಪಘಾತದ ಬಳಿಕ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು, ಅದರಲ್ಲಿದ್ದ ಇಬ್ಬರು ಹೊರಬರಲು ಸಾಧ್ಯವಾಗದೇ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಂಕಿಯ ತೀವ್ರತೆಯಿಂದ ಕಾರು ಹಾಗೂ ಮೃತದೇಹಗಳು ಗುರುತು ಸಿಗಲಾರದಷ್ಟು ಸುಟ್ಟು ಕರಕಲಾಗಿವೆ. ಕಾರಿನ ನಂಬರ್ ಪ್ಲೇಟ್ ಕೂಡ ಸಂಪೂರ್ಣವಾಗಿ ಬೆಂಕಿಯಲ್ಲಿ ನಾಶವಾಗಿರುವುದರಿಂದ, ವಾಹನದ ಮಾಲೀಕತ್ವ ಮತ್ತು ಮೃತರ ಗುರುತು ಪತ್ತೆ ಮಾಡುವ ಕಾರ್ಯ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ಘಟನಾ ಸ್ಥಳಕ್ಕೆ ಹೊನ್ನಾವರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಕಾರ್ಯಾಚರಣೆ ನಡೆಸಿದ್ದು, ಕಾರು ಮತ್ತು ಮೃತರ ಗುರುತು ಪತ್ತೆಗಾಗಿ ತನಿಖೆ ಮುಂದುವರಿದಿದೆ. ಅಪಘಾತದ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.
