ದೆಹಲಿ: ಗಿಗ್ ಕಾರ್ಮಿಕರಿಗೆ (Gig workers) ಬಹುದೊಡ್ಡ ನಿರಾಳತೆ ಸಿಕ್ಕಿದೆ. ಗ್ರಾಹಕರಿಗೆ ’10 ನಿಮಿಷಗಳಲ್ಲಿ ಡೆಲಿವರಿ’ ಮಾಡಬೇಕೆಂಬ ಒತ್ತಡದ ನಿಯಮವನ್ನು ಕೈಬಿಡಲು ಕ್ವಿಕ್ ಕಾಮರ್ಸ್ ಕಂಪನಿಗಳು ಅಂತಿಮವಾಗಿ ಒಪ್ಪಿಕೊಂಡಿವೆ.
ಈ ನಿಯಮದ ವಿರುದ್ಧ ಇತ್ತೀಚೆಗೆ ಗಿಗ್ ಕಾರ್ಮಿಕರು ದೇಶಾದ್ಯಂತ ಮುಷ್ಕರ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದೆ. ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರು ಮಂಗಳವಾರ ಬ್ಲಿಂಕಿಟ್, ಜೆಪ್ಟೋ, ಝೊಮ್ಯಾಟೊ ಮತ್ತು ಸ್ವಿಗ್ಗಿ ಸೇರಿದಂತೆ ಪ್ರಮುಖ ಡೆಲಿವರಿ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ, 10 ನಿಮಿಷಗಳ ಕಡ್ಡಾಯ ಡೆಲಿವರಿ ನಿಯಮವನ್ನು ತೆಗೆದುಹಾಕುವಂತೆ ಕಂಪನಿಗಳನ್ನು ಒಪ್ಪಿಸಿದ್ದಾರೆ.
ಬ್ಲಿಂಕಿಟ್ (Blinkit) ಈಗಾಗಲೇ ತನ್ನ ಬ್ರ್ಯಾಂಡಿಂಗ್‌ನಿಂದ ಈ ನಿಯಮವನ್ನು ಬದಲಾಯಿಸಿದೆ. “10 ನಿಮಿಷಗಳಲ್ಲಿ 10,000ಕ್ಕೂ ಹೆಚ್ಚು ಉತ್ಪನ್ನಗಳು” ಎಂಬ ಹಳೆಯ ಟ್ಯಾಗ್‌ಲೈನ್ ಬದಲಿಗೆ, “ನಿಮ್ಮ ಮನೆಬಾಗಿಲಿಗೆ 30,000ಕ್ಕೂ ಹೆಚ್ಚು ಉತ್ಪನ್ನಗಳು” ಎಂದು ಬದಲಾಯಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಇತರ ಕಂಪನಿಗಳೂ ಇದನ್ನೇ ಅನುಸರಿಸಲಿವೆ.
ಗಿಗ್ ಕಾರ್ಮಿಕರಿಗೆ ಸುರಕ್ಷಿತ ಮತ್ತು ಉತ್ತಮ ಕೆಲಸದ ವಾತಾವರಣ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ. ಕಠಿಣ ಹವಾಮಾನ ಮತ್ತು ತೀವ್ರ ಒತ್ತಡದ ನಡುವೆ ಕೆಲಸ ಮಾಡುವ ಡೆಲಿವರಿ ಬಾಯ್ಗಳ ಸಂಕಷ್ಟದ ಬಗ್ಗೆ ‘ಆಪ್’ (AAP) ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರು ಇತ್ತೀಚಿನ ಸಂಸತ್ತಿನ ಅಧಿವೇಶನದಲ್ಲಿ ಧ್ವನಿ ಎತ್ತಿದ್ದರು.
ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಗೌರವ, ರಕ್ಷಣೆ ಮತ್ತು ನ್ಯಾಯಯುತ ವೇತನ ಸಿಗುವಂತಾಗಲು ಕ್ವಿಕ್ ಕಾಮರ್ಸ್ ಸಂಸ್ಥೆಗಳ ಮೇಲೆ ಸರ್ಕಾರ ನಿಯಂತ್ರಣ ಹೇರಬೇಕು ಎಂದು ಚಡ್ಡಾ ಮನವಿ ಮಾಡಿದ್ದರು.
