ಶ್ರೀನಗರ: ಅಮೆರಿಕ ಮತ್ತು ಇಸ್ರೇಲ್ ಪಡೆಗಳ ದಾಳಿಯಲ್ಲಿ ಇರಾನ್ ನಾಯಕ ಅಲಿ ಖಮೇನಿ ಹತರಾದ ವಿಷಯವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿಭಟನೆಗಳು ತೀವ್ರಗೊಂಡಿವೆ. ಬುಧವಾರ ಶ್ರೀನಗರದಲ್ಲಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಪಾಲ್ಗೊಂಡಿದ್ದರು.
ಪ್ರತಿಭಟನೆಯ ಸಂದರ್ಭದಲ್ಲಿ ಮೆಹಬೂಬಾ ಮುಫ್ತಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾವಚಿತ್ರವಿರುವ ಪೋಸ್ಟರ್‌ಗಳಿಗೆ ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ವಿಶೇಷವೆಂದರೆ, ಆ ಪೋಸ್ಟರ್‌ನಲ್ಲಿ 2019 ರಲ್ಲಿ ನಿಗೂಢವಾಗಿ ಮೃತಪಟ್ಟಿದ್ದ ಅಮೆರಿಕದ ಫೈನಾನ್ಷಿಯರ್ ಜೆಫ್ರಿ ಎಪ್ಸ್ಟೀನ್ ಫೋಟೋ ಕೂಡ ಇತ್ತು.
ಈ ಸಂದರ್ಭದಲ್ಲಿ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗಿದ ಅವರು, ಖಮೇನಿ ಅವರಿಗೆ ಬೆಂಬಲ ಸೂಚಿಸಿದರು. ನಂತರ ಈ ಪ್ರತಿಭಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಮುಫ್ತಿ, “ನಿಮಗೆ ನ್ಯಾಯ ಸಿಗುವವರೆಗೆ ಶಾಂತಿಯುತವಾಗಿ ಹೋರಾಡುವವರ ಪರವಾಗಿ ನಾನು ಸದಾ ಇರುತ್ತೇನೆ” ಎಂದು ಇರಾನ್ ಪರವಾಗಿ ಪೋಸ್ಟ್ ಮಾಡಿದ್ದಾರೆ.
ಇದೇ ವೇಳೆ ಭಾರತ ಸರ್ಕಾರ ಮತ್ತು ಜಮ್ಮು ಕಾಶ್ಮೀರ ಆಡಳಿತದ ಮೌನವನ್ನು ಅವರು ಟೀಕಿಸಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವವರನ್ನು ಅಪರಾಧಿಗಳಂತೆ ನೋಡಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.
https://x.com/MehboobaMufti/status/2029100091064356971?s=20
