ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನ ವನಶ್ರೀ ವಸತಿ ಶಾಲೆಯ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿಗೆ ಶಿವಮೊಗ್ಗ ಫಾಸ್ಟ್ ಟ್ರಾಕ್ ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಶುಕ್ರವಾರ ನಡೆದ ವಿಚಾರಣೆಯಲ್ಲಿ ಮಹತ್ವದ ಸಾಕ್ಷಾಧಾರಗಳ ಕೊರತೆಯ ಕಾರಣಕ್ಕೆ ಷರತ್ತುಬದ್ಧ ಜಾಮೀನು ಮಂಜೂರಾಗಿದೆ ಎಂದು ತಿಳಿದು ಬಂದಿದೆ. ವನಶ್ರೀ ವಸತಿ ಶಾಲೆ ಸಂಸ್ಥಾಪಕ ಮುಖ್ಯಸ್ಥ ವನಶ್ರೀ ಮಂಜಪ್ಪಗೆ ನ್ಯಾಯಾಧೀಶೆ ಲತಾರವರು 1 ಲಕ್ಷ ರೂ. ಬಾಂಡ್ ಹಾಗೂ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಅವರನ್ನು ಬಿಡುಗಡೆಗೆ ಆದೇಶಿಸಿದ್ದಾರೆ.
ಮೃತ ವಿದ್ಯಾರ್ಥಿನಿ ತನ್ನ ಮೇಲೆ ದೌರ್ಜನ್ಯ ನಡೆದಿದೆ ಎಂದು ತನ್ನ ಸಹಪಾಠಿ ವಿದ್ಯಾರ್ಥಿಗಳಿಗೆ, ಶಾಲೆಯ ಬೇರಾವುದೇ ಸಿಬ್ಬಂದಿಗಳಿಗೆ ಯಾವುದೇ ವಿಚಾರವನ್ನೂ ಹೇಳಿಲ್ಲ, ಉಳಿದ ಮಕ್ಕಳು ಮೃತರ ತಾಯಿಗೆ ಹೇಳಿದ್ದು ಬಿಟ್ಟರೆ ಬೇರಾವ ಸಾಕ್ಷ್ಯಗಳೂ ಇಲ್ಲ.
ಹಾಗೆಯೇ ವನಶ್ರೀ ಮಂಜಪ್ಪ ಮೃತ ವಿದ್ಯಾರ್ಥಿನಿಯ ಕೈ-ಕಾಲಿಗೆ ಮುಲಾಮು ಹಚ್ಚಿದ್ದರ ಕುರಿತು ಆಕೆಯ ಸಹಪಾಠಿಗಳಿಗೆ ಹೇಳಿದ ಯಾವುದೇ ದಾಖಲೆಗಳಿಲ್ಲ ಎಂದೂ ಆರೋಪಿ ಪರ ವಕೀಲರಾದ ಅಶೋಕ್ ಭಟ್ ತಮ್ಮ ವಾದ ಮಂಡಿಸಿದ್ದಾರೆ.
ಇನ್ನು ಮೃತ ವಿದ್ಯಾರ್ಥಿನಿ ಮತ್ತು ಇನ್ನೋರ್ವ ವಿಧ್ಯಾರ್ಥಿನಿಗೆ ಲೀಟರುಗಟ್ಟಲೆ ನೀರು ಕುಡಿಸಿದ ವಿಚಾರವಾಗಿ, ಆಸ್ಪತ್ರೆಗೆ ಸಾಗಿಸುವಾಗ ನಡೆದ ಶಾಲಾ ಮುಖ್ಯಸ್ಥರ ಅಜಾಗರೂಕತೆ ವಿಚಾರವಾಗಿ ಅಷ್ಟು ಬಲವಾದ ವಾದ ನಡೆಯಲಿಲ್ಲ ಎಂದು ತಿಳಿದು ಬಂದಿದೆ.
ಮೃತ ಬಾಲಕಿಯ ತಾಯಿಯ ದೂರಿನನ್ವಯ ವಸತಿ ಶಾಲಾ ಮುಖ್ಯಸ್ಥರ ವಿರುದ್ಧ ಪೋಕ್ಸೋ ಸೆಕ್ಷನ್ 8, 12, ಅಟ್ರಾಸಿಟಿ ಸೆಕ್ಷನ್ 3, ಐಪಿಸಿ ಸೆಕ್ಷನ್ 504, 506ರ ಅಡಿಯಲ್ಲಿ ದೂರು ದಾಖಲಾಗಿತ್ತು. ಸಧ್ಯ ಬಲವಾದ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಆರೋಪಿ ವನಶ್ರೀ ಮಂಜಪ್ಪನಿಗೆ ಶಿವಮೊಗ್ಗ ಫಾಸ್ಟ್ ಟ್ರಾಕ್ ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.