Home ರಾಜ್ಯ ಉಡುಪಿ ಕುಂದಾಪುರದಲ್ಲಿ ಕಾರ್ಟೂನ್‌ ಪರ್ವ

ಕುಂದಾಪುರದಲ್ಲಿ ಕಾರ್ಟೂನ್‌ ಪರ್ವ

0

ಕುಂದಾಪುರ: 10 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಕಾರ್ಟೂನ್‌ ಹಬ್ಬವು, ಈ ಬಾರಿ ಕುಂದಾಪುರದಲ್ಲಿ ನಡೆಯಿತು.

ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಆಯೋಜಿಸಲಾಗಿದ್ದ ʼಕಾರ್ಟೂನ್‌ ಹಬ್ಬ-2022ʼವನ್ನು ಕ್ಯಾರಿಕೇಚರ್ ಬಿಡಿಸುವ ಮೂಲಕ ಉದ್ಘಾಟಿಸಲಾಯಿತು.
ಈ ವೇಳೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಹೊಂಬಾಳೆ ಫಿಲಂಸ್‌ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್‌ ಗೌಡ ರವರು, ಜೀವನದಲ್ಲಿ ಉಂಟಾಗುವ ನೋವುಗಳನ್ನು ಮರಸಿ ಮೊಗದಲ್ಲಿ ನಗು ತರಿಸುವ ಸಾಮರ್ಥ್ಯ ಕಾರ್ಟೂನ್‌ಗಳಿಗಿವೆ ಎಂದು ಹೇಳಿದರು.
ಕಳೆದ ಹತ್ತು ವರ್ಷಗಳಿಂದ ಕಾರ್ಟೂನ್ ಹಬ್ಬವನ್ನು ಸಂಘಟಿಸುವುದು ಕೂಡ ಒಂದು ಸಾಧನೆಯೇ ಆಗಿದೆ. 10 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಈ ಹಬ್ಬ 100 ವರ್ಷಗಳ ಸಂಭ್ರಮವನ್ನು ಕಾಣುವಂತಾಗಲಿ ಎಂದು ಹಾರೈಸಿದರು.

ವ್ಯಂಗ್ಯ ಚಿತ್ರಕಾರ ಸತೀಶ್‌ ಆಚಾರ್ಯ ಅವರು ʼಗೋ ಕೊರೋನಾ ಗೋʼ ಸಂಚಿಕೆ 2ನ್ನು ಅನಾವರಣಗೊಳಿಸಿ ಮಾತನಾಡಿದ ಹಿರಿಯ ವ್ಯಂಗ್ಯ ಚಿತ್ರಕಾರ ಜೇಮ್ಸ್ ವಾಜ್ ರವರು, ʼಗೋ ಕೊರೋನಾ ಗೋ ಪ್ರಥಮ ಸಂಚಿಕೆ ಕೊರೋನಕ್ಕೆ ಮೊದಲ ಡೋಸ್ ನೀಡಿದರೇ, ಎರಡನೇ ಆವೃತ್ತಿ ಸಣ್ಣ ಸಣ್ಣ ವೈರಸ್‍ಗಳನ್ನು ಪಲಾಯನ ಮಾಡಿಸಿದೆ. ಈ ಎರಡು ಆವೃತ್ತಿಗಳು ವ್ಯಂಗ್ಯಚಿತ್ರಕಾರರ ವೃತ್ತಿ ಬದುಕಿಗೆ ಒಳ್ಳೆಯ ಕೈಪಿಡಿಯಾಗಿದೆ ಎಂದು ಹೇಳಿದರು.
ವ್ಯಂಗ್ಯಚಿತ್ರ ರಚನೆ, ಬಣ್ಣ ಹಾಕುವುದು, ಸಾಂದರ್ಬಿಕೆಯನ್ನು ವಿವರಿಸುವುದು ಸೇರಿದಂತೆ ಅಗತ್ಯ ಮಾಹಿತಿಗಳ ಆಗರವಾಗಿದೆ. ಹೀಗಾಗಿಯೇ ಚಲನಚಿತ್ರಗಳು ಬಿಡುಗಡೆಯಾದ ಬಳಿಕ ಬ್ಲಾಕ್ ಬಸ್ಟರ್. ಆದರೆ, ವ್ಯಂಗ್ಯಚಿತ್ರಗಳ ಸಂಕಲನಗಳು ಪುಸ್ತಕ ಬಿಡುಗಡೆಯ ಮೊದಲೇ ಬ್ಲಾಕ್ ಬಸ್ಟರ್ ಆಗುತ್ತವೆ ಎಂದರು.

