Home ರಾಜ್ಯ ಶಾಸಕ ಆರಗ ಜ್ಞಾನೇಂದ್ರರಿಗೆ “ಚಡ್ಡಿ ಗ್ಯಾಂಗ್” ಭಯ ; ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದ...

ಶಾಸಕ ಆರಗ ಜ್ಞಾನೇಂದ್ರರಿಗೆ “ಚಡ್ಡಿ ಗ್ಯಾಂಗ್” ಭಯ ; ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದ ಮಾಜಿ ಗೃಹ ಸಚಿವ

0

ಮಲೆನಾಡು ಭಾಗದಲ್ಲಿ ಹೆಚ್ಚುತ್ತಿರುವ ಕಳ್ಳತನ ಹಾಗೂ ಜಾನುವಾರು ಕಳ್ಳತನ ಪ್ರಕರಣಗಳ ಕುರಿತು ವಿಧಾನಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ಶಿವಮೊಗ್ಗ ಮತ್ತು ತೀರ್ಥಹಳ್ಳಿ ಭಾಗಗಳಲ್ಲಿ ಸಂಘಟಿತ ಕಳ್ಳರ ಗ್ಯಾಂಗ್ (ಚೆಡ್ಡಿ ಗ್ಯಾಂಗ್) ಸಕ್ರಿಯರಾಗಿರುವ ಬಗ್ಗೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಆತಂಕ ವ್ಯಕ್ತಪಡಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಈ ವಿಷಯವನ್ನು ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ ಪ್ರಸ್ತಾಪಿಸಿದರು. ಶಿವಮೊಗ್ಗ ಹಾಗೂ ತೀರ್ಥಹಳ್ಳಿ ಭಾಗಗಳಲ್ಲಿ ನಡೆದಿರುವ ಕಳ್ಳತನ ಮತ್ತು ಜಾನುವಾರು ಕಳ್ಳತನ ಪ್ರಕರಣಗಳ ಕುರಿತು ಸರ್ಕಾರ ನೀಡಿರುವ ಉತ್ತರ ಅಪೂರ್ಣವಾಗಿದೆ ಎಂದು ಅವರು ಆಕ್ಷೇಪಿಸಿದರು.

“ಈ ಭಾಗದಲ್ಲಿ ಎಷ್ಟು ಕಳ್ಳತನ ಮತ್ತು ಜಾನುವಾರು ಕಳ್ಳತನ ಪ್ರಕರಣಗಳು ನಡೆದಿವೆ ಎಂಬುದರ ಬಗ್ಗೆ ಸರ್ಕಾರದ ಉತ್ತರದಲ್ಲಿ ಸ್ಪಷ್ಟ ಮಾಹಿತಿ ಇಲ್ಲ. ಉತ್ತರದಲ್ಲೇ ಪ್ರಕರಣಗಳ ವಿವರ ಕಾಣುತ್ತಿಲ್ಲ,” ಎಂದು ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಮಲೆನಾಡು ಭಾಗದಲ್ಲಿ ಹಸುಗಳ ಕಳ್ಳತನ ಪ್ರಕರಣಗಳು ರೈತರಲ್ಲಿ ಆತಂಕ ಸೃಷ್ಟಿಸಿವೆ ಎಂದು ಅವರು ಹೇಳಿದರು. ದರೋಡೆಕೋರರು ಮನೆಗಳಿಗೆ ನುಗ್ಗಿ ಚಿನ್ನಾಭರಣ ಕಳವು ಮಾಡುತ್ತಿರುವ ಘಟನೆಗಳೂ ವರದಿಯಾಗಿವೆ ಎಂದು ಉಲ್ಲೇಖಿಸಿದರು. ಅಲ್ಲದೆ ರೈತರಿಗೆ ಬಂದೂಕಿನ ಪರವಾನಗಿ ನೀಡುವುದನ್ನು ನಿಲ್ಲಿಸಿರುವುದರಿಂದ ಗ್ರಾಮೀಣ ಪ್ರದೇಶದ ಜನರಲ್ಲಿ ಅಸುರಕ್ಷಿತ ಭಾವನೆ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು.

“ತೀರ್ಥಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯಿಂದ ಮಲೆನಾಡಿನ ಸಂಪೂರ್ಣ ಭದ್ರತೆಯನ್ನು ನಿರ್ವಹಿಸುವುದು ಕಷ್ಟವಾಗಿದೆ. ಮುಖ್ಯಮಂತ್ರಿಯವರಂತಹ ಕಾರ್ಯಕ್ರಮಗಳಿಗೆ ಪೊಲೀಸರು ತೆರಳಿದಾಗ ಸ್ಥಳೀಯ ಭದ್ರತೆ ಪ್ರಶ್ನಾರ್ಹವಾಗುತ್ತದೆ,” ಎಂದು ಅವರು ಹೇಳಿದರು.

ಈ ಬಗ್ಗೆ ಉತ್ತರಿಸಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಆತಂಕ ಪಡುವಂತಹ ಪರಿಸ್ಥಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು. ಶಿವಮೊಗ್ಗ ಹಾಗೂ ತೀರ್ಥಹಳ್ಳಿ ಭಾಗಗಳಲ್ಲಿ ಒಟ್ಟು 14 ಕಳ್ಳತನ ಪ್ರಕರಣಗಳು ಮಾತ್ರ ದಾಖಲಾಗಿವೆ ಎಂದು ಹೇಳಿದರು.

ಪ್ರದೇಶದಲ್ಲಿ ಸುಮಾರು ಮೂರು ಸಾವಿರ ಸಿಸಿ ಟಿವಿ ಕ್ಯಾಮೆರಾಗಳು ಅಳವಡಿಸಲಾಗಿದ್ದು, ಹೆದ್ದಾರಿ ಪ್ಯಾಟ್ರೋಲಿಂಗ್ ಸೇರಿದಂತೆ ವಿವಿಧ ಭದ್ರತಾ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದರು.

“ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಸರಿಯಲ್ಲ. ಕಳ್ಳತನ ಪ್ರಕರಣಗಳನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಮುಂದುವರಿಸಲಾಗುತ್ತದೆ,” ಎಂದು ಗೃಹ ಸಚಿವರು ಭರವಸೆ ನೀಡಿದರು.

You cannot copy content of this page

Exit mobile version