Home ಬೆಂಗಳೂರು ಗಾಳಿಪಟ ತರಲು ಹೋಗಿ ಬಾಲಕ ಹಸುನೀಗಿದ ಪ್ರಕರಣ – ಹೆಸ್ಕಾಂಗೆ 10.52 ಲಕ್ಷ ಪರಿಹಾರಕ್ಕೆ ಹೈಕೋರ್ಟ್...

ಗಾಳಿಪಟ ತರಲು ಹೋಗಿ ಬಾಲಕ ಹಸುನೀಗಿದ ಪ್ರಕರಣ – ಹೆಸ್ಕಾಂಗೆ 10.52 ಲಕ್ಷ ಪರಿಹಾರಕ್ಕೆ ಹೈಕೋರ್ಟ್ ಆದೇಶ

0

ಬೆಂಗಳೂರು: ಹೈಟೆನ್ಸನ್ ವಿದ್ಯುತ್ ಲೈನ್‌ಗೆ ಸಿಲುಕಿದ್ದ ಗಾಳಿಪಟವನ್ನು ತೆಗೆಯಲು ಹೋಗಿ ವಿದ್ಯುತ್ ಪ್ರವಹಿಸಿ (Electric shock)‌ ಮೃತಪಟ್ಟ 11 ವರ್ಷದ ಬಾಲಕನ ಕುಟುಂಬಕ್ಕೆ 10.52 ಲಕ್ಷ ರೂ. ಪರಿಹಾರ ಒದಗಿಸುವಂತೆ ಹುಬ್ಬಳ್ಳಿ (Hubli) ವಿದ್ಯುತ್ ಸರಬರಾಜು ಕಂಪನಿಗೆ (ಹೆಸ್ಕಾಂ) ಹೈಕೋರ್ಟ್ (High Court) ನಿರ್ದೇಶನ ನೀಡಿದೆ.ಬೆಳಗಾವಿ ಜಿಲ್ಲೆಯ ಮಾರಿಹಾಳದ ನಿವಾಸಿಗಳಾದ ಮೃತ ಬಾಲಕನ ತಂದೆ ಗುಡದಪ್ಪ ರುದ್ರಪ್ಪ ತಳವಾರ ಹಾಗೂ ತಾಯಿ ರೇಣುಕಾ ಜಿ. ತಳವಾರ ಹೂಡಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರ ನೇತೃತ್ವದ ಧಾರವಾಡ ಏಕಸದಸ್ಯ ಪೀಠ ಈ ತೀರ್ಪು ಪ್ರಕಟಿಸಿದೆ.ಈ ಹಿಂದೆ 2015ರಲ್ಲಿ ‘ಬಾಲಕನ ಸ್ವಯಂ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ’ ಎಂಬ ನೆಲೆಯಲ್ಲಿ ಬೆಳಗಾವಿ ಲೋಕ ಅದಾಲತ್ ಪರಿಹಾರ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದ ಕ್ರಮವನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ಕಂಪನಿ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವಂತಿಲ್ಲ; ಹೈಕೋರ್ಟ್
ಲೋಕ ಅದಾಲತ್‌ನ ಹಿಂದಿನ ಆದೇಶವನ್ನು ತಳ್ಳಿಹಾಕಿರುವ ನ್ಯಾಯಾಲಯ, ಬಾಲಕನೇ ಖುದ್ದು ವಿದ್ಯುತ್ ಕಂಬವನ್ನೇರಿದ್ದ ಎಂಬ ಕಾರಣವನ್ನೊಡ್ಡಿ ಪವರ್ ಕಾರ್ಪೊರೇಷನ್ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.ಸಂಪೂರ್ಣ ಜವಾಬ್ದಾರಿಯ ಕಠಿಣ ತತ್ವದ ಅಡಿ ಬಾಲಕನ ಅಕಾಲಿಕ ಸಾವಿಗೆ ಹೆಸ್ಕಾಂ ಸಂಸ್ಥೆಯೇ ಹಣಕಾಸಿನ ಪರಿಹಾರ ನೀಡಬೇಕು ಎಂದು ಪೀಠ ಸ್ಪಷ್ಟಪಡಿಸಿದೆ. ಮಕ್ಕಳಲ್ಲಿ ಗಾಳಿಪಟ ಹಾರಿಸುವ ಮತ್ತು ಅದರ ಬಗ್ಗೆ ಒಲವು ಹೊಂದುವುದು ಅತ್ಯಂತ ಸಹಜ. ತಂತಿಯಲ್ಲಿ ಸಿಲುಕಿದ ಗಾಳಿಪಟವನ್ನು ಪಡೆಯಲು ಹೋದ ಬಾಲಕ ಹೆಸ್ಕಾಂ ಒಡೆತನದ ಹೈ-ವೋಲ್ವೇಜ್ ವಿದ್ಯುತ್ ಸ್ಪರ್ಶಕ್ಕೆ ಸಿಲುಕಿ ಪ್ರಾಣಬಿಟ್ಟಿರುವುದು ಸ್ಪಷ್ಟವಾದ ಅಂಶವಾಗಿದೆ. ಹೀಗಾಗಿ, ಆ ಬಾಲಕ ಕಂಬವನ್ನು ಹತ್ತಿದ್ದನೇ ಅಥವಾ ಆಕಸ್ಮಿಕವಾಗಿ ಸ್ಪರ್ಶಿಸಿದ್ದನೇ ಎಂಬ ಅಂಶಗಳು ಪರಿಹಾರ ನಿಗದಿಪಡಿಸುವ ಸಂದರ್ಭದಲ್ಲಿ ಅಷ್ಟು ಪ್ರಮುಖವಾಗುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಘಟನೆಯ ಹಿನ್ನೆಲೆ
2012ರ ಸೆಪ್ಟೆಂಬರ್ 11ರಂದು ಜಾನುವಾರುಗಳನ್ನು ಮೇಯಿಸಲು ತೆರಳಿದ್ದ 11 ವರ್ಷದ ಬಾಲಕ ರವಿ ತಳವಾರ, ಹೈಟೆನ್ಸನ್ ವಿದ್ಯುತ್ ತಂತಿಗಳ ಮಧ್ಯೆ ಸಿಲುಕಿದ್ದ ಗಾಳಿಪಟವನ್ನು ಕೈಗೆಳೆದುಕೊಳ್ಳಲು ಪ್ರಯತ್ನಿಸಿದ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದನು.ಈ ದುರ್ಘಟನೆ ಕುರಿತಂತೆ ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಧಿಕೃತ ಎಫ್‌ಐಆರ್ ದಾಖಲಾಗಿತ್ತು. ಮಗನನ್ನು ಕಳೆದುಕೊಂಡ ಪೋಷಕರು ಪರಿಹಾರಕ್ಕಾಗಿ ಹೆಸ್ಕಾಂಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಇಲಾಖೆಯಿಂದ ಯಾವುದೇ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಬೆಳಗಾವಿ ಲೋಕ ಅದಾಲತ್ ಕದ ತಟ್ಟಿದ್ದರು. ಅಲ್ಲಿಯೂ ಸಹ ಅರ್ಜಿ ತಿರಸ್ಕೃತಗೊಂಡ ಬಳಿಕ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

You cannot copy content of this page

Exit mobile version