ದೇಶದಲ್ಲಿ ಶೇ. 100ರಷ್ಟು ವಿದ್ಯುದೀಕರಣ ಸಾಧಿಸಲಾಗಿದೆ ಎಂಬ ಕೇಂದ್ರ ಸರ್ಕಾರದ ವಾದದಲ್ಲಿ ಹುರುಳಿಲ್ಲ ಎಂದು ಮಹಾಲೇಖಪಾಲರ (CAG) ವರದಿ ಸ್ಪಷ್ಟಪಡಿಸಿದೆ. ಗ್ರಾಮೀಣ ವಿದ್ಯುರೀಕರಣಕ್ಕಾಗಿ ಜಾರಿಗೆ ತಂದ ‘ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ’ (DDUGJY) ಮತ್ತು ‘ಸೌಭಾಗ್ಯ’ ಯೋಜನೆಗಳಲ್ಲಿ ಹಲವು ಲೋಪಗಳಿವೆ ಎಂದು ವರದಿ ಎತ್ತಿ ತೋರಿಸಿದೆ.
ಆರಂಭದಲ್ಲಿ ದೇಶದ 3 ಕೋಟಿ ಮನೆಗಳಿಗೆ ವಿದ್ಯುತ್ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಆದರೆ, 2019ರ ಮಾರ್ಚ್ ವೇಳೆಗೆ ಶೇ. 100ರಷ್ಟು ಸಾಧನೆ ಮಾಡಿದ್ದೇವೆ ಎಂದು ತೋರಿಸಿಕೊಳ್ಳಲು, ಈ ಗುರಿಯನ್ನು 2.48 ಕೋಟಿ ಮನೆಗಳಿಗೆ ಇಳಿಸಲಾಗಿದೆ ಎಂದು ಸಿಎಜಿ ಆಕ್ಷೇಪಿಸಿದೆ. ಅಲ್ಲದೆ, ಹೊಸದಾಗಿ ನಿರ್ಮಿಸಲಾದ ಮನೆಗಳನ್ನು ಈ ಲೆಕ್ಕಕ್ಕೆ ಪರಿಗಣಿಸಿಲ್ಲ.
ಕೇಂದ್ರ ಸರ್ಕಾರವು ಒಟ್ಟು 2.62 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾಗಿ ಹೇಳಿಕೊಳ್ಳುತ್ತಿದೆ. ಆದರೆ, ವಾಸ್ತವದಲ್ಲಿ ‘ಸೌಭಾಗ್ಯ’ ಯೋಜನೆಯಡಿ ವಿದ್ಯುತ್ ಪಡೆದಿದ್ದು 1.51 ಕೋಟಿ ಮನೆಗಳು ಮಾತ್ರ. ಉಳಿದವು ಹಳೆಯ ಯೋಜನೆಗಳು ಮತ್ತು ರಾಜ್ಯ ಸರ್ಕಾರಗಳ ಗ್ರಾಮೀಣ ವಿದ್ಯುರೀಕರಣ ಯೋಜನೆಗಳ ಅಡಿಯಲ್ಲಿ ನಡೆದ ಕೆಲಸಗಳು. ಹೀಗೆ ರಾಜ್ಯಗಳ ಸಾಧನೆಯನ್ನೂ ಸೇರಿಸಿ ಕೇಂದ್ರವು ತನ್ನ ಬೆನ್ನು ತಟ್ಟಿಕೊಂಡಿದೆ ಎಂದು ವರದಿ ಹೇಳಿದೆ.
2019ರ ಮಾರ್ಚ್ ವೇಳೆಗೆ 7 ರಾಜ್ಯಗಳಲ್ಲಿ ಇನ್ನೂ 19 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ತಲುಪಿರಲಿಲ್ಲ. ಅಸ್ಸಾಂ, ಛತ್ತೀಸ್‌ಗಢ, ಕರ್ನಾಟಕ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಗಡುವು ವಿಸ್ತರಣೆಯನ್ನು ಕೋರಿದ್ದವು. 2020ರವರೆಗೆ ಸಮಯ ವಿಸ್ತರಿಸಿದರೂ, ನಿರೀಕ್ಷಿತ ಗುರಿ ಸಾಧಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ.
ಯೋಜನೆಗಳ ಜಾರಿಯಲ್ಲಿ ಭಾರೀ ವಿಳಂಬವಾಗಿದೆ. 24 ರಾಜ್ಯಗಳಲ್ಲಿ ಶೇ. 81ರಷ್ಟು ಪ್ರಾಜೆಕ್ಟ್‌ಗಳ ಕೆಲಸ ಆರಂಭಿಸುವುದೇ ತಡವಾಗಿದೆ. ಇದಲ್ಲದೆ, ಗುತ್ತಿಗೆದಾರರು ಒಂದೇ ಕೆಲಸಕ್ಕೆ ಎರಡು ಯೋಜನೆಗಳ ಅಡಿಯಲ್ಲಿ (ಸೌಭಾಗ್ಯ ಮತ್ತು DDUGJY) ಬಿಲ್ ಸಲ್ಲಿಸಿ ಹಣ ಪಡೆದಿದ್ದಾರೆ. ಸುಮಾರು 7.53 ಕೋಟಿ ರೂ.ಗಳಷ್ಟು ಮೊತ್ತವನ್ನು ಹೀಗೆ ‘ಡಬಲ್ ಬಿಲ್’ ಮಾಡಲಾಗಿದೆ ಎಂದು ಸಿಎಜಿ ಪತ್ತೆಹಚ್ಚಿದೆ.