ಈ ವೇಳೆ ಬರಹಗಾರ, ಚಿಂತಕ ಶಂಕರ ಕೆಂಚನೂರು ಅವರು ಮಾತನಾಡಿ, ಸತ್ಯವನ್ನು ತಮಾಷೆಯಾಗಿ ಹೇಳುವುದರಿಂದ ಮನ ಮುಟ್ಟುತ್ತದೆ. ವ್ಯಂಗ್ಯ ಚಿತ್ರಗಳ ಮೂಲಕ ಸಮಾಜಕ್ಕೆ ಕಟು ಸತ್ಯವನ್ನು ನೀಡುವ ಕೆಲಸವನ್ನು ಕಾರ್ಟೂನ್‍ಗಳು ಮಾಡುತ್ತಿವೆ. ಇಂದಿನ ಪರಿಸ್ಥಿತಿಯಲ್ಲಿ ಸತ್ಯವನ್ನು ನೇರವಾಗಿ ಹೇಳುವಂತಹ ಪರಿಸ್ಥಿತಿ ಇಲ್ಲಿಲ್ಲ. ವ್ಯಂಗ್ಯ ಚಿತ್ರಗಳಲ್ಲಿನ ಮೊನಚುಗಳಿಂದಾಗಿ ಮಾಧ್ಯಮಗಳಲ್ಲಿ ಅವಕಾಶ ಕಡಿಮೆಯಾಗುತ್ತಿದ್ದರೂ, ಸಾಮಾಜಿಕ ಜಾಲತಾಣಗಳ ಮೂಲಕ ವೇದಿಕೆ ದೊರಕುತ್ತಿರುವುದು ಒಳ್ಳೆಯ ಬೆಳವಣಿಗೆ. ಮಾಡುವ ಕೆಲಸಗಳು ವ್ಯಕ್ತಿಯನ್ನು ಗುರುತಿಸುತ್ತದೆ ಎಂದು ಹೇಳಿದರು. ಕೊರೋನಾ ಕಾಲದ ಕಷ್ಟನಷ್ಟಗಳನ್ನು ದಾಖಲಿಸುವ ಕೆಲಸವನ್ನು ಕನ್ನಡದ ಬರಹಗಾರರು ಮಾಡಿಲ್ಲ ಆ ಕೊರತೆಯನ್ನು ಸತೀಶ್ ಆಚಾರ್ಯ ತಮ್ಮ ಪುಸ್ತಕದ ಮೂಲಕ ತುಂಬಿದ್ದಾರೆ ಎಂದರು.

ಇನ್ನು ಕಾರ್ಯಕ್ರಮವನ್ನುದ್ದೇಶಿಸಿ ನಿವೃತ್ತ ಪ್ರಾಧ್ಯಾಪಕ ಡಾ.ಎಂ.ದಿನೇಶ್ ಹೆಗ್ಡೆ ಮಾತನಾಡಿದ್ದು, ಪ್ರಜಾಪ್ರಭುತ್ವದ ಬೆಳವಣಿಗೆಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದ ಹಾಗೂ ನೀಡುತ್ತಿರುವ ಮಾಧ್ಯಮಗಳಲ್ಲಿ ರೇಖೆಗಳ ಮೂಲಕ ಜನರಿಗೆ ಅಗತ್ಯ ಮಾಹಿತಿಯನ್ನು ಬೇಗನೆ ಹಾಗೂ ನೇರವಾಗಿ ನೀಡುವ ಕಾರ್ಯಗಳು ವ್ಯಂಗ್ಯಚಿತ್ರಗಳಿಂದ ಆಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ವಿನಯ್ ಎ ಪಾಯಸ್, ಚಲನಚಿತ್ರ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ, ವ್ಯಂಗ್ಯಚಿತ್ರಕಾರರಾದ ರಾಮಕೃಷ್ಣ ಹೇರ್ಳೆ, ಚಂದ್ರಶೇಖರ ಶೆಟ್ಟಿ, ಕೇಶವ್ ಸಸಿಹಿತ್ಲು ಉಪಸ್ಥಿತರಿದ್ದರು.

You cannot copy content of this page

Exit mobile version