Home ವಿದೇಶ ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ನೌಕೆಯ ಮೇಲೆ ಅಮೆರಿಕ ದಾಳಿ: 101 ಮಂದಿ ನಾಪತ್ತೆ

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ನೌಕೆಯ ಮೇಲೆ ಅಮೆರಿಕ ದಾಳಿ: 101 ಮಂದಿ ನಾಪತ್ತೆ

0

ಇರಾನ್-ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧವು ಈಗ ಶ್ರೀಲಂಕಾ ಕರಾವಳಿಯವರೆಗೂ ವ್ಯಾಪಿಸಿ ಅತ್ಯಂತ ಭೀಕರ ರೂಪ ತಾಳಿದೆ. ಬುಧವಾರ ಮುಂಜಾನೆ ಶ್ರೀಲಂಕಾದ ದಕ್ಷಿಣ ಕರಾವಳಿಯ ಗಾಲೆ ಪ್ರದೇಶದಿಂದ ಸುಮಾರು 40 ನಾಟಿಕಲ್ ಮೈಲಿ ದೂರದಲ್ಲಿ ಇರಾನ್‌ನ ‘ಐರಿಸ್ ಡೇನಾ’ ಎಂಬ ಯುದ್ಧನೌಕೆಯ ಮೇಲೆ ಅಮೆರಿಕದ ಜಲಂತರ್ಗಾಮಿಯೊಂದು ಕ್ಷಿಪಣಿ ದಾಳಿ ನಡೆಸಿದೆ. ಈ ಭೀಕರ ದಾಳಿಯ ಸಮಯದಲ್ಲಿ ನೌಕೆಯಲ್ಲಿ ಸುಮಾರು 180 ಮಂದಿ ಸಿಬ್ಬಂದಿ ಇದ್ದರು ಎಂದು ವರದಿಯಾಗಿದೆ.

ಈ ದಾಳಿಯಿಂದಾಗಿ ನೌಕೆಯಲ್ಲಿದ್ದ 101 ಮಂದಿ ಸಮುದ್ರದಲ್ಲಿ ನಾಪತ್ತೆಯಾಗಿದ್ದು, 78 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ. ಘಟನೆ ನಡೆದ ತಕ್ಷಣ ನೌಕೆಯಿಂದ ಬಂದ ತುರ್ತು ಕರೆಗೆ (Emergency Call) ಸ್ಪಂದಿಸಿದ ಶ್ರೀಲಂಕಾ ನೌಕಾಪಡೆಯು ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ. ಇದುವರೆಗೆ ಸುಮಾರು 32 ಮಂದಿಯನ್ನು ರಕ್ಷಿಸಲಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಕರಾವಳಿ ತೀರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ವಿಷಯವನ್ನು ಶ್ರೀಲಂಕಾ ನೌಕಾಪಡೆ ಮತ್ತು ರಕ್ಷಣಾ ಸಚಿವಾಲಯ ಅಧಿಕೃತವಾಗಿ ದೃಢಪಡಿಸಿವೆ.

ಶ್ರೀಲಂಕಾ ವಿದೇಶಾಂಗ ಸಚಿವ ಹೆರಾತ್ ಅವರು ಈ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲಾ ಸಹಾಯ ಮತ್ತು ರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. ಈ ದಾಳಿಯ ಹಿನ್ನೆಲೆಯಲ್ಲಿ ಶ್ರೀಲಂಕಾ ತನ್ನ ಕರಾವಳಿ ತೀರದುದ್ದಕ್ಕೂ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದೆ. ಇದೇ ವೇಳೆ ಇರಾನ್, ಅಮೆರಿಕ ಮತ್ತು ಇಸ್ರೇಲ್ ದೇಶಗಳು ತಕ್ಷಣವೇ ಯುದ್ಧವನ್ನು ನಿಲ್ಲಿಸಿ ಶಾಂತಿ ಕಾಪಾಡಬೇಕೆಂದು ಶ್ರೀಲಂಕಾ ಸರ್ಕಾರ ಮನವಿ ಮಾಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

You cannot copy content of this page

Exit mobile version