ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವೆ ಸಂಭವಿಸಬಹುದಾದ ಪರಮಾಣು ಯುದ್ಧವನ್ನು ನಿಲ್ಲಿಸಿದ್ದು ತಾವೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ. ಅಲ್ಲದೆ, ಭಾರತದ ರಷ್ಯಾ ಜೊತೆಗಿನ ವಾಣಿಜ್ಯ ಸಂಬಂಧಗಳ ಹಿನ್ನೆಲೆಯಲ್ಲಿ ಅಮೆರಿಕವು ಭಾರತೀಯ ಸರಕುಗಳ ಮೇಲೆ ವಿಧಿಸಿರುವ ಶೇ. 50ರಷ್ಟು ಹೆಚ್ಚುವರಿ ಸುಂಕ ನೀತಿಯು ಬುಧವಾರದಿಂದ (ಆಗಸ್ಟ್ 27) ಜಾರಿಗೆ ಬಂದಿದೆ.
ಶ್ವೇತಭವನದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡಿದ ಟ್ರಂಪ್, “ನಾನು ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದೆ. ‘ನಿಮ್ಮ ಮತ್ತು ಪಾಕಿಸ್ತಾನದ ನಡುವೆ ಏನಾಗುತ್ತಿದೆ?’ ಎಂದು ಪ್ರಶ್ನಿಸಿದೆ. ಇದೇ ವೇಳೆ ಪಾಕಿಸ್ತಾನದೊಂದಿಗೂ ಮಾತನಾಡಿದ್ದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ನಿರಂತರ ದ್ವೇಷವು ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ ಮತ್ತು ವ್ಯಾಪಾರ ಒಪ್ಪಂದಗಳನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂದು ನಾನು ಎರಡೂ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದೆ,” ಎಂದು ಹೇಳಿದರು.
“ನೀವಿಬ್ಬರೂ ಅಣುಬಾಂಬ್ ಯುದ್ಧಕ್ಕೆ ಸಿದ್ಧರಾಗುತ್ತಿದ್ದೀರಿ. ಯುದ್ಧದಲ್ಲಿ ಎರಡೂ ರಾಷ್ಟ್ರಗಳು ಅಂತ್ಯಗೊಳ್ಳುತ್ತವೆ. ಆದ್ದರಿಂದ ನಾನು ನಿಮ್ಮೊಂದಿಗೆ ಯಾವುದೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಕೂಡಲೇ ಕದನ ವಿರಾಮಕ್ಕೆ ಒಪ್ಪದಿದ್ದರೆ ನಿಮ್ಮ ಮೇಲೆ ಹೆಚ್ಚಿನ ತೆರಿಗೆ ವಿಧಿಸಲಾಗುವುದು,” ಎಂದು ತಿಳಿಸಿದ್ದೆ. ಈ ಬೆದರಿಕೆ ಹಾಕಿದ ಕೇವಲ ಐದು ಗಂಟೆಗಳಲ್ಲಿ ಎಲ್ಲವೂ ಮುಗಿದುಹೋಯಿತು. “ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಸಮಯದಲ್ಲಿ ನಾವು 7 ಅಥವಾ ಅದಕ್ಕಿಂತಲೂ ಹೆಚ್ಚು ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿದ್ದೇವೆ. ಯುದ್ಧವನ್ನು ತಡೆಯಲು ವ್ಯಾಪಾರ ಒಪ್ಪಂದದ ಒತ್ತಡ ಹೇರಲಾಗಿತ್ತು ಮತ್ತು ಕೊನೆಗೂ ನಾವು ಯುದ್ಧವನ್ನು ನಿಲ್ಲಿಸಿದೆವು,” ಎಂದು ಟ್ರಂಪ್ ಹೇಳಿದ್ದಾರೆ.
ಭಾರತಕ್ಕೆ ಅಮೆರಿಕದ ತೆರಿಗೆ ಶಾಕ್
ರಷ್ಯಾದಿಂದ ಇಂಧನ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿರುವ ಕಾರಣಕ್ಕಾಗಿ ಭಾರತದ ಮೇಲೆ ದಂಡ ವಿಧಿಸಲಾಗುತ್ತಿದೆ ಎಂದು ಟ್ರಂಪ್ ಆಗಸ್ಟ್ 6ರಂದು ಘೋಷಿಸಿದ್ದರು. ಮೊದಲೇ ಜಾರಿಯಲ್ಲಿದ್ದ ಶೇ. 25ರಷ್ಟು ಸುಂಕಕ್ಕೆ ಹೆಚ್ಚುವರಿಯಾಗಿ ಶೇ. 25ರಷ್ಟು ದಂಡ ವಿಧಿಸಲಾಗಿದ್ದು, ಒಟ್ಟು ಶೇ. 50ರಷ್ಟು ಆಮದು ತೆರಿಗೆ ಬುಧವಾರದಿಂದ ಜಾರಿಯಾಗಿದೆ. ಈ ಸುಂಕ ನೀತಿಯು ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಹಲವು ಸರಕುಗಳ ಮೇಲೆ ಪರಿಣಾಮ ಬೀರಲಿದೆ.