Home ರಾಜಕೀಯ ಅಭಿಮಾನಿಗಳನ್ನು ತಳ್ಳಿದ ವಿಡಿಯೋ ದೃಶ್ಯ ವೈರಲ್: ನಟ ವಿಜಯ್ ವಿರುದ್ಧ ಪ್ರಕರಣ ದಾಖಲು

ಅಭಿಮಾನಿಗಳನ್ನು ತಳ್ಳಿದ ವಿಡಿಯೋ ದೃಶ್ಯ ವೈರಲ್: ನಟ ವಿಜಯ್ ವಿರುದ್ಧ ಪ್ರಕರಣ ದಾಖಲು

0

ಪ್ರಸಿದ್ಧ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಮಧುರೈನಲ್ಲಿ ನಡೆದ ಟಿವಿಕೆ ಪಕ್ಷದ ಕಾರ್ಯಕ್ರಮದಲ್ಲಿ ತಮ್ಮ ಮೇಲೆ ಹಲ್ಲೆಯಾಗಿದೆ ಎಂದು ಶರತ್‌ಕುಮಾರ್ ಎಂಬ ವ್ಯಕ್ತಿ ದೂರು ದಾಖಲಿಸಿದ್ದಾರೆ.

ನಟನನ್ನು ಭೇಟಿ ಮಾಡಲು ಪ್ರಯತ್ನಿಸಿದಾಗ, ಬೌನ್ಸರ್‌ಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಿಜಯ್ ಮತ್ತು ಅವರ ಬೌನ್ಸರ್‌ಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಆಗಸ್ಟ್ 21ರಂದು ನಡೆದ ಈ ಘಟನೆಯ ವಿಡಿಯೋ ಇತ್ತೀಚೆಗೆ ಹೊರಬಿದ್ದಿದೆ. ಆ ದಿನ ಮಧುರೈನಲ್ಲಿ ಟಿವಿಕೆ ಪಕ್ಷದ ಮಹಾನಾಡು ಸಮಾವೇಶ ನಡೆದಿತ್ತು. ಲಕ್ಷಾಂತರ ಕಾರ್ಯಕರ್ತರು ಮತ್ತು ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ವಿಜಯ್ ವೇದಿಕೆಯ ಮಧ್ಯದಲ್ಲಿದ್ದ ರ್ಯಾಂಪ್ ಮೇಲೆ ನಡೆದುಕೊಂಡು ಅಭಿಮಾನಿಗಳಿಗೆ ಕೈ ಬೀಸುತ್ತಿದ್ದರು. ಆಗ ಅವರನ್ನು ನೋಡಲು ಕೆಲವರು ಅತಿ ಉತ್ಸಾಹ ತೋರಿಸಿ ರ್ಯಾಂಪ್‌ ಮೇಲೆ ಹಾರಿ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದರು. ಆಗ ನಟ ವಿಜಯ್ ಅವರ ಬೌನ್ಸರ್‌ಗಳು ಅವರನ್ನು ತಡೆದು ರ್ಯಾಂಪ್‌ನಿಂದ ಕೆಳಗೆ ತಳ್ಳಿದರು.

ಇದೇ ವೇಳೆ, ವಿಜಯ್ ಅವರ ಬೌನ್ಸರ್‌ಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶರತ್‌ಕುಮಾರ್ ಪೆರಂಬಲೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವರ ದೂರಿನ ಮೇರೆಗೆ ಪೊಲೀಸರು ವಿಜಯ್ ಮತ್ತು ಅವರ ಬೌನ್ಸರ್‌ಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ತಮಿಳುನಾಡಿನಲ್ಲಿ 2026ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ ವಿಜಯ್, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ರಾಜ್ಯಾದ್ಯಂತ ಸಭೆಗಳನ್ನು ನಡೆಸಿ, ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಪ್ರಯತ್ನಿಸುತ್ತಿದ್ದಾರೆ. ಮಧುರೈನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ವಿಜಯ್, ಮುಂಬರುವ ಚುನಾವಣೆಯಲ್ಲಿ ಟಿವಿಕೆ ಮತ್ತು ಡಿಎಂಕೆ ನಡುವೆಯೇ ಪ್ರಮುಖ ಸ್ಪರ್ಧೆ ಇರುತ್ತದೆ. ಬಿಜೆಪಿ ರಾಜ್ಯದಲ್ಲಿ ಕಾಲಿಡಲಾಗದು ಎಂದು ಟೀಕಿಸಿದರು.

You cannot copy content of this page

Exit mobile version