ದಕ್ಷಿಣ ಕನ್ನಡ: ಹಿಂದೂ ಮತ್ತು ಕ್ರೈಸ್ತ ಸಮುದಾಯಗಳ ನಡುವೆ ದ್ವೇಷ ಪ್ರಚೋದಿಸುವಂತಹ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ವಸಂತ್ ಗಿಳಿಯಾರ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಭಾರತಿಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 196(1)(a) ಮತ್ತು 353(2) ಅಡಿಯಲ್ಲಿ ಈ ಪ್ರಕರಣವನ್ನು ದಾಖಲಿಸಲಾಗಿದೆ.
ಆಗಸ್ಟ್ 24ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ವಸಂತ್ ಗಿಳಿಯಾರ್ ಈ ಹೇಳಿಕೆ ನೀಡಿದ್ದರು. ಧರ್ಮಸ್ಥಳ ಮತ್ತು ಬೆಳ್ತಂಗಡಿ ಪ್ರದೇಶಗಳಲ್ಲಿ ಕ್ರೈಸ್ತ ಮಿಷನರಿಗಳ ಪ್ರಭಾವದಿಂದಾಗಿ ಹಿಂದೂಗಳ ‘ತುಳಸಿ ಕಟ್ಟೆ’ಯನ್ನು ಒಡೆದು, ಅದರ ಬದಲಾಗಿ ಶಿಲುಬೆಯನ್ನು ನೀಡಲಾಗಿತ್ತು ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದ್ದರು. ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ಯ ಮೂಲಕ ಮತ್ತೆ ತುಳಸಿ ಕಟ್ಟೆಗಳು ಮನೆಗಳ ಅಂಗಳದಲ್ಲಿ ನಿಲ್ಲುವಂತಾಯಿತು ಎಂದೂ ವಸಂತ್ ಗಿಳಿಯಾರ್ ಹೇಳಿಕೆ ನೀಡಿದ್ದರು.
ವಸಂತ್ ಗಿಳಿಯಾರ್ ಅವರ ಈ ಹೇಳಿಕೆಗಳ ವಿರುದ್ಧ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ ಲಾಯಿಲ ಅವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರು. ಅವರ ದೂರಿನ ಆಧಾರದ ಮೇಲೆ ಪೊಲೀಸರು ಇದೀಗ ವಸಂತ್ ಗಿಳಿಯಾರ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.