ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ತುಮಕೂರಿನ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಹಾಗೂ ಬಿಜೆಪಿ ಸಾಮಾಜಿಕ ಜಾಲತಾಣದ ನಿರ್ವಾಹಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೇವ್ ಗುತ್ತೇದಾರ್ ನೀಡಿದ ದೂರಿನನ್ವಯ, ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಈ ಎಫ್‌ಐಆರ್ ದಾಖಲಿಸಲಾಗಿದೆ.
ದೂರಿನಲ್ಲೇನಿದೆ?
ಸಚಿವರಿಗೆ ಯಾವುದೇ ಸಂಬಂಧವಿಲ್ಲದ ಕ್ರೀಡಾಪಟುವೊಬ್ಬರ ವಿಡಿಯೋವನ್ನು ಬಳಸಿಕೊಂಡು, ಅದು ಸಚಿವರಿಗೆ ಸಂಬಂಧಿಸಿದ್ದು ಎಂದು ಬಿಂಬಿಸಿ ವ್ಯವಸ್ಥಿತವಾಗಿ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಈ ಮೂಲಕ ಅವರ ವ್ಯಕ್ತಿತ್ವಕ್ಕೆ ಕುಂದು ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಾಮಾಜಿಕ ಜಾಲತಾಣದ ಪೇಜ್‌ಗಳಲ್ಲಿ ಸಚಿವರನ್ನು “ಪಕ್ಕಾ ಲೋಕಲ್ ರೌಡಿ”, “ಟ್ವೀಟ್ ಶೂರ”, “ಅಪ್ಪನ ಹೆಸರಲ್ಲಿ ಸಚಿವನಾದವ” ಎಂದು ಕೀಳು ಮಟ್ಟದ ಪದಗಳಿಂದ ನಿಂದಿಸಲಾಗಿದೆ. ಅಲ್ಲದೆ, “ಈ ಅಪ್ಪ-ಮಗನ ವರ್ತನೆಯಿಂದ ಉತ್ತರ ಕರ್ನಾಟಕ ಹಿಂದುಳಿದಿದೆ” ಎಂದು ಬಿಂಬಿಸುವ ಮೂಲಕ ಪ್ರಾದೇಶಿಕ ಅಸಮಾನತೆ ಮತ್ತು ದ್ವೇಷ ಭಾವನೆ ಬಿತ್ತಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ದೂರಿನ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿರುವ ಕಲಬುರಗಿ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಶಕುಂತಲಾ ನಟರಾಜ್ ಅವರಿಗೆ ನೋಟಿಸ್ ನೀಡಿದ್ದು, ಜನವರಿ 16 ರಂದು ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ.
